ಉತ್ತರಕಾಶಿ: ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ವಿಳಂಬವಾಗುತ್ತಿದ್ದು ಡ್ರಿಲ್ಲಿಂಗ್ ಯಂತ್ರ ಆಗರ್ ಯಂತ್ರವು ದುರಸ್ತಿಗೀಡಾಗಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ.
ರಕ್ಷಣ ಕಾರ್ಯಾಚರಣೆಯ ಕುರಿತು, ಅಂತಾರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಪ್ರತಿಕ್ರಿಯೆ ನೀಡಿದ್ದು “ಸ್ವಲ್ಪ ಸಮಯ ಬೇಕಾಗಬಹುದು. 41 ಕಾರ್ಮಿಕರು ಸುರಕ್ಷಿತವಾಗಿ ಮನೆಗೆ ಸೇರುತ್ತಾರೆ.ಆದರೆ ಯಾವಾಗ ಎಂದು ನನಗೆ ಸರಿಯಾಗಿ ಗೊತ್ತಿಲ್ಲ. ನನ್ನ ಪ್ರಕಾರ ನಾವು ಆತುರಪಡಬಾರದು. ನಾವು ಅತ್ಯಂತ ಮುಖ್ಯವಾದ ವಿಷಯವನ್ನು ಪರಿಗಣಿಸಬೇಕು. ಕಾರ್ಮಿಕರು ಸುರಕ್ಷಿತವಾಗಿ ಮನೆಗೆ ಸೇರುತ್ತಾರೆ.ಅವರು ಕ್ರಿಸ್ಮಸ್ ಸಮಯದಲ್ಲಿ ಮನೆಗೆ ಬರುತ್ತಾರೆ ಎಂದು ನನಗೆ ವಿಶ್ವಾಸವಿದೆ” ಎಂದಿದ್ದಾರೆ.
”ಆರಂಭದಲ್ಲಿ, ಇದು ತ್ವರಿತವಾಗಿ ಆಗುತ್ತದೆ ಎಂದು ನಾನು ಎಂದಿಗೂ ಭರವಸೆ ನೀಡಲಿಲ್ಲ, ಅದು ಸುಲಭವಾಗುತ್ತದೆ ಎಂದು ನಾನು ಎಂದಿಗೂ ಭರವಸೆ ನೀಡಲಿಲ್ಲ, ನಾಳೆ ಎಂದು ನಾನು ಎಂದಿಗೂ ಹೇಳಲಿಲ್ಲ, ಅದು ಇಂದು ರಾತ್ರಿ ಎಂದೂ ನಾನು ಎಂದಿಗೂ ಹೇಳಲಿಲ್ಲ, ಆದರೆ ಅವರು ಸುರಕ್ಷಿತವಾಗಿರುತ್ತಾರೆ” ಎಂದು ಹೇಳಿಕೆ ನೀಡಿದ್ದಾರೆ.
ರಕ್ಷಣ ಕಾರ್ಯಾಚರಣೆಯಲ್ಲಿ ತೊಡಗಿರುವ ಸರಕಾರಿ ಸಂಸ್ಥೆಗಳು ಲಂಬವಾಗಿ ಕೊರೆಯಲು ತಯಾರಿ ಆರಂಭಿಸಿವೆ. ಕೊರೆಯಲು ಬಳಸಬೇಕಾದ ಯಂತ್ರವನ್ನು ಸಂಪೂರ್ಣವಾಗಿ ಸಿದ್ಧವಾಗಿಡಲಾಗಿದೆ. ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಲಂಬವಾಗಿ ಕೊರೆಯುವ ಸ್ಥಳವನ್ನು ತಲುಪಲು ಈಗಾಗಲೇ ರಸ್ತೆಯನ್ನು ಸಿದ್ಧಪಡಿಸಿದೆ ಮತ್ತು ವೇದಿಕೆಯನ್ನು ಬಲಪಡಿಸಲು ಸರಕುಗಳನ್ನು ಶೀಘ್ರದಲ್ಲೇ ಸಾಗಿಸಲಾಗುತ್ತದೆ ಎಂದು ಹೇಳಿದೆ.