Advertisement

ಜೂ. 15ಕ್ಕೆ  33 ಕೆವಿ ಸಬ್‌ಸ್ಟೇಷನ್ ಹೊಸ ಲೈನ್‌ ಪೂರ್ಣ

10:51 AM May 24, 2018 | Team Udayavani |

ಸುಳ್ಯ: ಪುತ್ತೂರಿಂದ ಸುಳ್ಯಕ್ಕೆ ಸಂಪರ್ಕ ಕಲ್ಪಿಸುವ 33 ಕೆ.ವಿ. ಸಬ್‌ಸ್ಟೇಷನ್‌ ಹಳೆ ತಂತಿ ಬದಲಾಯಿಸಿ, ಹೊಸ ತಂತಿ ಅಳವಡಿಕೆಗೆ ಸಂಬಂಧಿಸಿ ಕಾಮಗಾರಿ ಪ್ರಗತಿ ಬಗ್ಗೆ ಬಿಜೆಪಿ ನಿಯೋಗ ಮಂಗಳವಾರ ಮೆಸ್ಕಾಂ ಕಚೇರಿಗೆ ಭೇಟಿ ನೀಡಿ
ಮಾಹಿತಿ ಪಡೆಯಿತು.

Advertisement

ಮಾ. 20ರಂದು ಬಿಜೆಪಿ ವತಿಯಿಂದ ಮೆಸ್ಕಾಂ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, 60 ದಿನಗಳೊಳಗೆ ಹಳೆ ತಂತಿ ಬದಲಾವಣೆಗೆ ಗಡುವು ನೀಡಿತ್ತು. ಮೇ 20ಕ್ಕೆ ಗಡುವು ಅವಧಿ ಪೂರ್ಣಗೊಂಡಿದ್ದು, ಕಾಮಗಾರಿ ಪ್ರಗತಿ ಹಂತದ ಕುರಿತಂತೆ ಜಿ.ಪಂ. ಸದಸ್ಯ ಹರೀಶ್‌ ಕಂಜಿಪಿಲಿ, ಮಾಜಿ ಸದಸ್ಯ ನವೀನ್‌ ರೈ ಮೇನಾಲ ನೇತೃತ್ವದಲ್ಲಿ ಮಂಗಳವಾರ ಮೆಸ್ಕಾಂ ಅಧಿಕಾರಿಗಳಲ್ಲಿ ಮಾಹಿತಿ ಪಡೆದು, ತತ್‌ಕ್ಷಣ ಪೂರ್ಣಗೊಳಿಸುವಂತೆ ಸೂಚಿಸಿದರು.

ಹರೀಶ್‌ ಕಂಜಿಪಿಲಿ ಅವರು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ನರಸಿಂಹ, ಎಡಬ್ಲ್ಯು ಪ್ರಶಾಂತ್‌ ಪೈ, ತಾಲೂಕು ಸಹಾಯಕ ಕಾರ್ಯನಿರ್ವಾಹಕ ಹರೀಶ್‌ ನಾಯ್ಕ ಅವರ ಬಳಿ ಮಾಹಿತಿ ಪಡೆದುಕೊಂಡರು.

300 ಕಂಬ ಪೂರ್ಣ
ಕೌಡಿಚ್ಚಾರಿನಿಂದ ಬೋಳುಬೈಲು ತನಕ 15 ಕಿ.ಮೀ. ದೂರ ಹಳೆ ತಂತಿ ಬದಲಾವಣೆ ಮತ್ತು ಕಂಬ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಒಟ್ಟು 500 ಕಂಬ ಅಳವಡಿಕೆಯಲ್ಲಿ, 300 ಕಂಬ ಅಳವಡಿಕೆ ಪೂರ್ಣಗೊಂಡಿದೆ. 200 ಕಂಬ ಹಾಕುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ದಿನವೊಂದಕ್ಕೆ 5 ಕಿ.ಮೀ. ತಂತಿ ಅಳವಡಿಸಲು ಸಾಧ್ಯವಿದೆ ಎಂದು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರು ದೂರವಾಣಿ ಮೂಲಕ ನಿಯೋಗದ ಸದಸ್ಯರಿಗೆ ಮಾಹಿತಿ ನೀಡಿದರು.

ಜೂ. 15ಕ್ಕೆ ಗಡುವು
ಸುಣ್ಣಮೂಲೆಯಲ್ಲಿ ವಿದ್ಯುತ್‌ ಅವಘಡ ಸಂಭವಿಸಿದ ಕಾರಣ ಒಂದು ವಾರದಿಂದ ಕೆಲಸ ಸ್ಥಗಿತಗೊಂಡಿದ್ದು, ತತ್‌ಕ್ಷಣ ಕೆಲಸ ಆರಂಭಿಸುವುದಾಗಿ ಮೆಸ್ಕಾಂ ಅಧಿಕಾರಿಗಳು ಉತ್ತರಿಸಿದರು. ಜೂ.15ರೊಳಗೆ ಪೂರ್ಣಗೊಳಿಸುವ ಮಾಹಿತಿ ನೀಡಿದರು. ಕಾಮಗಾರಿ ಪೂರ್ಣಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಬಿಜೆಪಿ ನಿಯೋಗ ಎಚ್ಚರಿಸಿತ್ತು.

Advertisement

ಮೆಸ್ಕಾಂ ಪರವಾಗಿ ಜೂನಿಯರ್‌ ಎಂಜಿನಿಯರ್‌ ಪ್ರಸಾದ್‌, ನಿಯೋಗದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ವಿನಯ ಕುಮಾರ್‌ ಕಂದಡ್ಕ, ಮುಖಂಡರಾದ ಮಹೇಶ್‌ ಕುಮಾರ್‌ ಮೇನಾಲ, ಸುರೇಶ್‌ ಕಣೆಮರಡ್ಕ, ಚಂದ್ರಜಿತ್‌ ಮಾವಂಜಿ, ಸಂತೋಷ್‌ ಕುತ್ತಮೊಟ್ಟೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next