Advertisement

ಜ.15ರಂದು ಬೆಂಗಳೂರು “ಚಿತ್ರಸಂತೆ’

11:51 AM Jan 10, 2017 | |

ಬೆಂಗಳೂರು: ಆಧುನಿಕ ಮತ್ತು ಸಮಕಾಲೀನ ಚಿತ್ರಗಳ ಪ್ರದರ್ಶನಕ್ಕೆ ಹೆಸರಾದ ಚಿತ್ರಕಲಾ ಪರಿಷತ್‌ನ “ಚಿತ್ರ ಸಂತೆಯು’ ಈ ಬಾರಿಯೂ ಉದ್ಯಾನನಗರಿ ಜನತೆಗೆ ಚಿತ್ತಾಕರ್ಷಕ ಚಿತ್ರ ಕಲಾಕೃತಿಗಳನ್ನು ಮನ-ಮನೆ ತುಂಬಿಕೊಳ್ಳಲು ವೇದಿಕೆ ಸಜ್ಜುಗೊಳಿಸಿದೆ.

Advertisement

ಕಳೆದ ಒಂದು ದಶಕದಿಂದಲ್ಲೂ ಎಲ್ಲಾ ವರ್ಗದ ಜನರನ್ನು ಆಕರ್ಷಿಸುತ್ತಿರುವ “ಚಿತ್ರಸಂತೆ’ ಜ.15 ರಂದು ಬೆಳಗ್ಗೆ 8ರಿಂದ ಸಂಜೆ 8ರವರೆಗೆ ನಗರದ ಕುಮಾರಕೃಪಾ ರಸ್ತೆಯಲ್ಲಿ ನಡೆಯಲಿದ್ದು, ಚಿತ್ರ ಕಲಾಕೃತಿ ಪ್ರದರ್ಶನ ಹಾಗೂ ಮಾರಾಟಕ್ಕೆ ಕಲಾಸಕ್ತರನ್ನು ಕೈ ಬೀಸಿ ಕರೆಯುತ್ತಿದೆ.

ಭಾನುವಾರ ಬೆಳಗ್ಗೆ 10ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ “ಚಿತ್ರಸಂತೆ’ಗೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಈ ವೇಳೆ 1,200 ಕ್ಕೂ ಹೆಚ್ಚು ಕಲಾವಿದರ ಲಕ್ಷಾಂತರ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟವು ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ನಡೆಯಲಿದೆ ಎಂದು ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌. ಶಂಕರ್‌ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೇ ವೇಳೆ ಚಿತ್ರಕಲಾ ಪರಿಷತ್‌ ರಂಗಮಂದಿರದಲ್ಲಿ ಬೆಳಗ್ಗೆ 10ರಿಂದ ಸಂಜೆ 8 ಗಂಟೆಯವರೆಗೆ ಸುಗಮ ಸಂಗೀತ, ಜಾನಪದ ಹಾಡುಗಳ ಗಾಯನ ಕಾರ್ಯಕ್ರಮವೂ ಏರ್ಪಡಿಸಲಾಗಿದೆ. ಜ.11 ರಂದು ಆಹ್ವಾನಿತರ ಕಲಾಕೃತಿಗಳ ಪ್ರದರ್ಶನ ನಡೆಯಲಿದ್ದು, ಇದೇ ವೇಳೆ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಡಾ. ಜಿ.ವಿ.ಅಂದಾನಿ, ಡಾ. ಪುಷ್ಪ ದ್ರಾವಿಡ್‌, ಎಸ್‌. ವೆಂಕಟರಮಣ ಭಟ್ಟ, ಡಾ. ಗಾಯಿತ್ರಿ ದೇಸಾಯಿ  ಅವರಿಗೆ “ಚಿತ್ರಕಲಾ ಸಮ್ಮಾನ್‌ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ಅತ್ಯಾಧುನಿಕ ವ್ಯವಸ್ಥೆ: “ಚಿತ್ರ ಸಂತೆ’ ಚಿತ್ರಾಕೃತಿಗಳ ಪ್ರದರ್ಶನ ಹಾಗೂ ಮಾರಾಟವು ದೇಶದಲ್ಲೇ ಪ್ರಖ್ಯಾತಿಯಾಗಿದ್ದು ಜನಸಾಮಾನ್ಯರಿಗೆ ಕಲೆಯನ್ನು ಹತ್ತಿರವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಲು ಈ ಬಾರಿಯ ಚಿತ್ರ ಸಂತೆಯಲ್ಲಿ ಎಲ್ಲಾ ಸಿದ್ಧತೆಗಳೂ ಮಾಡಲಾಗಿದೆ. 500, 1000 ರೂ. ಮುಖಬೆಲೆಯ ನೋಟುಗಳ ಅಮಾನ್ಯದಿಂದ ಉಂಟಾಗಿರುವ ಪರಿಣಾಮವನ್ನು ಎದುರಿಸಲು ಕೆನರಾ ಬ್ಯಾಂಕ್‌ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಬ್ಯಾಂಕ್‌ಗಳ ಸಹಯೋಗದೊಂದಿಗೆ ತಲಾ 6 ಸ್ವೆ„ಪಿಂಗ್‌ ಯಂತ್ರಗಳನ್ನು ಅಳವಡಿಸಲಾಗುವುದು.

