Advertisement

Finance: ಚುನಾವಣೆ ಹೊಸ್ತಿಲಲ್ಲೇ ಕೇಂದ್ರದ ಜತೆಗೆ ರಾಜ್ಯದ ಕರ ಸಮರ

12:06 AM Jan 06, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಕೇಂದ್ರ ಸರಕಾರದ ಜತೆಗೆ “ಕರಸಮರ’ಕ್ಕೆ ಮುಂದಾಗಿರುವ ರಾಜ್ಯ ಸರಕಾರ 14 ಹಾಗೂ 15ನೇ ಹಣಕಾಸು ಆಯೋಗದ ಶಿಫಾರಸುಗಳಿಂದ ರಾಜ್ಯದ ಮೇಲಾಗಿರುವ ಆರ್ಥಿಕ ಅಡ್ಡಪರಿಣಾಮಗಳ ಬಗ್ಗೆ 16ನೇ ಹಣಕಾಸು ಆಯೋಗ ಹಾಗೂ ಕೇಂದ್ರದ ಮುಂದೆ ಸಮರ್ಥ ವಾದ ಮಂಡಿಸಲು ನಿರ್ಧರಿಸಿದೆ.

Advertisement

ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ಹೇರಲು ಮೂವರು ಸದಸ್ಯರನ್ನು ಒಳಗೊಂಡ ತಾಂತ್ರಿಕ ಕೋಶವನ್ನು ವಿತ್ತೀಯ ಕಾರ್ಯನೀತಿ ಸಂಸ್ಥೆಯಲ್ಲಿ ಸ್ಥಾಪಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಪುಟ ಸಭೆಯಲ್ಲಿ ಸುದೀರ್ಘ‌ ಚರ್ಚೆ ನಡೆದಿದ್ದು, ಕೇಂದ್ರದ ನೀತಿಯ ಬಗ್ಗೆ ಭಾರೀ ಆಕ್ಷೇಪ ವ್ಯಕ್ತವಾಗಿದೆ. ತೆರಿಗೆ ರೂಪದಲ್ಲಿ ಸಂಗ್ರಹವಾಗುತ್ತಿದ್ದ ಹಣವನ್ನು ಕಳೆದ 5 ವರ್ಷದಿಂದ ಕೇಂದ್ರ ಸೆಸ್‌, ಸರ್ಚಾರ್ಜ್‌ ಎಂಬಿತ್ಯಾದಿ ಹೆಸರಿನಲ್ಲಿ ಕರವಾಗಿ ಮಾರ್ಪಡಿಸಿರುವುದರಿಂದ ರಾಜ್ಯಕ್ಕೆ ವಾರ್ಷಿಕ 8,200 ಕೋಟಿ ರೂ. ನಷ್ಟವಾಗುತ್ತಿದೆ. ಒಟ್ಟಾರೆಯಾಗಿ ಕೇಂದ್ರದಿಂದ ರಾಜ್ಯಕ್ಕೆ ವಿವಿಧ ಬಾಬ್ತುಗಳಿಂದ ಸುಮಾರು 70 ಸಾವಿರ ಕೋಟಿ ರೂ. ಆರ್ಥಿಕ ಖೋತಾ ಆಗಿದೆ ಎಂದು ಸಂಪುಟ ಸಭೆಯಲ್ಲಿ ಲೆಕ್ಕ ಹಾಕಲಾಗಿದೆ.

ಸಂಪುಟ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಕೇಂದ್ರದಿಂದ ಆಗುತ್ತಿರುವ ಅನ್ಯಾಯ ಹಾಗೂ ರಾಜ್ಯದ ಹೋರಾಟಗಳ ಬಗ್ಗೆ ಸುದೀರ್ಘ‌ ಮಾಹಿತಿ ನೀಡಿದ್ದಾರೆ.

