Advertisement

ಆ ಬೆಟ್ಟದಲ್ಲಿ, ಬೆಳದಿಂಗಳಲ್ಲೀ…

01:09 PM Jul 18, 2019 | Sriram |

ಕುಮಾರ ಪರ್ವತವನ್ನು ಹತ್ತುವುದು ಸುಲಭವೇನಲ್ಲ. ಧೈಹಿಕವಾಗಿ ಗಟ್ಟಿಯಾಗಿದ್ದರೂ, ಮಾನಸಿಕವಾಗಿ ಸ್ಥಿರವಾಗಿರಬೇಕು. ಪುಷ್ಪಗಿರಿಯಿಂದ ಕಲ್ಲುಮಂಟಪದವರೆಗಿನ ಹಾದಿ ಇದೆಯಲ್ಲ, ಅದು ನಮ್ಮ ಹೃದಯಗಳನ್ನೂ ಗಡಗಡ ನಡುಗಿಸಿಬಿಟ್ಟಿತು. ಪರ್ವತದ ನೆತ್ತಿಯ ಮೇಲೆ ನಿಂತಾಗ ಸ್ವರ್ಗ ಕಣ್ಣೆದುರಿಗೆ ಬಂದು ಈ ಎಲ್ಲವೂ ಮರೆತುಹೋಯಿತು.

Advertisement

ಕುಮಾರ ಪರ್ವತ ಏರುವುದು ಒಂದು ವರ್ಷದ ಕನಸು. ಕೊನೆಗೂ ಕೈ ಗೂಡಿತು. ನಮ್ಮದು ಒಂಭತ್ತು ಜನ ಸ್ನೇಹಿತರ ತಂಡ. ಮೆಲ್ಕಾರು ಬಸ್‌ ಹಿಡಿದು ಅಲ್ಲಿಂದ ಸುಬ್ರಮಣ್ಯ ತಲುಪಿದಾಗ ರಾತ್ರಿಯಾಗಿತ್ತು. ಹೊಟ್ಟೆಯಲ್ಲಿ ಹಸಿವಿನ ತಾಂಡವ ಶುರುವಾಗಿತ್ತು. ಅಲ್ಲೆ ಒಂದು ಲಾಡ್ಜ್ನಲ್ಲಿ ರೂಮ್‌ ಮಾಡಿ, ಲಗೇಜ್‌ ಇರಿಸಿದೆವು. ಮಠದ ಪ್ರಸಾದವೆ ಅಂದಿನ ಭೋಜನ. ಬೆಳಗ್ಗೆ ಬೇಗ ಎದ್ದು ಸ್ನಾನ, ತಿಂಡಿ ಮುಗಿಸಿಕೊಂಡು, ಚಾರಣಕ್ಕೆ ಬೇಕಾಗುವ ಆಹಾರ ಪದಾರ್ಥಗಳನ್ನು ಕೊಂಡು ಆಟೋರಿಕ್ಷಾ ಹಿಡಿದು ಚಾರಣದ ಸ್ಥಳದತ್ತ ಹೊರಟೆವು.

