ಬೆಂಗಳೂರು: ಬಹುನಿರೀಕ್ಷಿತ “ನಮ್ಮ ಮೆಟ್ರೋ’ ಹೆಚ್ಚುವರಿ ಬೋಗಿಗಳ ಸೇರ್ಪಡೆಗೆ ಕಾಲ ಸನ್ನಿಹಿತವಾಗಿದ್ದು, ಪ್ರೇಮಿಗಳ ದಿನದಂದು ಮೊದಲ ಹಂತದಲ್ಲಿ 3 ಬೋಗಿಗಳು ಬಿಇಎಂಎಲ್‌ನಿಂದ ಬಿಎಂಆರ್‌ಸಿಗೆ ಹಸ್ತಾಂತರಗೊಳ್ಳಲಿವೆ. ಆದರೆ, 6 ಬೋಗಿಗಳ ಮೆಟ್ರೋ ಸಂಚಾರ ಭಾಗ್ಯಕ್ಕೆ ಪ್ರಯಾಣಿಕರು ಇನ್ನೂ 2 ತಿಂಗಳು ಕಾಯುವುದು ಅನಿವಾರ್ಯ.
ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಮೆಟ್ರೋ ರೈಲನ್ನು 3ರಿಂದ 6 ಬೋಗಿಗಳಿಗೆ ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ನಿರ್ಧರಿಸಿತ್ತು. ಅದರಂತೆ 150 ಹೆಚ್ಚುವರಿ ಬೋಗಿಗಳ ತಯಾರಿಕೆಗೆ ಬಿಇಎಂಎಲ್‌ಗೆ ಬೇಡಿಕೆ ಸಲ್ಲಿಸಿತ್ತು. ಈ ಪೈಕಿ ಮೊದಲ ಹಂತವಾಗಿ ಫೆ.14ರಂದು 3 ಬೋಗಿಗಳು ಹಸ್ತಾಂತರಗೊಳ್ಳಲಿವೆ.
ಇಂದು ಫ್ಯಾಕ್ಟರಿ ಟೆಸ್ಟ್: 3 ಬೋಗಿಗಳನ್ನು ಒಳಗೊಂಡ ಮೊದಲ ಸೆಟ್ ಈಗಾಗಲೇ ಸಿದ್ಧಗೊಂಡಿದ್ದು, ಸೋಮವಾರ ಬಿಇಎಂಎಲ್‌ನ ಫ್ಯಾಕ್ಟರಿಯಲ್ಲಿ ಪರೀಕ್ಷಾ ಸಂಚಾರ ನಡೆಯಲಿದೆ. ನಿಗಮದ ಕಾರ್ಖಾನೆಯಲ್ಲಿ ಸುಮಾರು 250 ಮೀ. ಉದ್ದದ ಹಳಿ ಇದೆ. ಅಲ್ಲಿ ಈ ಬೋಗಿಗಳನ್ನು ಪರೀಕ್ಷಾರ್ಥ ಸಂಚಾರ ನಡೆಸಲಾಗುವುದು. ನಂತರ ಫೆ. 8ರಿಂದ 12ರ ಅವಧಿಯಲ್ಲಿ ಹಸ್ತಾಂತರ ಪೂರ್ವ ಪರೀಕ್ಷೆ ನಡೆಯಲಿದೆ.
ಇದಾದ ಮೇಲೆ ಬಿಎಂಆರ್‌ಸಿ ಡಿಪೋಗೆ ಬೋಗಿಗಳು ಬಂದಿಳಿಯಲಿವೆ ಎಂದು ಬಿಇಎಂಎಲ್ ತಾಂತ್ರಿಕ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು. ಮೆಟ್ರೋ ಬೋಗಿಗಳು ಈಗಲೇ ಹಸ್ತಾಂತರಗೊಂಡಿದ್ದರೂ ವಾಣಿಜ್ಯ ಸಂಚಾರ ಆರಂಭಕ್ಕೆ ಹಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಪ್ರಸ್ತುತ ಇರುವ 3 ಬೋಗಿಗಳ ರೈಲಿನ ಒಂದು ತುದಿಯನ್ನು ಬಿಡಿಸಿ ಇವುಗಳ ನಡುವೆ 3 ಬೋಗಿಗಳನ್ನು ಜೋಡಿಸಲಾಗುವುದು.
ನಂತರ 6 ಬೋಗಿಗಳ ರೈಲು ಇಂತಿಷ್ಟು ದಿನಗಳ ಕಾಲ ಪರೀಕ್ಷಾರ್ಥ ಸಂಚಾರ ನಡೆಸಬೇಕು. ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ಪಡೆಯಬೇಕು. ಇದೆಲ್ಲದಕ್ಕೂ ಸುಮಾರು 3 ತಿಂಗಳು ಬೇಕಾಗುತ್ತದೆ. ಆದರೆ, ಮಾರ್ಚ್ ಒಳಗೇ ಇದೆಲ್ಲವನ್ನೂ ಪೂರ್ಣಗೊಳಿಸುವ ಗುರಿ ಇದೆ ಎಂದು ಬಿಎಂಆರ್‌ಸಿ ಹಿರಿಯ ಅಧಿಕಾರಿಯೊಬ್ಬರು ತಿಳಿದ್ದಾರೆ.
ಬ್ರೇಕಿಂಗ್ ಡಿಸ್ಟನ್ಸ್ ಹೆಚ್ಚಳ?: 6 ಬೋಗಿಗಳಿಗೆ “ನಮ್ಮ ಮೆಟ್ರೋ’ ವೇಗದಲ್ಲಾಗಲಿ ಹಾಗೂ ರೈಲು ಸಂಚಾರಕ್ಕೆ ಬೇಕಾಗುವ ವಿದ್ಯುತ್ ಬಳಕೆಯಲ್ಲಾಗಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಪ್ರಸ್ತುತ ಪ್ರತಿ ವ್ಯಕ್ತಿಗೆ 6 ಯೂನಿಟ್ ವಿದ್ಯುತ್ ಖರ್ಚಾಗುತ್ತಿದೆ. ಆದರೆ, “ಬ್ರೇಕಿಂಗ್ ಡಿಸ್ಟನ್ಸ್’ನಲ್ಲಿ ಸ್ವಲ್ಪ ವ್ಯತ್ಯಾಸ ಆಗಲಿದೆ. ಈಗ ಮೆಟ್ರೋ ರೈಲಿಗೆ ತುರ್ತು ಬ್ರೇಕ್ ಹಾಕಿದರೆ, 140 ಮೀ. ದೂರದಲ್ಲಿ ಹೋಗಿ ನಿಲ್ಲುತ್ತದೆ. 6 ಹೆಚ್ಚುವರಿ 3 ಬೋಗಿಗಳು ಸೇರ್ಪಡೆಗೊಂಡ ನಂತರ ಈ ನಿಲುಗಡೆ ದೂರ 200 ಮೀ. ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.