ಪುಣೆ:ಪುಕ್ಸಟ್ಟೆ ಹಣ ಸಿಕ್ಕಿದರೆ ಯಾರಿಗೆ ಬೇಡ…ಆದರೆ ಬಸ್ ಸ್ಟ್ಯಾಂಡ್, ರಿಕ್ಷಾದಲ್ಲಿ ಬಿಟ್ಟು ಹೋದ ಹಣ, ಚಿನ್ನವನ್ನು ವಾಪಸ್ ಮಾಲೀಕರಿಗೆ ಒಪ್ಪಿಸಿದ ಅಪರೂಪದ ಪ್ರಾಮಾಣಿಕತೆ ಘಟನೆಗಳ ಬಗ್ಗೆ ಓದಿದ್ದೀರಿ, ಕೇಳಿದ್ದೀರಿ. ಆದರೆ ಮಹಾರಾಷ್ಟ್ರ ಸತಾರಾದ 54 ವರ್ಷದ ಈ ವ್ಯಕ್ತಿ ಮತ್ತೊಂದು ಸೇರ್ಪಡೆ. ಅಷ್ಟೇ ಅಲ್ಲ ಅವರ ಪ್ರಾಮಾಣಿಕತೆಗೆ ನೀವೂ ಒಂದು ಸಲಾಂ ಹೇಳುತ್ತೀರಿ.
ಹೌದು ಮಹಾರಾಷ್ಟ್ರ ಸತಾರಾದ ಧಾನಾಜಿ ಜಗದಾಳೆ (54) ಎಂಬವರಿಗೆ ದೀಪಾವಳಿ ಹಬ್ಬದಂದು ಬಸ್ ನಿಲ್ದಾಣದಲ್ಲಿ 40 ಸಾವಿರ ರೂಪಾಯಿ ಇದ್ದ ಹಣದ ಕಂತೆಯೊಂದು ಸಿಕ್ಕಿತ್ತು. ಕೊನೆಗೂ ಅದನ್ನು ಹಣ ಕಳೆದುಕೊಂಡ ವ್ಯಕ್ತಿಗೆ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಈ ವೇಳೆ ಜಗದಾಳೆ ಅವರ ಪ್ರಾಮಾಣಿಕತೆ ಮೆಚ್ಚಿ ಒಂದು ಸಾವಿರ ರೂಪಾಯಿ ಬಹುಮಾನ ನೀಡಿದ್ದರು. ಆದರೆ ಜಗದಾಳೆ ತೆಗೆದುಕೊಂಡಿದ್ದು ಬರೇ 7 ರೂಪಾಯಿ ಮಾತ್ರ. ಅದು ಯಾಕೆ ಗೊತ್ತಾ…ಆ ಸಮಯದಲ್ಲಿ ಅವರ ಪಾಕೆಟ್ ನಲ್ಲಿದ್ದ ಹಣ 3 ರೂ. ಮಾತ್ರ. ಸತಾರಾದ ಮಾನ್ ತಾಲೂಕಿನ ಪಿಂಗಾಲಿ ಗ್ರಾಮಕ್ಕೆ ಹೋಗಬೇಕಾದರೆ ಬಸ್ ಟಿಕೆಟ್ ದರ ಹತ್ತು ರೂಪಾಯಿ. ಅದಕ್ಕಾಗಿ ಏಳು ರೂಪಾಯಿ ಪಡೆದಿದ್ದರು!
ದೀಪಾವಳಿ ಹಿನ್ನೆಲೆಯಲ್ಲಿ ಕೆಲಸದ ನಿಮಿತ್ತ ದಹಿವಾಡಿಗೆ ಹೋಗಿ ವಾಪಸ್ ಬಸ್ ನಿಲ್ದಾಣಕ್ಕೆ ಬಂದಿದ್ದೆ. ಆಗ ಸಮೀಪದಲ್ಲೇ ನೋಟಿನ ಕಂತೆಗಳು ಬಿದ್ದಿರುವುದನ್ನು ಗಮನಿಸಿದೆ. ಸುತ್ತಮುತ್ತ ಇದ್ದ ಜನರಲ್ಲಿ ಕೇಳಿದೆ ಈ ಹಣ ಯಾರದ್ದು ಅಂತ. ಆಗ ಹಣ ಕಳೆದು ಹೋದ ಚಿಂತೆಯಲ್ಲಿದ್ದ ವ್ಯಕ್ತಿ ಸಿಕ್ಕಿದ್ದರು. ಅವರು ಪತ್ನಿಯ ಆಪರೇಶನ್ ಗಾಗಿ 40ಸಾವಿರ ರೂಪಾಯಿ ತಂದಿದ್ದು, ಅದು ಕೆಳಕ್ಕೆ ಜಾರಿ ಬಿದ್ದಿತ್ತು. ನಾನು ಕೂಡಲೇ ಅವರಿಗೆ ಹಣದ ಕಂತೆಯನ್ನು ನೀಡಿದೆ ಎಂದು ಜಗದಾಳೆ ಘಟನೆಯನ್ನು ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ನನಗೆ ಅವರು ಒಂದು ಸಾವಿರ ರೂಪಾಯಿ ನೀಡಿದರು. ಆದರೆ ನಾನು 7 ರೂಪಾಯಿ ಮಾತ್ರ ತೆಗೆದುಕೊಂಡೆ, ಯಾಕೆಂದರೆ ನನ್ನ ಊರಿಗೆ ಹೋಗಬೇಕಾದರೆ ಬಸ್ ಟಿಕೆಟ್ ಬೆಲೆ ಹತ್ತು ರೂಪಾಯಿ, ನನ್ನಲ್ಲಿ ಇದ್ದದ್ದು ಬರೇ 3 ರೂಪಾಯಿ ಮಾತ್ರ ಎಂದು ಧಾನಾಜಿ ತಿಳಿಸಿದ್ದಾರೆ.