ಅಷ್ಟೋತ್ತಿಗಾಗಲೆ ಸೂರ್ಯನ ಬಿಸಿಲು ಚುರುಕಾಗಿತ್ತು. ಈ ಮೋದಲೇ ಒಮ್ಮೆ ಕುಮಾರ ಪರ್ವತದ ಚಾರಣದ ಅನುಭವ ಹೊಂದಿದ್ದ ಸಿದ್ದಿಕ್‌, ಚಂದ್ರು ಮತ್ತು ಷರೀಫ‌ರೇ ನಮಗೆ ಗೈಡು. ನಮ್ಮ ಚಾರಣವನ್ನು ಸ್ವಾಗತಿಸಿದ್ದು ಆಕಾಶದೆತ್ತರಕ್ಕೆ ಬೆಳೆದು ನಿಂತಿದ್ದ ಹೆಮ್ಮರಗಳು. ಎಲ್ಲರು ಸಾಲಾಗಿ ಬೆಟ್ಟ ಹತ್ತತೊಡಗಿದೆವು. ಮಾರ್ಗಮಧ್ಯದಲ್ಲಿ ಅಲ್ಲಲ್ಲಿ ವಿಶ್ರಾಂತಿ. ನೀರಿನ ಝರಿಗಳು ಸಿಕ್ಕಾಗ ಸ್ವಲ್ಪ ಚೆಲ್ಲಾಟವಾಡಿ, ತಂದಿದ್ದ ತಿಂಡಿಗಳನ್ನು ತಿಂದು ಮುಂದೆ ಸಾಗುತ್ತಿದ್ದೆವು. ಬರು ಬರುತ್ತ ಬೆಟ್ಟದಲ್ಲಿ ಮರಗಳ ಸಂಖ್ಯೆ, ಗಾತ್ರ ಎರಡೂ ಕ್ಷೀಣಿಸುತ್ತ ಚಿಕ್ಕ ಗಿಡಗಳು ಕಾಣತೊಡಗಿದಾಗ ಮಧ್ಯಾಹ್ನದ ಸೂರ್ಯ ನೆತ್ತಿಯ ಮೇಲೆ. ಅಷ್ಟೊತ್ತಿಗಾಗಲೇ ಫಾರೆಸ್ಟ್‌ ಆಫೀಸು ಎದುರಾಯಿತು. ಸ್ವಲ್ಪ ವಿಶ್ರಾಂತಿ ಪಡೆದು ಆಫೀಸಿನ ಎದುರಿಗಿದ್ದ ಬಯಲಲ್ಲಿ ಒಂದು ತಾತ್ಕಾಲಿಕವಾಗಿ ಬಿಡಾರ ಹೂಡಿದೆವು. ಒಲೆಗೆ ಕಲ್ಲು, ಕಟ್ಟಿಗೆಗಳನ್ನು ಸಂಗ್ರಹಿಸಿದ ಸ್ವಲ್ಪ ಹೊತ್ತಲ್ಲಿ ಅಡುಗೆಯೂ ತಯಾರಾಯಿತು. ಎಲ್ಲರಿಗೂ ಸುಸ್ತಾಗಿದ್ದರಿಂದ ಊಟ ಮುಗಿಸಿ ಬೇಗನೆ ನಿದ್ರಾದೇವತೆಗೆ ಶರಣಾದೆವು.

ಬೆಳಗ್ಗೆ ಬೇಗ ಎದ್ದು ಬಿಸಿ,ಬಿಸಿ ಚಹಾದ ಸವಿಯೊಂದಿಗೇ ನಮ್ಮ ಚಾರಣ ಶುರುವಾದದ್ದು. ಸೆಲ್ಪಿ ಕಸರತ್ತು ದಾರಿಯುದ್ದಕ್ಕೂ ನಡೆಯುತ್ತಲೇ ಇತ್ತು. ಪುಷ್ಪಗಿರಿಗಿಂತ ಮೊದಲೆ ಸೂರ್ಯ ನಮಗೆ ದರ್ಶನ ನೀಡಿದ.

