ನಿನ್ನ ನುಡಿಯಲ್ಲಿ ಜೇನ ಸಿಹಿ ಅಡಗಿದೆ. ನಿನ್ನ ಸ್ಪರ್ಶದಲ್ಲಿ ತಾಯ ಮಮತೆ ತುಂಬಿದೆ. ನಿನ್ನ ಕಣ್ಣ ತುದಿಯಲ್ಲಿ ಸಾವಿರ ಸಾಂತ್ವನದ ಹಾರೈಕೆಗಳಿವೆ. ಎದೆ ತುಂಬ ನೋವು ತುಂಬಿಕೊಂಡಿದ್ದರೂ, ಹೃದಯ ಗಾಯಗೊಂಡು ಚೀರುತ್ತಿದ್ದರೂ, ಮನಸ್ಸು ಮೌನವಾಗಿ ರೋದಿಸುತ್ತಿದ್ದರೂ, ನಿನ್ನ ನೆನಪಿನ ಮಡಿಲಿಗೆ ಬಿದ್ದ ತಕ್ಷಣ, ಸಾವಿರ ನೋವುಗಳು ಮಂಜಿನಂತೆ ಕರಗಿ ಹೋಗುತ್ತವೆ.
ನನ್ನ ಪ್ರೀತಿಯ ಹುಡುಗಿ…..
ಪ್ರಯತ್ನಪೂರ್ವಕವಾಗಿ ನಿದ್ರಿಸಲು ಯತ್ನಿಸುತ್ತಿದ್ದೇನೆ. ನಿದ್ದೆ ಹತ್ತಿರ ಸುಳಿಯುತ್ತಿಲ್ಲ. ಕತ್ತಲು ಬೆಳೆಯುತ್ತಿದೆಯೇನೋ ಎನ್ನಿಸುತ್ತಿದೆ. ಎಚ್ಚರವಿದ್ದಾಗ ಎದುರಿಗೆ ನಿಂತು, ಕಣ್ಣು ಮುಚ್ಚಿದಾಗ ರೆಪ್ಪೆಯ ಮೇಲ್ಗಡೆ ಕೂತು ನೀನು ಕಾಡುವ ಪರಿ ನಿಜಕ್ಕೂ ವಿಸ್ಮಯ! ರಾತ್ರಿಗಳು ಯಾಕಾದರೂ ಬರುತ್ತಾವೋ? ಈ ಅಸಹನೀಯ ಒಬ್ಬಂಟಿತನ ಕಿತ್ತು ತಿನ್ನುತ್ತಿದೆ. ಮನಸ್ಸು ನಿನ್ನ ಮೃದು ಸ್ಪರ್ಶಕ್ಕೆ ಹಾತೊರೆಯುತ್ತಿದೆ. ನಿನಗೂ ಹಾಗೆನಿಸುತ್ತಿರಬಹುದೇ? ಗೊತ್ತಿಲ್ಲ.
ಮನೆಗೆ ಕಾಲಿಟ್ಟ ತಕ್ಷಣ ಮೌನದ ಮೂರ್ತಿಯಾಗುವ ನಾನು, ನಿನ್ನೊಂದಿಗೆ ಮಾತ್ರ ಹಠಕ್ಕೆ ಬಿದ್ದವನಂತೆ ಮಾತಿಗಿಳಿಯುತ್ತೇನೆ. ನನ್ನ ಸುಖ-ದುಃಖಗಳೆರಡನ್ನು ನಿನ್ನೆದುರು ಬಿಚ್ಚಿಡುತ್ತೇನೆ. ನಿನ್ನ ಸಂತೈಕೆಗೆ, ನಿನ್ನ ನೇವರಿಕೆಗೆ ಉಸಿರು ಬಿಗಿ ಹಿಡಿದು ಕಾಯುತ್ತೇನೆ. ನಿನ್ನ ನುಡಿಯಲ್ಲಿ ಜೇನ ಸಿಹಿ ಅಡಗಿದೆ. ನಿನ್ನ ಸ್ಪರ್ಶದಲ್ಲಿ ತಾಯ ಮಮತೆ ತುಂಬಿದೆ. ನಿನ್ನ ಕಣ್ಣ ತುದಿಯಲ್ಲಿ ಸಾವಿರ ಸಾಂತ್ವನದ ಹಾರೈಕೆಗಳಿವೆ. ಎದೆ ತುಂಬ ನೋವು ತುಂಬಿಕೊಂಡಿದ್ದರೂ, ಹೃದಯ ಗಾಯಗೊಂಡು ಚೀರುತ್ತಿದ್ದರೂ, ಮನಸ್ಸು ಮೌನವಾಗಿ ರೋದಿಸುತ್ತಿದ್ದರೂ, ನಿನ್ನ ನೆನಪಿನ ಮಡಿಲಿಗೆ ಬಿದ್ದ ತಕ್ಷಣ, ಸಾವಿರ ನೋವುಗಳು ಮಂಜಿನಂತೆ ಕರಗಿ ಹೋಗುತ್ತವೆ. ಅಂತರಂಗದಲ್ಲಿ ಕವಿದ ದುಃಖದ ಕಾರ್ಮೋಡಗಳೆಲ್ಲ ಸರಿದು, ಸ್ವತ್ಛಂದ ಮನದ ಮುಗಿಲಲ್ಲಿ ನಿನ್ನೊಂದಿಗೆ ಕಳೆದ, ಗತಕಾಲದ ಘಟನೆಗಳೆಲ್ಲ ಮೂಡಿ ಲವಲವಿಕೆಯನ್ನು ತಂದೊಡ್ಡುತ್ತವೆ.
