ಕೋಲ್ಕತ್ತಾ: ಪರೀಕ್ಷೆ ಬರೆಯಲು ಹೋಗುವಾಗ ಅಪಘಾತವಾಗಿ ಯುವಕನೊಬ್ಬ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೂ, ಛಲ ಬಿಡದೇ ಆಸ್ಪತ್ರೆಯ ಬೆಡ್ ನಲ್ಲೇ ಕೂತು ಪರೀಕ್ಷೆ ಬರೆದಿರುವ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದಿದೆ.
ಅಲಿನಗರ ಯಾಸಿನ್ ಮಲಿಕ್ ಪ್ರೌಢಶಾಲೆಯ 15 ವರ್ಷದ ಸಂದೀಪ್ ಮಾಝಿ ಪರೀಕ್ಷೆ ಬರೆಯಲು ತನ್ನ ತಂದೆಯ ಬೈಕ್ ನಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾರೆ. ಇದೇ ವೇಳೆ ಸಂದೀಪ್ ಅವರ ಬೈಕ್ ಗೆ ಮತ್ತೊಂದು ಬೈಕ್ ವೇಗವಾಗಿ ಬಂದು ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಸಂದೀಪ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ:
ಆಸ್ಪತ್ರೆಯಲ್ಲಿ ಸಂದೀಪ್ ಅವರ ತಲೆಗೆ 8 ಹೊಲಿಗೆಗಳನ್ನು ಹಾಕಿದ್ದಾರೆ. ಇಷ್ಟೆಲ್ಲಾ ಆದರೂ ಸಂದೀಪ್ ಮಾತ್ರ ಪೊಲೀಸರ ಬಳಿ ತನಗೆ ಪರೀಕ್ಷೆ ಬರೆಯಬೇಕು. ಪರೀಕ್ಷಾ ಸೆಂಟರ್ ಗೆ ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಯ ಮನವಿಗೆ ಪೊಲೀಸರು ವಾಹನ ವ್ಯವಸ್ಥೆಯನ್ನು ಮಾಡಿ ಪರೀಕ್ಷಾ ಸೆಂಟರ್ ಗೆ ಕಳುಹಿಸಿ ಕೊಟ್ಟಿದ್ದಾರೆ.
ಆದರೆ ಗಾಯ ಮಾಡಿಕೊಂಡಿದ್ದ ಸಂದೀಪ್ ಪರೀಕ್ಷೆ ಬರೆಯುವಾಗ ನೋವಿನಿಂದ ಪ್ರಜ್ಞೆ ತಪ್ಪಿದ್ದಾರೆ. ಆ ಬಳಿಕ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂದೀಪ್ ಅವರ ಛಲವನ್ನು ನೋಡಿ ಹೂಗ್ಲಿಯ ಕೃಷಿ ಮುಖ್ಯಸ್ಥರಾಗಿರುವ ಮನೋಜ್ ಚಕ್ರವರ್ತಿ ಸಂಬಂಧಪಟ್ಟ ಶೈಕ್ಷಣಿಕ ಅಧಿಕಾರಿಗಳ ಜೊತೆ ಮಾತನಾಡಿ ಆಸ್ಪತ್ರೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.
ಆಸ್ಪತ್ರೆಯ ಬೆಡ್ ನಲ್ಲೇ ಕೂತು ಸಂದೀಪ್ ತಮ್ಮ ಪರೀಕ್ಷೆಯನ್ನು ಬರೆದಿದ್ದಾರೆ. ಅವರ ಛಲವನ್ನು ನೋಡಿ ಹತ್ತಾರು ಮಂದಿ ಅವರನ್ನು ಶ್ಲಾಘಿಸಿದ್ದಾರೆ.