ಒಂದೊಮ್ಮೆ ಅಂಡರ್‌ವರ್ಲ್ಡ್ ಮೂಲಕವೇ “ಕುಡ್ಲ’ ದೇಶ ವಿದೇಶದಲ್ಲಿ ಸುದ್ದಿಯಲ್ಲಿತ್ತು. ಅಂಡರ್‌ವರ್ಲ್ಡ್ ನ ಇಲ್ಲಿನ ಒಂದೊಂದು ಕಥೆಗಳು ರೋಚಕ ಹಾಗೂ ಭಯಾನಕ. ಕೆಲವು ಡಾನ್‌ಗಳೇ ಕುಡ್ಲವನ್ನು ಹತೋಟಿಯಲ್ಲಿಟ್ಟಂತಿತ್ತು. ಒಂದೊಂದು ಹೆಸರಿನ ನಾಮಧ್ಯೇಯದೊಂದಿಗೆ ಇಲ್ಲಿನ “ಡಾನ್’ ಪ್ರಪಂಚ ಮುಂಬಯಿ, ಬೆಂಗಳೂರು, ದುಬಾಯಿಯಲ್ಲೂ ಸದ್ದು ಮಾಡಿರುವುದು ಇತಿಹಾಸ.
ಇಂತಹ ಭಯಾನಕ ರಕ್ತ ಚರಿತ್ರೆ ಬರೆದ ಕುಡ್ಲ ಈಗಂತೂ ಅಂಡರ್‌ವರ್ಲ್ಡ್ ನಿಂದ ಒಂದಿಷ್ಟು ದೂರ ನಿಂತಿದೆ. ಸಂಪೂರ್ಣ ದೂರ ಅನ್ನುವಂತಿಲ್ಲ. ಯಾಕೆಂದರೆ, ಇನ್ನೂ ಕೆಲವರು ಅಂಡರ್‌ವರ್ಲ್ಡ್ ನಲ್ಲಿ ಕೈಯಾಡಿಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕುಡ್ಲದ ಅಂಡರ್‌ವರ್ಲ್ಡ್ ಸದ್ದು ಮಾಡಿದೆ. ಇಂತಹ ಅಪರೂಪದ ಹಾಗೂ ಇಂಟ್ರೆಸ್ಟಿಂಗ್ ಸಂಗತಿಗಳು ಈಗಿನ ಕೆಲವರಿಗೆ ಕಥೆಯಾಗಿ ಮಾತ್ರ ಗೊತ್ತು. ಈ ಕಥೆಗೆ ಜೀವಂತಿಕೆ ನೀಡಲು ಕುಡ್ಲದ ಟೀಮ್ ಈಗ ಸಿನೆಮಾ ಬಗ್ಗೆ ಯೋಚನೆ ಮಾಡಿದೆ.
ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುವ ಶೈಲಿಯಲ್ಲಿಕುಡ್ಲದ ಅಂಡರ್‌ವಲ್ಡ್ ಕಥೆ ಮೂಡಿಬರಬೇಕು ಎಂಬ ನೆಲೆಯಲ್ಲಿ ಚಿತ್ರತಂಡವೊಂದು ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಲಕುಮಿ ಬ್ಯಾನರ್‌ನಡಿ ಕೋಸ್ಟಲ್‌ವುಡ್‌ನಲ್ಲಿ 2016ರಲ್ಲಿ ಮೂಡಿಬಂದ “ಪಿಲಿಬೈಲ್ ಯಮುನಕ್ಕ’ ಹಾಗೂ 2018ರ “ಮೈ ನೇಮ್ ಈಸ್ ಅಣ್ಣಪ್ಪ’ ಸಿನೆಮಾಗಳು ಹೊಸ ಸಾಧನೆ ಬರೆದಿದ್ದವು. ಈಗ ಇದೇ ಮೂಡ್‌ನಲ್ಲಿ ಎರಡು ವರ್ಷದ ಬಳಿಕ ಇದೇ ಬ್ಯಾನರ್‌ನಡಿ ಹೊಸ ಸಿನೆಮಾ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದ ಚಿತ್ರತಂಡ ಅಂಡರ್‌ವರ್ಲ್ಡ್ ಕಥೆಯನ್ನು ತೆರೆಗೆ ತರುವ ಮನಸ್ಸಿನಲ್ಲಿದ್ದಾರೆ.
