ಮುಂಬೈ: ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಉಸಿರು ಬಿಗಿ ಹಿಡಿದು ನಿಂತಿದ್ದರು, ಮುಂಬೈನ ಹೃದಯ ಭಾಗದಲ್ಲಿರುವ ವಾಂಖೆಡೆ ಕ್ರೀಡಾಂಗಣ ಜನರಿಂದ ಕಿಕ್ಕಿರಿದಿತ್ತು. ಅದು 49ನೇ ಓವರ್ ನ ಎರಡನೇ ಎಸೆತ, ಲಂಕನ್ ವೇಗಿ ನುವಾನ್ ಕುಲಶೇಖರ ವೇಗದಿಂದ ಓಡಿ ಬಂದು ಬಾಲ್ ಎಸೆದಿದ್ದರು, ಕ್ರೀಸ್ ನಲ್ಲಿದ್ದ ನಾಯಕ ಮಹೇಂದ್ರ ಸಿಂಗ್ ಧೋನಿ ಉಸಿರು ಬಿಗು ಹಿಡಿದು ರಭಸದಿಂದ ತನ್ನ ನೆಚ್ಚಿನ ಹೆಲಿಕಾಪ್ಟರ್ ಶಾಟ್ ಬಾರಿಸಿದ್ದರು.
ಧೋನಿ ಬ್ಯಾಟಿಗೆ ತಾಗಿದ ಚೆಂಡು ಆಗಸದೆತ್ತರಕ್ಕೆ ಸಾಗುತ್ತಿದ್ದಂತೆ ಕುರ್ಚಿಯ ಕೊನೆಯಲ್ಲಿ ಕುಳಿತಿದ್ದ ಎಲ್ಲರೂ ಎದ್ದು ನಿಂತಿದ್ದರು. ಚೆಂಡು ಲಾಂಗ್ ಬೌಂಡರಿ ಗೆರೆ ದಾಟಿ ಲ್ಯಾಂಡ್ ಆಗಿತ್ತು. ಕಮೆಂಟರಿ ಬಾಕ್ಸ್ ನಲ್ಲಿದ್ದ ರವಿ ಶಾಸ್ತ್ರಿ,
“ ಧೋನಿ, ಫಿನಿಶಸ್ ಇಟ್ ಆಫ್ ಇನ್ ಸ್ಟೈಲ್, ಇಂಡಿಯಾ ಲಿಫ್ಟ್ಸ್ ದಿ ವರ್ಲ್ಡ್ ಕಪ್ ಆಫ್ಟರ್ 28 ಇಯರ್ಸ್ “ ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಎಂದೂ ಮರೆಯದ ಸಾಲುಗಳನ್ನು ಎದೆಯುಬ್ಬಿಸಿ ಹೇಳಿದ್ದರು.
ಹೌದು 2011ರ ಏಪ್ರಿಲ್ 2ರಂದು ಭಾರತ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಜಯಿಸಿತ್ತು. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಟೀಂ ಇಂಡಿಯಾ ಆರು ವಿಕೆಟ್ ಅಂತರದಿಂದ ಸೋಲಿಸಿತ್ತು.
ಇದನ್ನೂ ಓದಿ:ಗುಮ್ಮ ಬಂತು ಗುಮ್ಮ…; ‘ವಿಕ್ರಾಂತ್ ರೋಣ’ನ ದರ್ಶನಕ್ಕೆ ದಿನಾಂಕ ಫಿಕ್ಸ್
ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ಮಹೇಲಾ ಜಯವರ್ಧನೆ ಶತಕದ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಭಾರತ ತಂಡಕ್ಕೆ ಗೌತಮ್ ಗಂಭೀರ್ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ನೆರವಾಗಿದ್ದರು. ಗಂಭೀರ್ 97 ರನ್ ಗಳಿಸಿದ್ದರೆ, ನಾಯಕ ಮಹೇಂದ್ರ ಸಿಂಗ್ ಧೋನಿ ಅಜೇಯ 91 ರನ್ ಗಳಿಸಿದ್ದರು.
ನಾಯಕ ಧೋನಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಕೂಟದುದ್ದಕ್ಕೂ ಅಮೋಘ ಪ್ರದರ್ಶನ ತೋರಿದ್ದ ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.