Advertisement

ದೇಶದ ಅರ್ಧಭಾಗ ಆವರಿಸಿದ ಕೋವಿಡ್ ಸೋಂಕು ; 9,000 ದಾಟಿದ ಸೋಂಕಿತರು

03:27 AM Apr 13, 2020 | Hari Prasad |

ನವದೆಹಲಿ: ಕೋವಿಡ್19 ಮಹಾಮಾರಿಯ ವ್ಯಾಪಿಸುವಿಕೆಗೆ ಕಡಿವಾಣ ಹಾಕಬೇಕೆಂಬ ಉದ್ದೇಶದಿಂದ ದೇಶವಿಡೀ ಲಾಕ್‌ ಡೌನ್‌ ಆಗಿ 3 ವಾರ ಕಳೆದರೂ, ಸೋಂಕು ಮಾತ್ರ ಎಗ್ಗಿಲ್ಲದಂತೆ ಪ್ರಯಾಣ ಮುಂದುವರಿಸಿದೆ. ಪ್ರಸ್ತುತ ಕೋವಿಡ್ ಸೋಂಕು ದೇಶದ ಅರ್ಧಭಾಗವನ್ನು ಆಕ್ರಮಿಸಿಕೊಂಡಿದೆ ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ.

Advertisement

ದೇಶದ 718 ಜಿಲ್ಲೆಗಳ ಪೈಕಿ ಶೇ.50ರಷ್ಟು ಜಿಲ್ಲೆಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ, ಒಂದೇ ವಾರದಲ್ಲಿ ಪ್ರಕರಣಗಳು ದುಪ್ಪಟ್ಟಾಗಿವೆ. ಕಳೆದ ಭಾನುವಾರ 3,500 ಆಗಿದ್ದ ಸೋಂಕಿತರ ಸಂಖ್ಯೆ, ಈ ಭಾನುವಾರ 8 ಸಾವಿರ ದಾಟಿದೆ ಎಂದು ಸರ್ಕಾರದ ಅಂಕಿಅಂಶವೇ ತಿಳಿಸಿದೆ. ಮಾ.29ರಂದು 160 ಜಿಲ್ಲೆಗಳಿಗೆ ವ್ಯಾಪಿಸಿದ್ದ ಸೋಂಕು, ಏ.6ರ ವೇಳೆಗೆ 284 ಹಾಗೂ ಪ್ರಸ್ತುತ 364 ಜಿಲ್ಲೆಗಳಿಗೆ ಹಬ್ಬಿದೆ.

24 ಗಂಟೆಯಲ್ಲಿ 909 ಪ್ರಕರಣ: ಕೇವಲ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 909 ಮಂದಿಗೆ ಸೋಂಕು ದೃಢಪಟ್ಟಿದೆ. ಜತೆಗೆ, 34 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 9,204 ಆಗಿದ್ದು, ಸಾವಿನ ಸಂಖ್ಯೆ 327 ಕ್ಕೇರಿದೆ.

ಇದರ ನಡುವೆಯೂ ಸಮಾಧಾನಪಟ್ಟುಕೊಳ್ಳುವಂಥ ಸುದ್ದಿ ಏನೆಂದರೆ, ಈವರೆಗೆ 716 ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. 24 ಗಂಟೆಗಳ ಅವಧಿಯಲ್ಲೇ 74 ಮಂದಿ ಗುಣಮುಖರಾಗಿದ್ದಾರೆ. ಅಲ್ಲದೆ ಒಟ್ಟು ಪ್ರಕರಣಗಳ ಪೈಕಿ ಶೇ.20ರಷ್ಟು ಸೋಂಕಿತರಿಗೆ ಮಾತ್ರ ತುರ್ತು ನಿಗಾ ಘಟಕದ ಅವಶ್ಯಕತೆ ಎದುರಾಗಿತ್ತು ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ತಿಳಿಸಿದ್ದಾರೆ.

ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ, ಅದನ್ನು ಎದುರಿಸಲು ನಾವು ಸಂಪೂರ್ಣ ಸಿದ್ಧತೆ ನಡೆಸಿದ್ದೇವೆ. ದೇಶಾದ್ಯಂತ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆಯ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವ ಕೆಲಸ ಆರಂಭಿಸಿದ್ದೇವೆ. ಇದಕ್ಕೆ ನಿಮ್ಹಾನ್ಸ್‌, ಏಮ್ಸ್ ಸೇರಿದಂತೆ 14 ಪ್ರಮುಖ ಸಂಸ್ಥೆಗಳನ್ನು ಮಾರ್ಗದರ್ಶಕ ಸಂಸ್ಥೆಗಳನ್ನಾಗಿ ಗುರುತಿಸಿದ್ದೇವೆ. ಈ ಸಂಸ್ಥೆಗಳು ಇತರೆ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ನೆರವು ನೀಡಲಿವೆ ಎಂದೂ ಅಗರ್ವಾಲ್‌ ಮಾಹಿತಿ ನೀಡಿದ್ದಾರೆ.

