ಅಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಸೈನಿಕರನ್ನು ವಾಪಸ್ ಕರೆಯಿಸಿಕೊಂಡ ನಂತರ ತಾಲಿಬಾನ್ ಬಂಡುಕೋರರು ಸಂಘರ್ಷಕ್ಕಿಳಿದು ಬಿಟ್ಟಿದ್ದರು. ಕಳೆದ ಆರು ದಿನಗಳಲ್ಲಿ ಎಂಟು ನಗರಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಏತನ್ಮಧ್ಯೆ ಪುರುಷ ಪ್ರಧಾನ ಅಫ್ಘಾನಿಸ್ತಾನದಲ್ಲಿ ಮಹಿಳಾ ಜಿಲ್ಲಾ ಗವರ್ನರ್ ಆಗಿರುವ ಸಲೀಮಾ ಮಝಾರಿ ತಾಲಿಬಾನ್ ಉಗ್ರರಿಗೆ ಸೆಡ್ಡು ಹೊಡೆದಿದ್ದು, ಅವರ ವಿರುದ್ಧ ಹೋರಾಡಲು ಸಶಸ್ತ್ರ ಪಡೆಯನ್ನು ಕಟ್ಟುತ್ತಿದ್ದಾರೆ…
“ತಾಯ್ನಾಡಿಗಾಗಿ….ನಿಮಗಾಗಿ ನನ್ನ ಜೀವವನ್ನು ತ್ಯಾಗ ಮಾಡುತ್ತೇನೆ” ಎಂಬ ಹಾಡು ಇತ್ತೀಚೆಗೆ ಇಲ್ಲಿ ಅನುರಣಿಸುತ್ತಿದೆ. ಅಷ್ಟೇ ಅಲ್ಲ ತನ್ನ ಪಡೆಯ ಹಿಂಬಾಲಕರಿಗೂ ಇದನ್ನೇ ಅನುಸರಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರಂತೆ ಸಲೀಮಾ ಮಝಾರಿ! ಯುದ್ಧಗ್ರಸ್ತ ಅಫ್ಘಾನಿಸ್ತಾನದಿಂದ ತಮ್ಮ ಸೇನಾಪಡೆಯನ್ನು ಹಿಂಪಡೆಯುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಘೋಷಿಸಿದ ನಂತರ ತಾಲಿಬಾನ್ ಮೇ ತಿಂಗಳಿನಿಂದ ಅಫ್ಘಾನಿಸ್ತಾನದ ಗ್ರಾಮೀಣ ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಆರಂಭಿಸಿತ್ತು.
ತಾಲಿಬಾನ್ ಉಗ್ರರು ವಶಕ್ಕೆ ಪಡೆದಿರುವ ಪ್ರದೇಶಗಳಲ್ಲಿನ ಜನರ ಜೀವನ ಶೈಲಿ ಬದಲಾಗತೊಡಗಿದೆ. ಆದರೆ ಕಣಿವೆ ಮತ್ತು ಪರ್ವತಗಳಿಂದ ಆವೃತ್ತವಾಗಿರುವ ಕುಗ್ರಾಮ ಜಿಲ್ಲೆಯಾದ ಚಾರ್ಕಿಂಟ್ ಆಡಳಿತ ನಡೆಸುತ್ತಿರುವವರು ಮಝಾರಿ. ತಾಲಿಬಾನ್ ಮಾನವ ಹಕ್ಕುಗಳನ್ನು ತುಳಿದು ಹಾಕುತ್ತಿದೆ ಎಂದು ಆಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲಿಬಾನ್ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಮಹಿಳೆಯರು ಮತ್ತು ಹುಡುಗಿಯರಿಗೆ ಶಿಕ್ಷಣ, ಉದ್ಯೋಗವನ್ನು ನಿರಾಕರಿಸಲಾಗಿತ್ತು. ಆದರೆ 2001ರಲ್ಲಿ ತಾಲಿಬಾನ್ ಹಿಡಿತ ಕೈತಪ್ಪಿದ ಬಳಿಕ ನಿಧಾನಕ್ಕೆ ವರ್ತನೆಗಳು ಬದಲಾಗತೊಡಗಿದವು. ಸಾಮಾಜಿಕವಾಗಿ ಜನರು ಮಹಿಳೆಯ ನಾಯಕತ್ವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಮಝಾರಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಮಝಾರಿ ಅವರು ಹಝಾರಾ ಸಮುದಾಯದ ಸದಸ್ಯರಾಗಿದ್ದು, ಅವರಲ್ಲಿ ಹೆಚ್ಚಿನವರು ಶಿಯಾ ಮುಸ್ಲಿಮರು. ಆದರೆ ಸುನ್ನಿ ತಾಲಿಬಾನ್ ಗಳು ತಮ್ಮನ್ನು ತಾವು ಸಂಪ್ರದಾಯವಾದಿ ಧಾರ್ಮಿಕ ಪಂಥದವರು ಎಂದು ಪರಿಗಣಿಸಿಕೊಂಡಿದ್ದಾರೆ.
