ಮುಂಬೈ: ನವೆಂಬರ್ 13 2014. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮರೆಯಲಾಗದ ದಿನ. ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರು ಅಂದು ದುಸ್ವಪ್ನವನ್ನೇ ಕಂಡದ್ದರು. ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮನಸೋ ಇಚ್ಛೆ ಚೆಂಡನ್ನು ದಂಡಿಸುತ್ತಿದ್ದರೆ, ಲಂಕಾ ಫೀಲ್ಡರ್ ಗಳು ಚೆಂಡಿನ ಹಿಂದೆ ಓಡಿ ಓಡಿ ಸುಸ್ತಾಗಿದ್ದರು. ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ ಮೈದಾನ ಅಂದು ಐತಿಹಾಸಿಕ ಏಕದಿನ ಇನ್ನಿಂಗ್ಸ್ ಒಂದಕ್ಕೆ ಸಾಕ್ಷಿಯಾಗಿತ್ತು. ಯಾಕೆಂದರೆ ಅಂದು ರೋಹಿತ್ ಶರ್ಮಾ ಒಬ್ಬರೇ ಬಾರಿಸಿದ್ದು ಬರೋಬ್ಬರಿ 264 ರನ್ ಗಳು!
ಈ ಪಂದ್ಯ ನಡೆದು ಇಂದಿಗೆ ಏಳು ವರ್ಷಗಳಾಗಿದೆ. ವಿಶೇಷ ಏನೆಂದರೆ ಅಂದು ಲಂಕಾ ಸಂಪೂರ್ಣ ತಂಡ ಗಳಿಸಿದ್ದು ಕೇವಲ 251 ರನ್. ಅಂದರೆ ರೋಹಿತ್ ಒಬ್ಬನ ಗಳಿಕೆಗಿಂತ ಕಡಿಮೆ!
ಇದನ್ನೂ ಓದಿ:ವಿರಾಟ್ ಕೊಹ್ಲಿ ಮೂರು ಮಾದರಿಯ ನಾಯಕತ್ವ ತ್ಯಜಿಸಬೇಕು: ಶಾಹಿದ್ ಅಫ್ರಿದಿ
ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ ಗಳಸಿದ್ದು 404 ರನ್. ಕಳೆದುಕೊಂಡಿದ್ದು ನಾಲ್ಕು ವಿಕೆಟ್. ಅಜಿಂಕ್ಯ ರಹಾನೆ ಜೊತೆ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಆರಂಭದಲ್ಲಿ ಲಯ ಕಂಡುಕೊಳ್ಳಲು ಕಷ್ಟಪಟ್ಟಿದ್ದರು. 16 ಎಸೆತಗಳಲ್ಲಿ 4 ರನ್ ಗಳಿಸಿದ್ದ ವೇಳೆ ರೋಹಿತ್ ನೀಡಿದ ಕ್ಯಾಚನ್ನು ಲಂಕಾದ ತಿಸ್ಸರ ಪಿರೇರಾ ಕೈಚೆಲ್ಲಿದರು. ಈ ಜೀವದಾನ ಪಡೆದ ರೋಹಿತ್ ನಂತರ ಪಿರೇರಾಗೆ ತಪ್ಪಿನ ಅರಿವಾಗುವಂತೆ ಘರ್ಜಿಸಿದರು. ನಂತರ ಈಡನ್ ಅಂಗಳದಲ್ಲಿ ನಡೆದಿದ್ದು “ಹಿಟ್ ಮ್ಯಾನ್ ಶೋ”
ಅಂದು 173 ಎಸೆತ ಎದುರಿಸಿದ ರೋಹಿತ್ 264 ರನ್ ಗಳಿಸಿದ್ದರು. ರೋಹಿತ್ ಬ್ಯಾಟಿನಿಂದ ಸಿಡಿದಿದ್ದು 33 ಬೌಂಡರಿ ಮತ್ತು 9 ಭರ್ಜರಿ ಸಿಕ್ಸರ್ಸ್. ಇನ್ನಿಂಗ್ಸ್ ನ ಅಂತಿಮ ಎಸೆತದಲ್ಲಿ ನುವಾನ್ ಕುಲಶೇಖರ ಎಸೆತದಲ್ಲಿ ಜಯವರ್ಧನೆಗೆ ಕ್ಯಾಚಿತ್ತ ರೋಹಿತ್ ಔಟಾಗಿದ್ದರು.