ನಿನ್ನಲ್ಲಿ ಅದೆಂಥದೋ ಮೋಡಿ ಅಡಗಿದೆ. ಬದುಕನ್ನು ಬೆಳಕಾಗಿಸುವ, ಬೇಸರಕ್ಕೆ ಸೊಗಸು ತುಂಬುವ, ಸಕಲ ಕಷ್ಟಗಳಿಗೂ ಬೆಂಗಾವಲಾಗಿರುವ, ಮೈ ಮನಗಳಿಗೆ ವಿಶಿಷ್ಟವಾದ ಚೈತನ್ಯ ತುಂಬುವ ಅದ್ಭುತವಾದ ದಿವ್ಯ ಔಷಧಿ ನಿನ್ನಲ್ಲಿದೆ. ನನ್ನೆದೆಯಲ್ಲಿ ಒಪ್ಪ ಓರಣವಾಗಿ ಬಿಡಿಸಿಟ್ಟ ಬಣ್ಣದ ರಂಗೋಲಿ ನೀನು. ನನ್ನ ಹೃದಯ ಬಡಿತ, ನನ್ನುಸಿರು, ಜೀವದ ಜೀವ ನೀನೇ ಆಗಿರುವಾಗ, ನಿನ್ನಗಲುವ ಸಂದರ್ಭವೇ ಬರದು. ನಿನ್ನ ಬರುವಿಕೆಗೆ ಕಣ್ಣ ನೆಟ್ಟು, ಜೀವ ಅಂಗೈಯಲ್ಲಿ ಹಿಡಿದು, ಕನಸುಗಳ ಹರವಿ ಕಾಯುತ್ತೇನೆ. ನನಗೆ ಗೊತ್ತು, ನನ್ನ ನಿರೀಕ್ಷೆಯನ್ನು ನೀನು ಹುಸಿಗೊಳಿಸಲಾರೆ. ಹೆಚ್ಚು ದಿನ ನನ್ನನ್ನು ಕಾಯಿಸಲಾರೆ. ಬಿರಿದ ಧರಣಿಯ ತಣಿಸಲು, ವರುಣರಾಯ ಧರೆಗಿಳಿದು ಓಡೋಡಿ ಬಂದಂತೆ, ರಚ್ಚೆ ಹಿಡಿದ ಮಗುವ ಕಂಡು ತಾಯಿ ದುಗುಡದಿಂದ ಎತ್ತಿಕೊಂಡು ರಮಿಸಿದಂತೆ, ಕಡಲ ಕೆನೆತಕ್ಕೆ ಹುಣ್ಣಿಮೆ ಹರಿದು ಬಂದಂತೆ ಬಂದೇ ಬರುತ್ತೀಯ; ಅಲ್ಲಿಯವರೆಗೂ ಕಾಯುತ್ತೇನೆ!
ಬಾನ ಹಕ್ಕಿ ಹಾಡುವ ವೇಳೆ
ಉದಯ ರವಿಯು ಮೂಡುವ ವೇಳೆ
ನೀ ಬರುವ ದಾರಿಯಲ್ಲಿ
ಹೃದಯ ಹಾಸಿ ನಿಲ್ಲುವೆ…!
-ನಾಗೇಶ್ ಜೆ. ನಾಯಕ