ನಾರಾಯಣಪುರ: ಕೃಷ್ಣಾ ನದಿ ತೀರದ ದಕ್ಷಿಣ ಕಾಶಿ ಶ್ರೀ ಛಾಯಾ ಭಗವತಿ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರ ಪುರೋಹಿತರ ನೇತೃತ್ವದಲ್ಲಿ ಐದು ದಿನಗಳ ಕಾಲ ನಡೆಯುವ ಪವಿತ್ರ ಯಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ಶ್ರೀಛಾಯಾ ದೇವಿಯೂ ಸೂರ್ಯ ದೇವರಿಗಾಗಿ ಕಠಿಣ ತಪಸ್ಸುಗೈದು ಸೂರ್ಯ ದೇವರನ್ನು ಪತಿಯಾಗಿ ಪಡೆದಳು, ಕ್ಷೇತ್ರದ ಮಹಿಮೆ ಸಾರುವ ಅಕ್ಷಯ ತೃತೀಯ ದಿನ ದೇಗುಲದ ಗರ್ಭಗುಡಿಯ ಶ್ರೀಛಾಯಾ ಭಗವತಿಯ ಪಾದುಕೆಗಳಿಗೆ ಸೂರ್ಯ ದೇವನ ಪ್ರಥಮ ಕಿರಣ ಬೀಳುವುದೇ ಅತ್ಯದ್ಬುತ ದೃಶ್ಯವಾಗಿದೆ ಇಂತಹ ಕ್ಷೇತ್ರದ ಮಹಿಮೆಯ ಕುರಿತು ಸ್ಕಂದ ಪುರಾಣದಲ್ಲಿ ಉಲ್ಲೇಖವಿದ್ದು, ಇಂತಹ ವಿಶಿಷ್ಟತೆಗೆ ಹೆಸರುವಾಸಿಯಾದ ಪುಣ್ಯ ಕ್ಷೇತ್ರಕ್ಕೆ ದೇವಿಯ ದರ್ಶನಕ್ಕೆ ಅಪಾರ ಭಕ್ತರು ಆಗಮಿಸುತ್ತಾರೆ.
ಯಾತ್ರಾ ಮಹೋತ್ಸವ ಹಾಗೂ ಕಾರ್ಯಕ್ರಮವು ಏ. 30ರಿಂದ 5ದಿನಗಳ ಕಾಲ ನಡೆಯಲಿದ್ದು ಕಾರ್ಯಕ್ರಮ ಯಶಸ್ವಿಗೊಳಿಸುವುದು ಹಾಗೂ ಮೇ 3ರ ಮಂಗಳವಾರ ಅಕ್ಷಯ ತೃತೀಯ ದಿನದಂದು ಕ್ಷೇತ್ರ ಪುರೋಹಿತರ ನೇತೃತ್ವದಲ್ಲಿ 18 ತೀರ್ಥಗಳಲ್ಲಿ ಭಕ್ತರ ಪವಿತ್ರ ಸ್ನಾನ ಗೈಯುವ ವಿಶೇಷ ಕಾರ್ಯಕ್ರಮದ ತಯಾರಿಗೆ ದೇಗುಲ ಅರ್ಚಕ ವರ್ಗ ಅಣಿಯಾಗುತ್ತಿದ್ದಾರೆ.
ಏ. 30 ಶನಿವಾರ ಅಮಾವಾಸ್ಯೆ ಬೆಳಗ್ಗೆ 5ಗಂಟೆಗೆ ಸುಪ್ರಭಾತ, ವೇದ ಘೋಷ ನಂತರ ದೇವಿಗೆ ಅಭಿಷೇಕ, ಘಟಸ್ಥಾಪನೆ, ಕ್ಷೇತ್ರ ಉಪವಾಸದೊಂದಿಗೆ ಶ್ರೀ ಛಾಯಾ ಭಗವತಿ ಯಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಮೇ 1ರಂದು ವೈಶಾಖ ಶು. ಪ್ರತಿಪದ ಕ್ಷೇತ್ರ ಉಪವಾಸ ಮೇ 2ರಂದು ಶ್ರಾದ್ಧ ವಿಧಿ, ಪಿಂಡ ಪ್ರಧಾನ ನೆರವೇರಲಿದ್ದು ಅಂದು ಸಂಜೆ ಸಂಗೀತ ಸೇವೆ, ದಾಸ ವೈಭವ, ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ಜರುಗಲಿವೆ.
ಮೇ 4ರಂದು ಘಟವಿಸರ್ಜನೆ, ಗಂಗಾರಾಧನೆಯೊಂದಿಗೆ ಯಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ. ಶ್ರೀಛಾಯಾ ಭಗವತಿ ಕ್ಷೇತ್ರವು ಪುರಾಣ ಪ್ರಸಿದ್ಧ ಪುಣ್ಯ ಭೂಮಿಯಾಗಿದ್ದು, ದೂರದೂರುಗಳಿಂದ ಅಪಾರ ಭಕ್ತರು ಸುಕ್ಷೇತ್ರಕ್ಕೆ ಆಗಮಿಸಿ ಅಕ್ಷಯ ತೃತೀಯ ದಿನದಂದು 18 ತೀರ್ಥಗಳಲ್ಲಿ ಪವಿತ್ರ ಸ್ನಾನಗೈದು ದೇವಿಯ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸುತ್ತಾರೆ.
ಮೇ 3ರಂದು ಅಕ್ಷಯ ತೃತೀಯ ದಿನದಂದು ಶ್ರೀ ಛಾಯಾ ಭಗವತಿ ಕ್ಷೇತ್ರದಲ್ಲಿರುವ 18 ತೀರ್ಥಗಳಲ್ಲಿ ಪವಿತ್ರ ಸ್ನಾನ ಮಾಡಿದರೆ ವಿಶಿಷ್ಟ ಫಲ ಲಭಿಸಲಿದೆ ಎಂಬುದು ಭಕ್ತರ ನಂಬಿಕೆಯಾಗಿದ್ದು, ತೀರ್ಥ ಸ್ನಾನದ ಬಳಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಸಂತ ಪೂಜೆ, ಶ್ರೀದೇವಿಗೆ ಬಾಗಿಣ ಅರ್ಪಣೆ ತೀರ್ಥ ಪ್ರಸಾದ ನೆರವೇರಲಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಸುಕ್ಷೇತ್ರಕ್ಕೆ ಆಗಮಿಸಿ ಪವಿತ್ರ ಸ್ನಾನದಲ್ಲಿ ಪಾಲ್ಗೊಳ್ಳುವದು ವಿಶೇಷ.
-ಚಿದಂಬರಭಟ್ ಜೋಶಿ, ಅರ್ಚಕರು ಶ್ರೀ ಛಾಯಾ ಭಗವತಿ ಕ್ಷೇತ್ರ
-ಬಸವರಾಜ ಎಂ. ಶಾರದಳ್ಳಿ