ನಾವು ಇಲ್ಲಿ ನಿರಂತರವಾಗಿ ತಾಲಿಬಾನ್ ಮತ್ತು ಬಂಡುಕೋರರ ಆಟ್ಟಹಾಸಕ್ಕೆ ಗುರಿಯಾಗಿದ್ದೇವೆ. ಮೇ ತಿಂಗಳಿನಲ್ಲಿ ಕಾಬೂಲ್ ನ ಶಾಲೆಯೊಂದರ ಮೇಲೆ ದಾಳಿ ನಡೆಸಿ 80ಕ್ಕೂ ಅಧಿಕ ಹುಡುಗಿಯರನ್ನು ಹತ್ಯೆಗೈದಿದ್ದರು. ಇದೀಗ ಮತ್ತೆ ತಾಲಿಬಾನ್ ಉಗ್ರರು ನಗರ, ಪ್ರದೇಶಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಮೂಲಕ ಶರಿಯಾ ಕಾನೂನನ್ನು ಹೇರಲು ಮುಂದಾಗಿದ್ದಾರೆ ಎಂದು ಮಝಾರಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ತಾಲಿಬಾನ್ ವಿರುದ್ಧ ಹೋರಾಡಲು ಹೊಲ, ದನ, ಕುರಿ ಮಾರಾಟ!
ಮಝಾರಿಯ ಹಲವು ಭಾಗ ತಾಲಿಬಾನ್ ಹಿಡಿತದಲ್ಲಿದ್ದು, ಇನ್ನುಳಿದ ಪ್ರದೇಶವನ್ನು ತಾಲಿಬಾನ್ ವಶಕ್ಕೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮಝಾರಿ ತಾಲಿಬಾನ್ ವಿರುದ್ಧ ಹೋರಾಡಲು ಜನರನ್ನು ನೇಮಕ ಮಾಡಿಕೊಳ್ಳುವುದರಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರಂತೆ. ಈಗಾಗಲೇ ರೈತರು, ಕಾರ್ಮಿಕರು, ಕುರಿಗಾಹಿಗಳು ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ಸೇರ್ಪಡೆಗೊಂಡಿದ್ದಾರೆ. ನಮ್ಮ ಜನರ ಕೈಯಲ್ಲಿ ಗನ್ ಗಳಿಲ್ಲ, ಆದರೂ ತಮ್ಮ ದನ, ಕುರಿ, ಭೂಮಿಯನ್ನು ಮಾರಾಟ ಮಾಡಿ ಶಸ್ತ್ರಾಸ್ತ್ರವನ್ನು ಖರೀದಿಸುತ್ತಿದ್ದಾರೆ ಎಂದು ಹಝಾರಿ ವಿವರಿಸುತ್ತಾರೆ.
ಯಾವುದೇ ಸಂಬಳ ಪಡೆಯದೇ ಹಗಲು, ರಾತ್ರಿ ಅವರೆಲ್ಲಾ ಪಹರೆ ಕಾಯುತ್ತಿದ್ದ ಪರಿಣಾಮ ತಾಲಿಬಾನ್ ಉಗ್ರರಿಗೆ ಇನ್ನೂ ಮಝಾರಿ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈಯದ್ ನಜೀರ್ ವಿಶ್ವಾಸವ್ಯಕ್ತಪಡಿಸಿದ್ದಾರೆ. ಜನರ ಬೆಂಬಲದಿಂದಾಗಿ ನಮಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಇತ್ತೀಚೆಗಷ್ಟೇ ತಾಲಿಬಾನ್ ಉಗ್ರರ ವಿರುದ್ಧ ಹೋರಾಟ ನಡೆಸುವ ವೇಳೆ ಮಝಾರಿ ಕಾಲಿಗೆ ಗುಂಡೇಟು ಬಿದ್ದಿತ್ತು.
ಆದರೂ ಧೈರ್ಯ ಕಳೆದುಕೊಳ್ಳದ ಮಝಾರಿ ಜನರನ್ನು ಸಂಘಟಿಸುವ ಕೆಲಸ ಮುಂದುವರಿಸಿದ್ದಾರೆ. ಇದಕ್ಕೆ ಕಾರಣ ತಾಲಿಬಾನ್ ಆಡಳಿತದ ಸಂದರ್ಭದಲ್ಲಾದ ಭಯಾನಕ ಅನುಭವಗಳು ಇನ್ನೂ ಮಾಸಿಲ್ಲ ಎಂಬುದಾಗಿ ಹೇಳುತ್ತಾರೆ ಚಾರ್ಕಿಂಟ್ ನಿವಾಸಿಗಳು. ಒಂದು ವೇಳೆ ತಾಲಿಬಾನ್ ಉಗ್ರರು ಮತ್ತೊಮ್ಮೆ ವಾಪಸ್ ಅಧಿಕಾರಕ್ಕೆ ಬಂದರೆ ಅವರು ಮಹಿಳೆಯೊಬ್ಬಳು ಗವರ್ನರ್ ಹುದ್ದೆಯಲ್ಲಿರುವುದನ್ನು ಸಹಿಸಿಕೊಳ್ಳುವುದಿಲ್ಲ ಎಂಬ ಸತ್ಯದ ಅರಿವಿದೆ ಎನ್ನುತ್ತಾರೆ ಮಝಾರಿ!.
*ನಾಗೇಂದ್ರ ತ್ರಾಸಿ