Advertisement

ವಿಕಲಚೇತನರ ಛಲ- ಬಲ

12:30 AM Feb 22, 2019 | |

ಮಕ್ಕಳ ಕುರಿತಾದ ಅನೇಕ ಸಿನಿಮಾಗಳು ಈಗಾಗಲೇ ಬಂದಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ’. ಈ ಚಿತ್ರದ ವಿಶೇಷವೆಂದರೆ ಚಿತ್ರದಲ್ಲಿ ನಟಿಸಿರುವ ಇಬ್ಬರು ಮಕ್ಕಳು ಕೂಡಾ ವಿಕಲಚೇತನರು. ಈ ಚಿತ್ರವನ್ನು ಸೋಮಶೇಖರ್‌ ಎನ್ನುವವರು ನಿರ್ಮಿಸಿದ್ದು, ರಾಜಾರವಿವರ್ಮ ನಿರ್ದೇಶಿಸಿದ್ದಾರೆ. ನಿರ್ಮಾಪಕರು ಈ ಚಿತ್ರ ನಿರ್ಮಿಸಲು ಕಾರಣ ಅವರ ತಂದೆ-ತಾಯಿ. ನಿರ್ಮಾಪಕರ ತಂದೆ-ತಾಯಿ ಕೂಡಾ ವಿಕಲಚೇತನರಾಗಿದ್ದು, ಅವರ ಕಷ್ಟಗಳನ್ನು ನೋಡಿರುವ ನಿರ್ಮಾಪಕರು, ಅದೇ ತರಹದ ಕಥೆಯನ್ನು ಸಿನಿಮಾ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಆಡಿಯೋ ಬಿಡುಗಡೆಯಾಗಿದೆ.

Advertisement

ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ಸೋಮಶೇಖರ್‌, “ಕುಟುಂಬವೊಂದರಲ್ಲಿ ಹುಟ್ಟಿದ ಎರಡೂ ಮಕ್ಕಳು ಅಂಗವಿಕಲರಾಗಿರುತ್ತಾರೆ. ಇಂತಹ ಮಕ್ಕಳನ್ನು ಕರೆದುಕೊಂಡು ಜೀವನ ನಿರ್ವಹಣೆಗಾಗಿ ಕುಟುಂಬವೊಂದು ಬೆಂಗಳೂರಿನಂತಹ ಮಹಾನಗರಕ್ಕೆ ಬರುತ್ತದೆ. ಇಲ್ಲಿ ಆ ಕುಟುಂಬ ಏನೇನು ಸವಾಲುಗಳನ್ನು ಎದುರಿಸುತ್ತದೆ. ಹಳ್ಳಿಯಿಂದ ಮಹಾನಗರಕ್ಕೆ ಬಂದು ಬದುಕು ಕಟ್ಟಿಕೊಳ್ಳಲು ಯಶಸ್ವಿಯಾಗುತ್ತಾ, ಇಲ್ಲವಾ ಎಂಬುದೇ ಚಿತ್ರದ ಕಥಾಹಂದರ’ ಎನ್ನುತ್ತಾರೆ. ಕೈ-ಕಾಲು ಎಲ್ಲ ಸರಿಯಾಗಿರುವವರೆ ಇಂದು ಸಾಧನೆ ಮಾಡಲು ಎಷ್ಟೆಲ್ಲ ಪರಿತಪಿಸುತ್ತಾರೆ. ಇನ್ನು ತಮ್ಮಲ್ಲಿರುವ ದೈಹಿಕ ನ್ಯೂನ್ಯತೆಗಳನ್ನು ಬದಿಗಿಟ್ಟು ವಿಕಲಚೇತನರು ಏನೆಲ್ಲಾ ಸಾಧನೆ ಮಾಡುತ್ತಾರೆ. ಸಮಾಜದಲ್ಲಿ ಇತರರಿಗೆ ಹೇಗೆ ಮಾದರಿಯಾಗುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ. ಇದೊಂದು ಮಕ್ಕಳ ಚಿತ್ರ. ಮಕ್ಕಳ ಮೂಲಕ ಇಂತಹ ಗಂಭೀರ ವಿಷಯವನ್ನು ಹೇಳಿದರೆ, ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂಬ ಕಾರಣಕ್ಕೆ, ಮಕ್ಕಳ ಮೂಲಕವೆ ಈ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ ಎನ್ನುವುದು ಚಿತ್ರತಂಡದ ಮಾತು. 

ಚಿತ್ರ ಚೆನ್ನಾಗಿ ಮೂಡಿಬಂದಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದ ನಿರ್ದೇಶಕ ರಾಜಾ ರವಿವರ್ಮ, “ಈ ಚಿತ್ರಕ್ಕೆ ನಿರ್ಮಾಪಕರನ್ನು ಹುಡುಕಿಕೊಟ್ಟಿದ್ದು ವಿ.ನಾಗೇಂದ್ರ ಪ್ರಸಾದ್‌. ಆರಂಭದಲ್ಲಿ ಪಾತ್ರಕ್ಕಾಗಿ ಡ್ರಾಮಾ ಜೂನಿಯರ್ ಮಕ್ಕಳನ್ನು ಆಯ್ಕೆ ಮಾಡುವ ಯೋಚನೆ ಇತ್ತು. ಆ ನಂತರ ನೈಜತೆಗಾಗಿ ವಿಕಲಚೇತನ ಮಕ್ಕಳನ್ನು ಆಯ್ಕೆ ಮಾಡಿ, ಅವರಿಂದ ನಟನೆ ತೆಗೆಸಿದ್ದೇವೆ’ ಎಂದರು. ಮಹೇಶ್‌, ಜೇಯಾದ್‌ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಉಳಿದಂತೆ ವಿನಯ್‌, ಮುನಿ, ಮನದೀಪ್‌ ರಾಯ್‌, ಮೂಗು ಸುರೇಶ್‌, ಪಂಕಜಾ ರವಿಶಂಕರ್‌, ಗಿರೀಶ್‌ ಜಟ್ಟಿ ಮೊದಲಾದ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಜಕಣಾಚಾರಿ ತಮ್ಮ ಶುಕ್ಲಾಚಾರಿ’ ಚಿತ್ರವನ್ನು ಛಾಯಾಗ್ರಹಕ ಸಾಮ್ರಾಟ್‌ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ರವಿ ಚಿತ್ರದ ಸಂಕಲನ ಕಾರ್ಯವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಸಿ.ಜಿ ಅನಿಲ್‌ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.  

ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಮಾಜಿ ಸಚಿವ ಎಚ್‌.ಎಂ.ರೇವಣ್ಣ, ವಿ.ನಾಗೇಂದ್ರ ಪ್ರಸಾದ್‌ ಸೇರಿದಂತೆ ಅನೇಕರು ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next