ಅನ್ಯಾಯ ಎಲ್ಲೆಲ್ಲಿ ?
– ದೇಶದಲ್ಲಿ ಎರಡನೇ ಹೆಚ್ಚು ತೆರಿಗೆ ಪಾವತಿಸುವ ರಾಜ್ಯ ಕರ್ನಾಟಕ. ವಾರ್ಷಿಕ 4 ಲಕ್ಷ ಕೋಟಿ ರೂ. ಕೇಂದ್ರಕ್ಕೆ ಸಲ್ಲಿಕೆಯಾಗುತ್ತಿದ್ದರೆ 70 ಸಾವಿರ ಕೋಟಿ ರೂ. ಮಾತ್ರ ವಾಪಸ್‌ ಬರುತ್ತಿದೆ. ಇದು 100ರೂ.ನಲ್ಲಿ 12 ರೂ. ಮಾತ್ರ.

– ರಾಜ್ಯದ ಐಟಿ ಕ್ಷೇತ್ರದಿಂದ ಮೂರೂವರೆ ಲಕ್ಷ ಕೋಟಿ ರೂ. ರಫ್ತಾಗುತ್ತಿದ್ದು ಡಾಲರ್‌ ರೂಪದಲ್ಲಿ ವರಮಾನ ತಂದುಕೊಡುತ್ತಿದೆ. ಇದಕ್ಕೆ ಪ್ರತಿಯಾಗಿ ರಾಜ್ಯಕ್ಕೆ ನ್ಯಾಯ ಸಿಗುತ್ತಿಲ್ಲ.

Advertisement

– 14 ನೇ ಹಣಕಾಸು ಆಯೋಗದ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಸೇ. 4.71 ತೆರಿಗೆ ಪಾಲು ಬರುತ್ತಿತ್ತು. 15 ನೇ ಆಯೋಗದಲ್ಲಿ 3.64ಕ್ಕೆ ಇಳಿದಿದೆ. ಇದರಿಂದ ಕೇಂದ್ರದಿಂದ ಬರುವ ಅನುದಾನ, ತೆರಿಗೆಯಲ್ಲಿ ರಾಜ್ಯದ ಪಾಲು ಶೇ. 25 ಇಳಿಕೆಯಾಗಿದೆ. ಅಂದಾಜು ವರ್ಷಕ್ಕೆ 14 ಸಾವಿರ ಕೋಟಿ ರೂ. ಖೋತಾ ಆಗಿದೆ. 2020-21 ರಿಂದ ಐದು ವರ್ಷದಲ್ಲಿ 62 ಸಾವಿರ ಕೋಟಿ ರೂ. ನಷ್ಟ ಆಗುತ್ತಿದೆ.

– ಕೇಂದ್ರದಿಂದ ಬರುವ ತೆರಿಗೆಯಲ್ಲಿ ಶೇ. 41 ಮರು ಹಂಚಿಕೆ ಇರಬೇಕು. ಆದರೆ ಈಗ ಶೇ.30 ರಷ್ಟು ಮಾತ್ರ ಮಾಡಲಾಗುತ್ತಿದೆ. ತೆರಿಗೆ ಎಂದು ಕರೆಯುವ ಬದಲು ಕರ ಎಂದು ಬದಲಿಸಿ ಸೆಸ್‌, ಸರ್ಚಾಜ್‌ ಪಾಲನ್ನು ವಂಚಿಸಲಾಗುತ್ತಿದೆ. ಪೆಟ್ರೋಲ…, ಡೀಸೆಲ್‌ ತೆರಿಗೆ ಬದಲು ಸೆಸ್‌ ಎಂದು ಪರಿಗಣಿಸಿ ಸಂಗ್ರಹಿಸುವ 5ರಿಂದ 6 ಲಕ್ಷ ಕೋಟಿ ರೂ. ಹಣದಲ್ಲಿ ಶೇ. 95 ಕೇಂದ್ರವೇ ಇಟ್ಟುಕೊಳ್ಳುತ್ತಿದೆ. ಇದರಿಂದ ರಾಜ್ಯಕ್ಕೆ ವಾರ್ಷಿಕ 8,200 ಕೋಟಿ ನಷ್ಟ. ಇದುವರೆಗೆ ಒಟ್ಟು 22 ಸಾವಿರ ಕೋಟಿ ರೂ. ವಾರ್ಷಿಕ ನಷ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next