ಆಳಂದ: ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಗಳಲ್ಲಿ ವೈಜ್ಞಾನಿಕವಾಗಿ ಅಂತರ್ಜಲ ಪೂರಕವಾಗುವಂತೆ ಹಾಗೂ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ಪ್ರಾರಂಭಿಸುವ ತನಕ್ಕೆ ಧರಣಿ ಸತ್ಯಾಗ್ರಹ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅಖೀಲ ಭಾರತ ಕಿಸಾನ್ ಸಭಾ ತಾಲೂಕು ಘಟಕದ ಮುಖಂಡರು ಹೇಳಿದರು.
ಪಟ್ಟಣದ ತಾಪಂ ಕಚೇರಿ ಮುಂದೆ ರೈತ ಪರ ಬೇಡಿಕೆಗೆ ಆಗ್ರಹಿಸಿ ಕಿಸಾನ್ ಸಭಾವು ಶನಿವಾರದಿಂದ ಆರಂಭಿಸಿದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸೋಮವಾರ 3ನೇ ದಿನಕ್ಕೆ ಕಾಲಿಟ್ಟಿದೆ. ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಾಗಮೂರ್ತಿ ಕೆ. ಶೀಲವಂತ ಅವರು ಸತ್ಯಾಗ್ರಹಿಗಳ ಬೇಡಿಕೆಯನ್ನು ಆಹ್ವಾಲು ಸ್ವೀಕರಿಸಿದರು.
ಕಾಮಗಾರಿ ಕೈಗೊಳ್ಳಲು ಸಂಬಂಧಿತ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಸತ್ಯಾಗ್ರಹ ಹಿಂದಕ್ಕೆ ಪಡೆಯಬೇಕು ಎಂಬ ಕೋರಿಕೆಗೆ ಒಪ್ಪದ ಸತ್ಯಾಗ್ರಹ ನಿರತರು, ಪ್ರತಿ ಗ್ರಾಪಂಗಳಲ್ಲಿ ತಕ್ಷಣಕ್ಕೆ ಉದ್ಯೋಗ ಖಾತ್ರಿ ಕಾಮಗಾರಿ ಆರಂಭಿಸುವತನಕ ಹಾಗೂ ಇನ್ನೂಳಿದ ಬೇಡಿಕೆಗಳನ್ನು ಈಡೇರಿಸುವವರೆಗೆ ಧರಣಿ ಸತ್ಯಾಗ್ರಹ ಕೈಬಿಡುವುದಿಲ್ಲ. ಅನೇಕ ಬಾರಿ ಭರವಸೆ ಈಡೇರಿಸಿಲ್ಲ. ಹೀಗಾಗಿ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ಘೋಷಿಸಿದರು.
ಕಾಮಗಾರಿ ಹೆಸರಿನಲ್ಲಿ ಹಣ ದುರ್ಬಳೆಕೆ ಆಗಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ನಿರಂತರ ಹೋರಾಟ, ಸತ್ಯಾಗ್ರಹ, ಗ್ರಾಪಂ ವರೆಗೆ ಜೀಪ್ ಜಾಥಾ ಮೂಲಕ ಒತ್ತಾಯಿಸಿದರೂ ಸಹ ಮೇಲಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಸಾನ್ ಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ ಆರೋಪಿಸಿದರು.
ಪ್ರಸಕ್ತ ದಿನಗಳಲ್ಲಿ ಎಲ್ಲೆಡೆ ಟ್ರ್ಯಾಕ್ಟರ್ ಗಳ ಮೂಲಕ ಕೃಷಿ ನಡೆಯುತ್ತಿವೆ. ಹೀಗಾಗಿ ರೈತರ ಹೊಲಕ್ಕೆ ರಸ್ತೆ ಇಲ್ಲದೆ ಬೆಳೆ ಬೆಳೆಯಲು ಕಷ್ಟವಾಗಿದ್ದು, ಸಾಗುವಳಿಗೆ ಟ್ರ್ಯಾಕ್ಟರ್ ಸಂಚಾರ ಅನಿವಾರ್ಯವಾಗಿದೆ. ಈ ಕಾರಣಕ್ಕಾಗಿ ಉದ್ಯೋಗ ಖಾತ್ರಿಯಲ್ಲಿ ನಮ್ಮ ಹೊಲ ನಮ್ಮ ರಸ್ತೆ ಕಾಮಗಾರಿ ಮೂಲಕ ರಸ್ತೆ ಕೈಗೊಂಡು ವಾಹನಗಳ ಸಂಚಾರಕ್ಕೆ ಮತ್ತು ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ ಜೊತೆಗೆ ಸಕಾಲಕ್ಕೆ ಕೂಲಿ ಒದಗಿಸಬೇಕು ಎಂದು ಒತ್ತಾಯಿಸಿದರು.
ಸತ್ಯಾಗ್ರಹದಲ್ಲಿ ಮೌಲಾ ಮುಲ್ಲಾ, ಮಲ್ಲಿನಾಥ ಯಲಶೆಟ್ಟಿ, ಚಂದ್ರಕಾಂತ ಖೋಬ್ರೆ, ದತ್ತಾತ್ರೆಯ ಜೀರೋಳೆ, ಶಿವಾಜಿ ಬಿರಾಜದಾರ, ರಾಮಮೂರ್ತಿ ಕಾಯಕವಾಡ, ರಂಜಿತ ಕಾಂಬಳೆ, ಫಕ್ರೋದ್ದೀನ್ ಗೋಳಾ ಇದ್ದರು.