ಹುಲ್ಲು ಗರಿಗಳ ಮೇಲೆ ಕುಳಿತ ಮಂಜಿನ ಹನಿಗಳು, ಕೈಗೆಟುಕುವಂತಿರುವ ಮೊಡಗಳ ಸಾಲು, ಬೀಸುವ ತಂಗಾಳಿ ಇವೆಲ್ಲವುಗಳು ದೇಹದ ಆಯಾಸವನ್ನು ಸವರಿ ಹಾಕಿಬಿಟ್ಟವು. ಕಣ್ಣು ಮುಚ್ಚಿದರೆ ಒಂದು ಕ್ಷಣ ಪರವಶ. ಪುಷ್ಪಗಿರಿಯಲ್ಲಿ ನಿಂತು ಸೂಯೊìದಯ ನೊಡುವುದೇ ಒಂದು ಭಾಗ್ಯ. ಪುಷ್ಪಗಿರಿಯಿಂದ ಕುಮಾರಪರ್ವತ ಹತ್ತುವುದು ತುಸು ಕಸರತ್ತಿನ ಕೆಲಸವೇ. ಕಡಿದಾದ ಬೃಹತ್‌ ಬಂಡೆಗಲ್ಲುಗಳ ಮುಂದೆ ನಿಂತಾಗ ಕುಬjರಾಗುತ್ತೇವೆ. ಅವುಗಳನ್ನು ಬಳಸಿ ಹತ್ತುವಾಗ ಒಂದು ಕ್ಷಣ ಮನದಲ್ಲಿ ಭಯ ಮೂಡದೇ ಇರಲಾರದು. ಪುಷ್ಪಗಿರಿಬೆಟ್ಟ ಇಳಿದು ಕುಮಾರ ಪರ್ವತದ ನೆತ್ತಿಯ ಮೇಲೆ ನಿಂತಾಗ ಸ್ವರ್ಗ ಕಣ್ಣೆದುರಿಗೆ. ನೀಲಿ ಆಕಾಶದಲ್ಲಿ ತೇಲುವ ಮೋಡಗಳ ಸಂತೆ. ಕೆಳಗೆ ಸೋಮವಾರ ಪೇಟೆಯ ಪಕ್ಷಿನೋಟ. ಇರುವೆ ಸಾಲಿನಂಥ ಮನೆಗಳು, ಭೈತಲೆಯಂತೆ ಕಾಣುತ್ತಿದ್ದ ರಸ್ತೆಗಳು. ಎಲ್ಲದಕ್ಕೂ ಹಿಮವನ್ನು ಚುಮುಕಿಸಿದಂತೆ ಭಾಸವಾಗುತ್ತಿತ್ತು.

Advertisement

ಅಲ್ಲೇ ಕಲ್ಲಿನ ಹಳೆಯ ದೇವಾಲಯವಿದೆ. ಅದರ ಮುಂದೆ ಕಲ್ಲಿನಲ್ಲಿ ಕೆತ್ತಿದ ಅಸ್ಪಷ್ಟವಾದ ಬರಹ. ಆಗಲೆ ಸೂರ್ಯನ ಬಿಸಿಲು ರಂಗೇರತೊಡಗಿದ್ದರಿಂದ, ಅದನ್ನು ಸಂಶೋಧಿಸುವ ಗೋಜಿಗೆ ಹೋಗದೆ, ಲಗುಬಗೆಯಲ್ಲಿ ಬಿಡಾರ ತಲುಪಿದೆವು. ಅಂದಿನ ರಾತ್ರಿಯನ್ನು ಅಲ್ಲೆ
ಕಳೆಯುವುದಾಗಿ ಮೊದಲೇ ನಿರ್ಧರಿಸಿದ್ದರಿಂದ ವಿಶ್ರಾಂತಿಗಾಗಿ ನೆಲಕ್ಕೊರಗಿದೆವು. ನಮ್ಮ ಚಾರಣದ ಆ ಎರಡನೆ ರಾತ್ರಿಯೂ ಕೂಡ ಒಂದು ಚಿರನೆನಪೇ. ಏಕೆಂದರೆ, ಕುಮಾರ ಪರ್ವತದ ನೆತ್ತಿಯ ಮೇಲೆ ಕ್ಯಾಂಪ್‌ಫೈರ್‌ ಹಾಕಿದ್ದೆವು. ಸುತ್ತ ಗಾಳಿಯ ನರ್ತನಕ್ಕೆ ಫೈರ್‌ ಕ್ಯಾಂಪಿನ ಬಿಸಿಯಾದ ಹಬೆಯ ಸಾಥ್‌. ಆವತ್ತು ರಾತ್ರಿ ಪೂರ ಬೆಂಕಿಯ ಮುಂದೆ ಕುಳಿತು, ಹಳೆ ಪ್ರೇಮಕಥೆಗಳು, ಕೆಲವರ ವ್ಯಥೆಗಳನ್ನು ಕೆದಕ್ಕಿದ್ದೇ ಆಯಿತು. ಮಧ್ಯೆ ಮಧ್ಯೆ ಕುಹಕ, ಜೋಕು, ಒಬ್ಬರನ್ನೊಬ್ಬರು ಕಾಲೆಳೆಯುವ ಆಟಗಳೂ ನಡೆದವು. ಬೆಟ್ಟದ ಮೇಲೆ ಕಳೆದ ಆ ರಾತ್ರಿ ಇಂದಿಗೂ ಒಂದು ರೀತಿ ಕನಸಂತೆಯೇ ಇದೆ.

