Advertisement

ಎರಡೇ ದಿನದಲ್ಲಿ ಮಹಿಳೆಗೆ ದಕ್ಕಿತು ಅನುಕಂಪದ ನೌಕರಿ

12:39 PM Jan 29, 2022 | Team Udayavani |

ಕಲಬುರಗಿ: ಪತಿ ಮೃತನಾದ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಅರ್ಜಿ ಸಲ್ಲಿಸಿದ್ದ ಮಹಿಳೆಗೆ ಕೇವಲ ಎರಡೇ ದಿನದಲ್ಲಿ ಜಿಲ್ಲಾಧಿಕಾರಿ ಯಶವಂತ್‌ ಗುರುಕರ್‌ ಉದ್ಯೋಗ ನೀಡಿ, ಸಂತ್ರಸ್ತ ಕುಟುಂಬಕ್ಕೆ ನೆರವಾಗಿದ್ದಾರೆ.

Advertisement

ತಾಲೂಕಿನ ಕುಸನೂರಿನ ಶಿವಲಿಂಗಮ್ಮ ಅವರೇ ನೌಕರಿ ಪಡೆದವರು. ಈಕೆಯ ಪತಿ ಮಾಳಿಂಗರಾಯ ಆಳಂದ ತಾಲೂಕಿನ ಖಜೂರಿ ನಾಡಾ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಕಳೆದ ಮಾರ್ಚ್‌ 16ರಂದು ಕರ್ತವ್ಯದಲ್ಲಿದ್ದಾಗ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದರು. ಹೀಗಾಗಿ ಶಿವಲಿಂಗಮ್ಮ ಜ.25ರಂದು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದರು. ಅದೇ ನೂತನ ಜಿಲ್ಲಾಧಿ ಕಾರಿಯಾಗಿ ಅಧಿಕಾರವಹಿಸಿಕೊಂಡಿದ್ದ ಯಶವಂತ್‌ ಗುರುಕರ್‌ ತಮ್ಮ ಕಚೇರಿ ಮುಂದೆ ಶಿವಲಿಂಗಮ್ಮ ತನ್ನ ಇಬ್ಬರು ಮಕ್ಕಳೊಂದಿಗೆ ಕಾಯ್ದು ಕುಳಿತಿರುವುದನ್ನು ನೋಡಿದ್ದರು. ಆಗ ಸ್ವತಃ ಜಿಲ್ಲಾಧಿಕಾರಿಗಳೇ ಮಹಿಳೆ ಬಳಿ ತೆರಳಿ, ಸಮಸ್ಯೆ ಆಲಿಸಿದ್ದರು. ಆಗ ಆಕೆ ಅನುಕಂಪ ಆಧಾರದ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಹೇಳಿಕೊಂಡಿದ್ದರು. ಕೂಡಲೇ ಅವತ್ತೇ ಶಿವಲಿಂಗಮ್ಮಗೆ ಎರಡನೇ ದಿನದಲ್ಲಿ ನೌಕರಿ ಆದೇಶ ನೀಡಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿಗಳು ಸ್ಥಳದಲ್ಲಿದ್ದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅಂತೆಯೇ ಶುಕ್ರವಾರ ಮಹಿಳೆ ಕೋರಿದ ಸ್ಥಳವಾದ ಕಲಬುರಗಿ ತಹಶೀಲ್ದಾರ್‌ ಕಚೇರಿಯಲ್ಲಿ ಖಾಲಿಯಿದ್ದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇಮಕ ಮಾಡಲಾಗಿತ್ತು. ಜಿಲ್ಲಾಧಿಕಾರಿ ಆದೇಶ ಪತ್ರ ನೀಡಿ ಕರ್ತವ್ಯ ಪ್ರಜ್ಞೆ ಮೆರೆಯುವುದರೊಂದಿಗೆ ಆಡಳಿತಕ್ಕೆ ಚುರುಕು ಮುಟ್ಟಿಸಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ. ಅದನ್ನು ನಾನು ಪಾಲಿಸಿದ್ದೇನೆ ಎಂದು ಡಿಸಿ ಯಶವಂತ್‌ ಗುರುಕರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next