ಅಂದಹಾಗೆ, ಹೆಚ್ಚಾ- ಕಡಿಮೆ ಮುಂದಿನ ಅಕ್ಟೋಬರ್ ವೇಳೆಗೆ ಈ ಸಿನೆಮಾದ ಶೂಟಿಂಗ್ ಶುರುವಾಗಲಿದೆ. ಸಿನೆಮಾದ ಟೈಟಲ್ ಇನ್ನಷ್ಟೇ ಫೈನಲ್ ಆಗಲಿಕ್ಕಿದೆ. ವಿಶೇಷವೆಂದರೆ “ಕೆಜಿಎಫ್’ ಸಿನೆಮಾದಲ್ಲಿ ದುಡಿದ ತಾಂತ್ರಿಕ ವರ್ಗದವರು ಈ ಸಿನೆಮಾದಲ್ಲಿ ಕೆಲಸ ಮಾಡಲಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಸೂಪರ್‌ಹಿಟ್ ಸಿನೆಮಾ ನೀಡಿರುವ ತಮಿಳು ಸಿನೆಮಾದ ನಿರ್ದೇಶಕ ಈ ಸಿನೆಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇನ್ನೊಂದು ವಿಶೇಷವೆಂದರೆ, ಬಾಲಿವುಡ್‌ನ ಎರಡು ಖ್ಯಾತ ಕಲಾವಿದರನ್ನು ಈ ಕಥೆಯಲ್ಲಿ ಬಳಸಿಕೊಳ್ಳಲು ಯೋಚಿಸಲಾಗಿದೆ. ಈ ಕುರಿತ ಮಾತುಕತೆ ಸದ್ಯ ನಡೆಯುತ್ತಿದೆ.
ಜತೆಗೆ, ಕುಡ್ಲದ ಎವರ್‌ಗ್ರೀನ್ “ವಿಲನ್’ ಗೋಪಿನಾಥ್ ಭಟ್ ಹಾಗೂ ಸಂತೋಷ್ ಶೆಟ್ಟಿ ಅವರು ಈ ಸಿನೆಮಾದಲ್ಲಿ ಅಭಿನಯಿಸಲು ಚಿತ್ರತಂಡವು ಅಪೇಕ್ಷಿಸಿದ್ದು, ಕೆಲವೇ ದಿನದಲ್ಲಿ ಇದು ಫೈನಲ್ ಆಗಲಿದೆ ಎಂಬುದು ಸದ್ಯದ ಮಾಹಿತಿ.
1990ರಿಂದ ಇಲ್ಲಿಯವರೆಗೆ ಕುಡ್ಲದ ಅಂಡರ್‌ವರ್ಲ್ಡ್ ನಲ್ಲಿ ನಡೆದ ಘಟನೆಗಳು, ಅದರ ಹಿನ್ನೋಟ, ಒಳನೋಟಗಳನ್ನು ಈ ಸಿನೆಮಾದ ಮೂಲಕ ತೆರೆಗೆ ತರಲಾಗುತ್ತದೆ. ಮಂಗಳೂರು, ಮುಂಬಯಿ ಹಾಗೂ ದು ಬಾ ಯಿಯಲ್ಲಿ ಸಿನೆಮಾದ ಶೂಟಿಂಗ್ ನಡೆಯಲಿದೆ. ಇದು ಸದ್ಯಕ್ಕಿರುವ ಅಪ್‌ಡೇಟ್. ಫುಲ್ ಡಿಟೇಲ್ ಸಿಗಲು ಇನ್ನಷ್ಟು ದಿನ ಕಾಯಬೇಕು!
- ದಿನೇಶ್ ಇರಾ