ಬೆಂಗಳೂರು: ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಶನಿವಾರ 17000 ಜನರು ಕಣ್ತುಂಬಿಕೊಂಡರು.
ಮೈಸೂರಿನ ರಾಮಕೃಷ್ಣ ಮಠದ ಮುಕ್ತಿದಾನಂದ ಸ್ವಾಮೀಜಿ, ನಟಿ ಅರುಂಧತಿ ನಾಗ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಶನಿವಾರ ಲಾಲ್‌ಬಾಗ್‌ನ ಗಾಜಿನಮನೆಗೆ ಭೇಟಿ ನೀಡಿ, ಸ್ವಾಮಿ ವಿವೇಕಾನಂದ ಕುರಿತ ಜೀವನ ಚರಿತ್ರೆ ಮತ್ತು ನಡೆದುಬಂದ ಹಾದಿ ಬಗ್ಗೆ ಹಾಕಲಾಗಿದ್ದ ಫಲಕಗಳು, ಹೂದೋಟ, ವಿವೇಕ ಕುಟೀರ, 16 ಅಡಿಯ ವಿವೇಕಾನಂದರ ಪ್ರತಿಮೆ, ಸ್ಮಾರಕ ಮಾದರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಕ್ತಿದಾನಂದ ಸ್ವಾಮೀಜಿ, ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ ಅಚ್ಚುಕಟ್ಟಾಗಿ ಆಯೋಜಿಸಿದೆ. ಗಾಜಿನಮನೆಯ ಸುತ್ತಲು ಅಳವಡಿ ಸಲಾಗಿರುವ ಫಲಕಗಳಲ್ಲಿ ಸ್ವಾಮಿ ವಿವೇಕಾನಂದರ ತತ್ವಗಳನ್ನು ತಿಳಿಸಲಾಗಿದೆ. ಯುವಜನತೆ ಸೇರಿದಂತೆ ಎಲ್ಲರೂ ಲಾಲ್‌ಬಾಗ್‌ಗೆ ಭೇಟಿ ನೀಡಬೇಕು ಎಂದು ಮನವಿ ಮಾಡಿದರು.
ಭಾನುವಾರ ಹೆಚ್ಚಿನ ಜನರು ಬರುವ ನಿರೀಕ್ಷೆ: ವಾರಾಂತ್ಯ, ರಜಾದಿನವಾಗಿರು ವುದರಿಂದ ಭಾನುವಾರ ಹೆಚ್ಚಿನ ಜನರು ಬರುವ ನಿರೀಕ್ಷೆ ಇದೆ. ಜನರಿಗೆ ಮೂಲ ಸೌಕರ್ಯ ಕಲ್ಪಿಸಲಾಗಿದ್ದು, ಪೊಲೀಸರ ಭದ್ರತೆ ಮತ್ತು ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
16 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆ ಆಕರ್ಷಣಿಯವಾಗಿದ್ದು, ಗಾಜಿನಮನೆಯಲ್ಲಿ ಅಧ್ಯಾತ್ಮ ಮತ್ತು ಸಂದೇಶಗಳ ಫಲಕಗಳು ರಾರಾಜಿಸುತ್ತಿವೆ. ಬೆಂಗಳೂರು ಸೇರಿ ಸುತ್ತಲ ಊರುಗಳ ಜನ ಭೇಟಿ ನೀಡಿ, ವಿವೇಕಾನಂದರ ಬಗ್ಗೆ ತಿಳಿದುಕೊಳ್ಳಬೇಕು.
-ಅರುಂಧತಿ ನಾಗ್, ನಟಿ