Advertisement

ಜತೆಗೆ ಭದ್ರತಾ ದೃಷ್ಟಿಯಿಂದ ಮಳಿಗೆ ತೆರೆಯಲ್ಪಡುವ ಎಲ್ಲ ರಸ್ತೆಯಲ್ಲೂ ಸಿಸಿಟೀವಿ ಕ್ಯಾಮರಾ ಅಳವಡಿಕೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಚಿತ್ರಸಂತೆಯಲ್ಲಿ ಭಾಗವಹಿಸುವ 1200 ಕಲಾವಿದರಿಗೆ ಊಟ, ತಿಂಡಿ, ನೀರು ಹಾಗೂ ಮಳಿಗೆಗಳನ್ನು ಉಚಿತವಾಗಿ ಚಿತ್ರಕಲಾ ಪರಿಷತ್ತು ಒದಗಿಸುತ್ತದೆ. ಇತರೆ ಕಡೆಗಳಿಂದ ಬರುವ 300 ಕಲಾವಿದರಿಗೆ ವಸತಿ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ.

ಕಲಾಕೃತಿ ಮಾರಾಟಗಾರರಿಂದ ಯಾವುದೇ ಕಮಿಷನ್‌ ಪಡೆಯದೆ ಸೂಕ್ತ ದರಗಳಲ್ಲಿ ಜನರಿಗೆ ಕಲಾಕೃತಿಗಳನ್ನು ದೊರೆಯುವಂತೆ ಮಾಡಲಾಗುವುದು ಎಂದು ಶಂಕರ್‌ ಹೇಳಿದರು. ಕಾರ್ಯಕ್ರಮಕ್ಕೆ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮೇಯರ್‌ ಪದ್ಮಾವತಿ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ನೂರಾರು ಕಲಾವಿದರು ಭಾಗಿ: ಚಿತ್ರಸಂತೆ ಸಮಿತಿ ಅಧ್ಯಕ್ಷ ಎ. ರಾಮಕೃಷ್ಣ ಮಾತನಾಡಿ, ಕರ್ನಾಟಕದ ಕಲಾವಿದರೂ ಸೇರಿದಂತೆ ಕೇರಳ, ತಮಿಳನಾಡು, ಆಂಧ್ರಪ್ರದೇಶ, ಒರಿಸ್ಸಾ, ಮಧ್ಯಪ್ರದೇಶಗಳ ಕಲಾವಿದರೂ ಚಿತ್ರಸಂತೆ ಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದಾಜು ಮೂರು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಅಂಗವಿಕಲ ಕಲಾವಿದರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕ್ರಿಸೆಂಟ್‌ ರಸ್ತೆಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಜನವರಿ ಮೊದಲ ವಾರದಲ್ಲೇ ಚಿತ್ರಸಂತೆ ನಡೆಯಬೇಕಿತ್ತು ಆದರೆ ನಗರದಲ್ಲಿ ಪ್ರವಾಸಿ ಭಾರತೀಯ ದಿವಸ್‌ ನಡೆಯುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರದ ಕಾಲ ಮುಂದೂಡಲಾಗಿದೆ ಎಂದು ಇದೇ ವೇಳೆ ಚಿತ್ರ ಸಂತೆ ವಿಳಂಬಕ್ಕೆ ಸಮಜಾಯಿಷಿ ನೀಡಿದರು.ಸುದ್ದಿಗೋಷ್ಠಿ ವೇಳೆ ಪರಿಷತ್‌ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಜೆ. ಕಮಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

ರೂಪುರೇಷೆ ಬದಲಾಗಲ್ಲ
ಚಿತ್ರ ಸಂತೆಗೆ ವರ್ಷದಿಂದ ವರ್ಷಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಚಿತ್ರಸಂತೆಯನ್ನು 2 ದಿನಗಳ ಕಾಲ ವಿಸ್ತರಿಸುವುದು ಹಾಗೂ ಫ್ರೀಡಂಪಾರ್ಕ್‌ 
ಅಥವಾ ಅರಮನೆ ಮೈದಾನದಲ್ಲಿ ಮಾಡಬೇಕೆಂಬ ಸಲಹೆಗಳು ಬಂದಿವೆ. ಆದರೆ 2 ದಿನಗಳ ಕಾಲ ನಡೆಸುವುದು ಸದ್ಯಕ್ಕೆ ಕಷ್ಟ.

