Advertisement

Kannada: ನ.1ರಂದು ” ಕನ್ನಡಾಂಬೆಗೆ ನುಡಿ ನಮನ”

11:55 PM Oct 20, 2023 | Team Udayavani |

ಬೆಂಗಳೂರು: “ಕರ್ನಾಟಕ ಸಂಭ್ರಮ-50′ ಆಚರಣೆಗೆ ಸರಕಾರ ಸಿದ್ಧವಾಗಿದೆ. ನವೆಂಬರ್‌ 1ರಂದು ಹಲವು ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದೆ. ಗ್ರಾಮ ಪಂಚಾಯತ್‌ ಮಟ್ಟದಿಂದ ರಾಜ್ಯಮಟ್ಟದ ವರೆಗೂ ಕನ್ನಡಾಂಬೆಗೆ “ನುಡಿ ನಮನ’ ಕಾರ್ಯಕ್ರಮ ಹಮ್ಮಿಕೊಂಡಿದೆ. ನಾಡಿನ ಹೆಸರಾಂತ ಕವಿಗಳ ಐದು ಗೀತೆಗಳು ಮೊಳಗಲಿವೆ.

Advertisement

ಹುಯಿಲಗೋಳ ನಾರಾಯಣ ರಾಯರು ರಚಿಸಿದ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ರಾಷ್ಟ್ರಕವಿ ಕುವೆಂಪು ರಚನೆಯ “ಎಲ್ಲಾದರು ಇರು ಎಂತಾದರೂ ಇರು’, ವರ ಕವಿ ದ.ರಾ.ಬೇಂದ್ರೆ ರಚನೆಯ “ಒಂದೇ ಒಂದೇ ಕರ್ನಾಟಕ ಒಂದೇ’, ಚನ್ನವೀರ ಕಣವಿ ಅವರ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ,’ ಮತ್ತು ಸಿದ್ದಯ್ಯ ಪುರಾಣಿಕ ಅವರ “ಹೊತ್ತಿತೋ ಹೊತ್ತಿತು ಕನ್ನಡದ ದೀಪ’ ಗೀತೆಗಳು ಮೊಳಗಲಿವೆ.

ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳು, ಸರಕಾರಿ, ಅರೆ ಸರಕಾರಿ, ನಿಗಮ ಮಂಡಳಿಗಳ ಕಚೇರಿಗಳು, ಬ್ಯಾಂಕ್‌ಗಳು ಹಾಗೂ ಸಂಘ ಸಂಸ್ಥೆಗಳು ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮಗಳ ವೇಳಾಪಟ್ಟಿಯಲ್ಲಿ ಅಳವಡಿಸಿಕೊಂಡು ಕಡ್ಡಾಯವಾಗಿ ಮೇಲಿನ ಹಾಡುಗಳನ್ನು ಹಾಡುವ ಮೂಲಕ ಕನ್ನಡಾಂಬೆಗೆ ನುಡಿ ನಮನ (ಗೀತ ಗಾಯನ) ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರಕಾರದ ಕಾರ್ಯದರ್ಶಿ ಎನ್‌. ಮಂಜುಳಾ ತಿಳಿಸಿದ್ದಾರೆ.

ಸದರಿ ಹಾಡುಗಳಿಗೆ ಸಂಬಂಧಿಸಿದ ಆಡಿಯೋ ಲಿಂಕ್‌ ಅನ್ನು ಹಾಗೂ ಲಾಂಛನದ ಡಿಜಿಟಲ್‌ ಪ್ರತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರ ಮೂಲಕ ನೀಡಲಾಗುವುದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ರಾಜ್ಯೋತ್ಸವದಂದು ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಮಟ್ಟ ಹಾಗೂ ಗ್ರಾಮ ಪಂಚಾಯತ್‌ಗಳಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ವೇಳಾಪಟ್ಟಿಯಂತೆ ಧ್ವಜಾರೋಹಣ, ರಾಷ್ಟ್ರಗೀತೆ, ನಾಡಗೀತೆ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯಾದ ಬಳಿಕ 5 ಕನ್ನಡ ಗೀತೆಗಳನ್ನು ಕಡ್ಡಾಯವಾಗಿ ಹಾಡುವ ಮೂಲಕ ನುಡಿ ನಮನ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next