Advertisement

40 ಲಸಿಕೆಗಳ ಅಭಿವೃದ್ಧಿ?
ಕೋವಿಡ್ ಗೆ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, 40ಕ್ಕೂ ಹೆಚ್ಚು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ಯಾವುದೂ ಮುಂದಿನ ಹಂತಕ್ಕೆ ತಲುಪಿಲ್ಲ. ಹಾಗಾಗಿ ಸದ್ಯಕ್ಕೆ ಕೋವಿಡ್ ಗೆ ಯಾವುದೇ ನಿರ್ದಿಷ್ಟ ಲಸಿಕೆ ಇಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಹೇಳಿದೆ.

ಜತೆಗೆ, ದೇಶಾದ್ಯಂತ ಈವರೆಗೆ ಒಟ್ಟಾರೆ 1,86,000 ಮಂದಿಯ ಸ್ಯಾಂಪಲ್‌ಗ‌ಳನ್ನು ಪರೀಕ್ಷಿಸಲಾಗಿದೆ. ಕಳೆದ 5 ದಿನಗಳಲ್ಲಿ ದಿನಕ್ಕೆ ಸರಾಸರಿ 15,747 ಸ್ಯಾಂಪಲ್‌ ಗಳ ಪರೀಕ್ಷೆ ನಡೆದಿದ್ದು, ಸರಾಸರಿ 584 ಮಂದಿಗೆ ಸೋಂಕು ದೃಢಪಟ್ಟಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

34 ಪ್ರದೇಶಗಳು ಸೀಲ್‌ ಡೌನ್‌
ವಾಯವ್ಯ ದೆಹಲಿಯ ಮಹಾವೀರ ಎನ್‌ಕ್ಲೇವ್‌ ಪ್ರದೇಶವನ್ನು ಭಾನುವಾರ ದೆಹಲಿ ಸರ್ಕಾರ ಕೋವಿಡ್ ಹಾಟ್‌ ಸ್ಪಾಟ್‌ ಎಂದು ಗುರುತಿಸಿದ್ದು, ಈ ಪ್ರದೇಶವನ್ನೂ ಸೀಲ್‌ ಡೌನ್‌ ಮಾಡುವಂತೆ ಆದೇಶಿಸಿದೆ. ಅದರಂತೆ, ದೇಶಾದ್ಯಂತ 2ನೇ ಅತಿ ಹೆಚ್ಚು ಸೋಂಕಿತರಿರುವ ರಾಜ್ಯವಾದ ದೆಹಲಿಯಲ್ಲಿ ಒಟ್ಟು 34 ಪ್ರದೇಶಗಳು ಸೀಲ್‌ ಡೌನ್‌ ಆದಂತಾಗಿದೆ.

ದಿಲ್ಜಾದ್‌ ಗಾರ್ಡನ್‌ ಪ್ರದೇಶದಲ್ಲಿ ರಾಜ್ಯ ಸರ್ಕಾರ ಕೈಗೊಂಡ ಆಪರೇಷನ್‌ ಶೀಲ್ಡ್ ಯಶಸ್ವಿಯಾಗಿದ್ದು, 10 ದಿನಗಳಲ್ಲಿ ಒಂದೇ ಒಂದು ಪ್ರಕರಣವೂ ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ತಿಳಿಸಿದ್ದಾರೆ. ಇನ್ನು, ಸೋಂಕಿತರ ಹಾಗೂ ಮೃತರ ಸಂಖ್ಯೆಯನ್ನು ಗಮನಿಸಿದರೆ, ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಇಲ್ಲಿ ಮೃತರ ಸಂಖ್ಯೆ 127 ಆಗಿದ್ದು, ಸೋಂಕಿತರ ಸಂಖ್ಯೆ 2 ಸಾವಿರದ ಸಮೀಪಕ್ಕೆ ಬಂದಿದೆ.

ತ.ನಾಡಲ್ಲಿ 100 ಕೇಸು
ತಮಿಳುನಾಡಲ್ಲಿ ಭಾನುವಾರ ಒಂದೇ ದಿನ 100 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 90 ಮಂದಿಗೆ ಸೋಂಕು ತಗುಲಲು ಒಬ್ಬ ವ್ಯಕ್ತಿಯೇ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1075ಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next