Advertisement

ಹಾಡುಗಳ ದಾರಿಯಲ್ಲಿ…

01:04 PM Jan 19, 2018 | Team Udayavani |

“ಮಾಮ, ನಮ್ಮ ಚಿತ್ರದ ಆಡಿಯೋ ಬಿಡುಗಡೆಗೆ ಬರಬೇಕು. ಇನ್ವಿಟೇಶನ್‌ ಬಂದು ಕೊಡುತ್ತೇನೆ’ ಎಂದರಂತೆ ಅನೂಪ್‌. ಅದಕ್ಕೆ ಜಗ್ಗೇಶ್‌ ಹೇಳಿದ್ದು ಒಂದೇ ಮಾತು. “ಇನ್ವಿಟೇಶನ್‌ ಎಲ್ಲಾ ಏನು ಬೇಡ. ಹೇಳಿದ್ದೀಯಲ್ಲ ಸಾಕು. ಏನಿದ್ರೂ ಒಂದು ಫೋನ್‌ ಮಾಡು ಸಾಕು …’ ಅಂದರಂತೆ ಜಗ್ಗೇಶ್‌. ಹಾಗೆ ಮಾತು ಕೊಟ್ಟಂತೆ, ಅನೂಪ್‌ ಅಭಿನಯದ ಹೊಸ ಚಿತ್ರ “ಸಾಗುವ ದಾರಿಯಲ್ಲಿ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಬಂದಿದ್ದರು ಜಗ್ಗೇಶ್‌. ಜೊತೆಗೆ ಪುನೀತ್‌ ಇದ್ದರು. ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ದೇವರಾಜ್‌, ಅನೂಪ್‌ ತಂದೆ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಇದ್ದರು. ಅವರೆಲ್ಲರ ಸಮ್ಮುಖದಲ್ಲಿ “ಸಾಗುವ ದಾರಿಯಲ್ಲಿ’ ಚಿತ್ರದ ಹಾಡುಗಳ ಬಿಡುಗಡೆಯಾಯಿತು.

Advertisement

ಅಂದು ಜಗ್ಗೇಶ್‌ ಅವರು ಚಾಮುಂಡೇಶ್ವರಿ ಸ್ಟುಡಿಯೋಗೆ ಕಾಲಿಡುತ್ತಿದ್ದಂತೆಯೇ, “ಏನ್‌ ಮಾಮ, ನನ್‌ ಟೈಪ್‌ ಡ್ರೆಸ್‌ …’ ಹಾಕಿದ್ದೀರಿ ಎಂದರಂತೆ ಅನೂಪ್‌. ಏಕೆಂದರೆ, ಅಂದು ಇಬ್ಬರೂ ಒಂದೇ ತರಹದ ಶರ್ಟ್‌ ತೊಟ್ಟು ಬಂದಿದ್ದರು. ಇದಕ್ಕೆ ವೇದಿಕೆ ಮೇಲೆ ಉತ್ತರ ಕೊಟ್ಟ ಜಗ್ಗೇಶ್‌, “ನನ್ನ ಸ್ಟಾರ್‌ ನಿನಗೆ ಬರಲಿ ಎಂದರು. ನಂತರ ಮಾತನಾಡಿದ ಅವರು. “ಅನೂಪ ಚಿಕ್ಕ ವಯಸ್ಸಿಗೆ ತಾಯಿಯನ್ನ ಕಳೆದುಕೊಂಡ. ಆ ಸಂದರ್ಭದಲ್ಲಿ ತಂದೆ-ತಾಯಿ ಎರಡೂ ಆಗಿದ್ದವರು ಗೋವಿಂದು. ಮಕ್ಕಳನ್ನ ಚೆನ್ನಾಗಿ ಬೆಳೆಸಿದರು. ಇವತ್ತು ಅವರದೇ ಕಥೆ, ಚಿತ್ರವಾಗಿ ಬಂದಿದೆ. ಇವತ್ತು ಎಲ್ಲಾ ಭಾಷೆಯ ಚಿತ್ರಗಳು ಸಹ ಇಲ್ಲಿ ಬಿಡುಗಡೆಯಾಗುತ್ತಿದೆ. ಯಾವ ಭಾಷೆ ಚಿತ್ರವಾದರೂ ನೋಡಿ. ಆದರೆ, ನಿಮ್ಮ ಮೊದಲ ಪ್ರಾಶಸ್ತ್ಯ ಕನ್ನಡಕ್ಕಿರಲಿ. ನಮ್ಮನ್ನೆಲ್ಲಾ ಪ್ರೇಕ್ಷಕರು ಆಶೀರ್ವಾದ ಮಾಡಿ ಬೆಳೆಸಿದ್ದಾರೆ. ಮಕ್ಕಳನ್ನೂ ಅದೇ ತರಹ ಬೆಳೆಸಿ. ಅವರನ್ನು ಮುಂದಿನ ಪೀಳಿಗೆಗೆ ದಾಟಿಸಿ’ ಎಂದು ಕರೆ ನೀಡಿದರು.

ಅಂದು ಪುನೀತ್‌ ಮತ್ತು ದೇವರಾಜ್‌ ಹೆಚ್ಚು ಮಾತನಾಡಲಿಲ್ಲ. ದೇವರಾಜ್‌ ಈ ಚಿತ್ರದಲ್ಲಿ ತಮಗೊಂದು ಒಳ್ಳೆಯ ಪಾತ್ರ ಸಿಕ್ಕಿದೆ ಎನ್ನುವುದರ ಜೊತೆಗೆ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಇನ್ನು ಪುನೀತ್‌, “ಈ ಚಿತ್ರತಂಡಕ್ಕೆ ಯಶಸ್ಸು ಸಿಗಲಿ. ಎಲ್ಲರ ಆಶೀರ್ವಾದ ಈ ತಂಡದ ಮೇಲಿರಲಿ. ನಾನು ಜಗ್ಗೇಶ್‌ ಅವರ ಅಭಿಮಾನಿ. “ತರೆಲ ನನ್ಮಗ’, “ಮಠ’ ಮುಂತಾದ ಚಿತ್ರಗಳನ್ನು ಹಲವು ಬಾರಿ ನೋಡಿದ್ದೀನಿ’ ಎಂದು ಹೇಳಿದರು.

ಸಮಾರಂಭದಲ್ಲಿ ನಿರ್ಮಾಪಕ ಶಿವಶಂಕರ್‌, ನಿರ್ದೇಶಕ ಶಿವಕುಮಾರ್‌, ಉಮೇಶ್‌ ಬಣಕಾರ್‌, ಎನ್‌.ಎಂ. ಸುರೇಶ್‌, ಎಂ.ಜಿ. ರಾಮಮೂರ್ತಿ, ಎಚ್‌. ವಾಸು ಸೇರಿದಂತೆ ಹಲವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next