Advertisement

ನದಿ ದಡದಲ್ಲಿದ್ದರೂ ಕುಡಿವ ನೀರಿಲ್ಲ

02:44 PM May 01, 2019 | Team Udayavani |

ಶ್ರೀರಂಗಪಟ್ಟಣ: ಕಾವೇರಿ ನದಿ ಸಮೀಪವಿದ್ದರೂ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿಲ್ಲ. ಬಿಸಿಲಿನ ತಾಪಕ್ಕೆ ದಿನೇದಿನೆ ನೀರಿನ ಸಮಸ್ಯೆ ತಲೆದೋರಿದೆ. ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೂಡಲೇ ಗಮನಹರಿಸಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಮಹದೇವಪುರ ಗ್ರಾಪಂ ಸದಸ್ಯ ಎಂ.ವಿ.ಕೃಷ್ಣ ಆಗ್ರಹಿಸಿದ್ದಾರೆ.

Advertisement

ಗ್ರಾಮದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಯುತ್ತಿದೆ. ಹಳ್ಳ, ಕೊಳ್ಳಗಳು ಬತ್ತಿಹೋಗಿವೆ. ದನ, ಕರುಗಳಿಗೆ ಕುಡಿಯಲು ನೀರಿಲ್ಲ. ಬಟ್ಟೆ ತೊಳೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕುಡಿಯುವ ನೀರಿಗಾಗಿ ರೈತರು ತಮ್ಮ ಜಮೀನಿನಲ್ಲಿ ಕೊರೆಸಿರುವ ಕೊಳವೇ ಭಾಗಗಳನ್ನೇ ಜನರು ಆಶ್ರಯಿಸಿದ್ದಾರೆ. ತಾಲೂಕಿನಲ್ಲಿರುವ ಬಹುತೇಕ ಕೆರೆಗಳು ಬತ್ತಿಹೋಗಿವೆ. ಮಹದೇವಪುರ ಗ್ರಾಮ ಅಲ್ಲದೆ ಜಕ್ಕನಹಳ್ಳಿ, ಹಾಲಗೂಡು ಕೆರೆಗಳಲ್ಲಿ ನೀರಿಲ್ಲ. ಇದರಿಂದ ರೈತರು ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ. ರೈತರು ಜಮೀನಿನ ನೀರನ್ನೇ ಆಶ್ರಯಿಸುವಂತಾಗಿದೆ.

ಕಲುಷಿತ ನೀರು ಪೂರೈಕೆ: ಕಾವೇರಿ ನದಿಯಿಂದ ಕಚ್ಚಾ ನೀರನ್ನು ಈ ಟ್ಯಾಂಕ್‌ಗಳಿಗೆ ತುಂಬಿಸಿ ನಲ್ಲಿಗಳ ಮೂಲಕ ಪೂರೈಸಲಾಗುತ್ತಿದೆ. ಸ್ನಾನ ಮಾಡಲಿಕ್ಕೂ ಯೋಗ್ಯವಲ್ಲದ ನೀರನ್ನು ನಲ್ಲಿಗಳ ಮೂಲಕ ಬಿಡುತ್ತಿದ್ದಾರೆ. ಈ ನೀರಲ್ಲಿ ಸ್ನಾನ ಮಾಡಿದರೆ ಚಮರ್ವ್ಯಾದಿಗಳು ಕಾಣಿಸಿಕೊಳ್ಳುತ್ತಿವೆ. 11 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಸದ್ಯ ಒಂದೇ ಒಂದು ಶುದ್ಧ ಕುಡಿಯುವ ಘಟಕದಿಂದ ಜನರು ಸಾಲಿನಲ್ಲಿ ನಿಂತು ಕುಡಿಯುವ ನೀರು ಹಿಡಿದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಆಡಳಿತ ಶೀಘ್ರ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಪೂರ್ವ ಸಿದ್ಧತೆ ನಡೆಸಬೇಕು ಎಂದು ಗ್ರಾಮದ ಎಂ.ಕೃಷ್ಣ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next