ಕೊಚ್ಚಿ/ತಿರುಪತಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಂದೇ ದಿನ ಕೇರಳಕ್ಕೆ ಭೇಟಿ ಕೊಡಲಿದ್ದಾರೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರು, ಶುಕ್ರವಾರ ಸಂಜೆ ಕೊಚ್ಚಿಗೆ ಆಗಮಿಸಲಿದ್ದಾರೆ. ಶನಿವಾರ (ಜು.8) ಬೆಳಗ್ಗೆ ಗುರುವಾಯೂರಿನ ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಕೊಚ್ಚಿಯಿಂದ 12.40ಕ್ಕೆ ಪ್ರಧಾನಿಯವರು ತಿರುಪತಿಗೆ ತೆರಳಲಿದ್ದಾರೆ. 8ರಂದೇ ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಅವಧಿಯ ಮೊದಲ ವಿದೇಶ ಪ್ರವಾಸವನ್ನು ಮಾಲ್ಡೀವ್ಸ್‌ಗೆ ಕೈಗೊಳ್ಳಲಿದ್ದಾರೆ.
ಪ್ರಧಾನಮಂತ್ರಿಯಾಗಿ ಎರಡನೇ ಬಾರಿಗೆ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಗುರುವಾಯೂರಿಗೆ ಭೆೇಟಿ ನೀಡುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಜತೆಗೆ ವಿಶೇಷ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರಧಾನಿಯವರ ಜತೆಗೆ ಕೇಂದ್ರ ವಾಣಿಜ್ಯ ಮತ್ತು ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ಇರಲಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಅವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವೂ ಇದೆ.
ಇದಾದ ಬಳಿಕ ಅವರು ತಿರುಪತಿಗೆ ಬೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಆಂಧ್ರ ಮುಖ್ಯ ಕ್ರಾಯದರ್ಶಿ ಎಲ್.ವಿ.ಸುಬ್ರಹ್ಮಣ್ಯಂ ಪ್ರಧಾನಿಯವರ ಭೇಟಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಜತೆಗೆ ತಿರುಪತಿ ತಿರುಮಲ ದೇವಸ್ಥಾನಮ್ಸ್‌ನ ಕಾರ್ಯನಿರ್ವಹಣಾ ಧಿಕಾರಿ ಅನಿಲ್ ಕುಮಾರ್ ಸಿಂಘಲ್ ಜತೆಗೂ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ವೇಳೆ ಆಂಧ್ರಪ್ರದೇಶ ಸಿಎಂ ವೈ.ಎಸ್.ಜಗನ್ಮೋಹನ ರೆಡ್ಡಿ, ರಾಜ್ಯಪಾಲ ಇ.ಎಸ್.ಎಲ್.ನರಸಿಂಹನ್ ಇರಲಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಶುಕ್ರವಾರ ಬೆಳಗ್ಗೆ ಕಲ್ಲಿಕೋಟೆ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಅವರು ತಾವು ಗೆದ್ದಿರುವ ವಯನಾಡ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಎರಡು ದಿನಗಳ ಕಾಲ ತಂಗಲಿದ್ದಾರೆ. ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರು ಆರು ರೋಡ್ ಶೋ ನಡೆಸಲಿದ್ದಾರೆ. ಈ ಮೂಲಕ ಕೇರಳದಿಂದ ಲೋಕಸಭೆಗೆ ಆಯ್ಕೆ ಮಾಡಿದ ವಯನಾಡ್ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ ಎಂದು ವಯನಾಡ್ ಜಿಲ್ಲಾ ಕಾಂಗ್ರೆಸ್ ಸಮಿತಿ ತಿಳಿಸಿದೆ.