ಕಲಾಕೃತಿಗಳಿಗೆ ರಾತ್ರಿ ವೇಳೆ ಭದ್ರತೆ ಒದಗಿಸುವುದು ಹಾಗೂ 2 ದಿನಗಳ ಕಾಲ ಕುಮಾರಕೃಪಾ ರಸ್ತೆ ಮುಚ್ಚುವುದು ಅಸಾಧ್ಯ. ಜತೆಗೆ ಅರಮನೆ ಮೈದಾನದಲ್ಲಿ ದುಬಾರಿ ಬಾಡಿಗೆ ಪಾವತಿಸಬೇಕು. ಇದರ ಬದಲು ಚಿತ್ರಕಲಾ ಪರಿಷತ್‌ನಲ್ಲಿ ಒಂದು ದಿನ ಹಾಗೂ ಕುಮಾರಕೃಪಾ ರಸ್ತೆಯಲ್ಲಿ ಒಂದು ದಿನ ನಡೆಸುವ ಬಗ್ಗೆ ಮುಂದಿನ ದಿನಗಳಲ್ಲಿ ಯೋಜಿಸಲಾಗುವುದು ಎಂದು ಅಧ್ಯಕ್ಷ ಬಿ.ಎಲ್‌.ಶಂಕರ್‌ ಸ್ಪಷ್ಟಪಡಿಸಿದರು.

100 ರೂ.ಗಳಿಂದ 1 ಲಕ್ಷವರೆಗಿನ ಕಲಾಕೃತಿ
ಚಿತ್ರ ಸಂತೆಯಲ್ಲಿ 100 ರೂ.ಗಳಿಂದ 1 ಲಕ್ಷ ರೂ.ವರೆಗೆ ಬೆಲೆ ಬಾಳುವ ಕಲಾಕೃತಿ ದೊರೆಯುತ್ತದೆ. ಚಿತ್ರಕಲಾ ಪರಿಷತ್ತಿನಿಂದ ಯಾವುದೇ ಕಮಿಷನ್‌ ಪಡೆಯುವುದಿಲ್ಲ. ಹೀಗಾಗಿ “ಮನೆಗೊಂದು ಕಲಾಕೃತಿ’ ಹೆಸರಿನಲ್ಲಿ ಕಲೆಯನ್ನು ಜನ ಸಾಮಾನ್ಯರ ಬಳಿಗೆ ಕೊಂಡಯೊಯ್ಯುವ ಕೆಲಸ ಇದಾಗಿದೆ. ಕಳೆದ 2 ಕೋಟಿ ಕಲಾಕೃತಿಗಳು ಮಾರಾಟವಾಗಿದ್ದವು ಎಂದು ಬಿ.ಎಲ್‌. ಶಂಕರ್‌ ಹೇಳಿದರು.

ವಿವಿಧ ಕಲಾಕೃತಿಗಳು
ಮೈಸೂರು ಸಂಪ್ರದಾಯಿಕ ಶೈಲಿ, ತಂಜಾವೂರು ಶೈಲಿ, ರಾಜಸ್ಥಾನಿ, ಮಧುಬಿನಿ, ತೈಲ ಮತ್ತು ಜಲವರ್ಣ ಕಲಾಕೃತಿಗಳು ದೊರೆಯಲಿವೆ. ಇದಲ್ಲದೆ ಅಕ್ರಿಲಿಕ್‌, ಕೋಲಾಜ್‌, ಲಿಥೋಗ್ರಾಫ್ ಮತ್ತಿತರ ಕಲಾಕೃತಿಗಳು ಲಭ್ಯವಿರಲಿವೆ. ಕುಂಚ ಹಾಗೂ ಪೆನ್ಸಿಲ್‌ಗ‌ಳಿಂದ ಕಲಾವಿದರು ಸ್ಥಳದಲ್ಲಿಯೇ ರಚಿಸಿಕೊಡಲಿದ್ದಾರೆ. ಜತೆಗೆ ವ್ಯಂಗ್ಯಚಿತ್ರಗಳೂ ಪ್ರದರ್ಶನದಲ್ಲಿವಿರಲಿವೆ.

ನಾಳೆ ಪೂರ್ವಭಾವಿ ಪ್ರದರ್ಶನ
ಜ.11ರಂದು ಚಿತ್ರಸಂತೆ ಅಂಗವಾಗಿ 80 ಆಹ್ವಾನಿತ ಕಲಾವಿದರಿಂದ 100 ಕಲಾಕೃತಿಗಳ ಪ್ರದರ್ಶನ ಪರಿಷತ್‌ ಗ್ಯಾಲರಿಯಲ್ಲಿ ನಡೆಯಲಿದೆ.  ಪ್ರದರ್ಶನವನ್ನು ಸರ್ಕಾರದ ಮಾಜಿ ಅಪರ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್‌ ಉದ್ಘಾಟಿಸಲಿದ್ದಾರೆ ಎಂದು ಚಿತ್ರಸಂತೆ ಅಧ್ಯಕ್ಷ ಎ. ರಾಮಕೃಷ್ಣ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next