ಬೆಳಗಿನ ಜಾಮ ಎದ್ದು ಮೆಲ್ಲಗೆ ಬೆಟ್ಟದಿಂದ ಇಳಿಯುತ್ತಲೇ ಬಂದದ್ದು ಪುಷ್ಪಗಿರಿಗಿಂತ ಮೊದಲೆ ಸಿಗುವ ಒಂದು ಕಲ್ಲು ಮಂಟಪಕ್ಕೆ. ಅಷ್ಟೊತ್ತಿಗೆ ಸೂರ್ಯ ಡ್ನೂಟಿಗೆ ಬಂದಿದ್ದ. ಹೀಗಾಗಿ, ಸೂರ್ಯೋದಯದ ರಮಣೀಯ ನೋಟಕ್ಕೆ ನಮ್ಮ ಕಣ್ಣುಗಳು ಸಾಕ್ಷಿಯಾದವು. ಹಾಗೇ ಸ್ವಲ್ಪ ವಿಶ್ರಾಂತಿ ಕೂಡ ಆಯ್ತು. ಎಚ್ಚರಿಕೆ ವಿಚಾರ ಏನೆಂದರೆ, ಪುಷ್ಪಗಿರಿಯಿಂದ ಕಲ್ಲುಮಂಟಪದವರೆಗಿನ ಹಾದಿ ತೀರಾ ಕಡಿದು. ಚೂರು ಮೈಮರೆತರು ಅಪಾಯ ತಪ್ಪಿದ್ದಲ್ಲ. ಕೈಯಲ್ಲಿ ಊರುಗೊಲಿದ್ದರಿಂದ ಬಚಾವ್‌. ಸುರಕ್ಷತೆಗೆ ಇರಲಿ ಅಂಥ ಪ್ರಥಮ ಚಿಕಿತ್ಸಾ ಕಿಟ್‌ ಜೊತೆಗೆ ಇಟ್ಟುಕೊಂಡದ್ದು ಒಳ್ಳೆಯದೇ ಆಗಿತ್ತು. ಹಾಗೇ ಮೆಲ್ಲಗೆ ಭಯ, ರೋಮಂಚನಗಳ ಸಂಘದಲ್ಲಿ ಬೆಟ್ಟದಿಂದ ಇಳಿದು ಮಂಗಳೂರ ಕಡೆಗೆ ಮುಖ ಮಾಡಿದೆವು.

ಇವೆಲ್ಲ ಜೊತೆಗಿರಲಿ
ಕುಮಾರ ಪರ್ವತ ದೊಡ್ಡ ಬೆಟ್ಟ. ಇದನ್ನು ಏರಲು ಮಾನಸಿಕವಾಗಿ, ಧೈಹಿಕವಾಗಿ ಸದೃಢವಾಗಿರಬೇಕು. ಹೀಗಾಗಿ, ಮಾರ್ಗ ಮಧ್ಯ ತಿನ್ನಲು ಖರ್ಜೂರ ಮತ್ತಿರ ಒಣ ಹಣ್ಣುಗಳು, ಬಿಸ್ಕೆಟ್‌ಎನರ್ಜಿ ಡ್ರಿಂಕ್‌, ಬ್ರೆಡ್‌ ಜಾಮ್‌ ಸೂಕ್ತ. ಕುರುಕಲು ತಿಂಡಿ, ಜಂಕ್‌ ಫ‌ುಡ್‌ ಗಳು ಹೆಚ್ಚು ಸೂಕ್ತವಲ್ಲ. ನೀರಿಗಾಗಿ ಬಾಟಲಿ ತೆಗೆದುಕೊಂಡು ಹೋಗುವುದು ಸೂಕ್ತ. ಉತ್ತಮ ಗುಣಮಟ್ಟದ ಶೂ, ಬೆಳಗಿನ ಚಳಿ ತಾಳಲು ಸ್ವೆಟರ್‌, ಕೊಟ್‌ಗಳಿದ್ದರೆ ಒಳಿತು ಚಾರಣ ಸರಾಗ.

-ಶಿವಾನಂದ ಹರ್ಲಾಪುರ, ಗದಗ

Advertisement

Udayavani is now on Telegram. Click here to join our channel and stay updated with the latest news.

Next