ಬೆಳ್ತಂಗಡಿ: ಮುಂಬೈನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಸಮೀಪ ಮಂಗಳವಾರ ತಡರಾತ್ರಿ 2 ಗಂಟೆಗೆ ಬೆಂಕಿ ಅವಘಡ ಉಂಟಾದ ಘಟನೆ ಗೋವಾ-ಕರ್ನಾಟಕ ಗಡಿಭಾಗದ ಕಾನಕೋನ ಸಮೀಪ ನಡೆದಿದೆ.
ಮುಂಬೈನಿಂದ ಮಡಗಾವ್ ರೈಲ್ವೆ ನಿಲ್ದಾಣಕ್ಕೆ ರಾತ್ರಿ 1.45ಕ್ಕೆ ಆಗಮಿಸಿದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು, ಬಳಿಕ ಕೆಲವೇ ದೂರ ಚಲಿಸುತ್ತಿದ್ದಂತೆ ರೈಲಿನ ಚಕ್ರ ಸುತ್ತ ಬೆಂಕಿ ಆವರಿಸಿಕೊಂಡಿತ್ತು. ಇದಕ್ಕೂ ಮೊದಲು ಕಾಣಿಸಿದ ದಟ್ಟ ಹೊಗೆಯಿಂದ ಪ್ರಯಾಣಿಕರು ಆತಂಕಕ್ಕೀಡಾಗಿದ್ದರು. ರೈಲ್ವೆ ಟ್ರ್ಯಾಕ್‌ವೆುನ್ ತುರ್ತಾಗಿ ರೈಲು ನಿಲುಗಡೆಗೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ರೈಲು ನಿಲುಗಡೆಯಾಯಿತು.
ಹಠಾತ್ತಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಕೆಲವು ಹೊತ್ತು ರೈಲು ಸಂಚಾರ ಸ್ಥಗಿಗೊಂಡಿತ್ತು. ಬೆಂಕಿ ಜೋರಾಗಿ ಉರಿಯುತ್ತಿದ್ದರೂ ನಂದಿಸಲು ರೈಲಿನಲ್ಲಿ ಯಾವುದೇ ಉಪಕರಣಗಳು ಇರದೆ ಜನ ಗಲಿಬಿಲಿಗೊಂಡಿದ್ದರು. ಬೆಂಕಿ ಕಾಣಿಸಿಕೊಂಡ ಸಮೀಪವೇ ಬೃಹತ್ ಗಾತ್ರದ ತೈಲ ತುಂಬಿದ ಟ್ಯಾಂಕ್ ಇದ್ದುದರಿಂದ ಆತಂಕ ಹೆಚ್ಚಾಗಿತ್ತು.
ಬೆಂಕಿ ನಂದಿಸಲು ರೈಲ್ವೆ ಸಿಬ್ಬಂದಿ ತುರ್ತು ಅಗ್ನಿ ನಂದಿಸುವ ಅಶ್ರುವಾಯು ಪ್ರಯೋಗಿಸಲು ಮುಂದಾದರು. ಆದರೆ, ಅಶ್ರುವಾಯು ಪ್ರಯೋಗಿಸುವ ಬಗ್ಗೆ ಸಿಬ್ಬಂದಿಗೆ ಮಾಹಿತಿ ಇರಲಿಲ್ಲ. ಬಳಿಕ ಪ್ರಯಾಣಿಕರೊಬ್ಬರ ಸಮಯಪ್ರಜ್ಞೆಯಿಂದ ಬೆಂಕಿ ನಂದಿಸಲಾಯಿತು. 30 ನಿಮಿಷದ ಬಳಿಕ ಪ್ರಯಾಣ ಆರಂಭಿಸಿ, ನಂತರ 25 ಕಿ.ಮೀ.ದೂರದ ಕಾನಕೋನ ರೈಲ್ವೆ ನಿಲ್ದಾಣದಲ್ಲಿ ತಾಂತ್ರಿಕ ತಂಡದಿಂದ ಪರಿಶೀಲನೆ ನಡೆಸಿ ದುರಸ್ತಿಗೊಳಿಸಲಾಯಿತು.
ಮರುಕಳಿಸಿದ ಅಗ್ನಿ ಅವಘಡ: ಶನಿವಾರವಷ್ಟೇ ದಿಲ್ಲಿಯಿಂದ ಕೇರಳದತ್ತ ಪ್ರಯಾಣಿಸುತ್ತಿದ್ದ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನ ಎ.ಸಿ.ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೂ, ರೈಲ್ವೆ ಇಲಾಖೆ ಎಚ್ಚೆತ್ತುಕೊಳ್ಳದೆ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಅವಧಿ ಮುಗಿದ ಅಶ್ರುವಾಯು ಸಾಧನಗಳು, ಬೆಂಕಿ ನಂದಿಸಲು ಬಳಸುವ ಪರಿಕರಗಳ ಕುರಿತು ಮುನ್ನೆಚ್ಚರಿಕೆ ವಹಿಸಿದಂತಿಲ್ಲ.