ಲಕ್ನೋ: ಕೋವಿಡ್ ಲಸಿಕೆಯಿಂದ ತಪ್ಪಿಸಿಕೊಳ್ಳಲು ಸ್ಥಳೀಯರು ನದಿಗೆ ಹಾರಿ ಪರಾರಿಯಾದ ಘಟನೆ ಉತ್ತರಪ್ರದೇಶದಲ್ಲಿ ಇತ್ತೀಚೆಗಷ್ಟೇ ನಡೆದಿತ್ತು. ಇದೀಗ ಮತ್ತೊಂದು ಘಟನೆ ಸೇರ್ಪಡೆಯಾಗಿದೆ…80ವರ್ಷದ ಅಜ್ಜಿಯೊಬ್ಬಳು ಕೋವಿಡ್ ಲಸಿಕೆ ತಂಡ ಮನೆಗೆ ಬಂದಾಗ ದೊಡ್ಡ ಡ್ರಮ್ ಹಿಂದೆ ಅಡಗಿ ಕುಳಿತ ಪ್ರಸಂಗ ಉತ್ತರಪ್ರದೇಶದಲ್ಲಿ ನಡೆದಿದೆ. ಅಜ್ಜಿ ದೊಡ್ಡ ಡ್ರಮ್ ಹಿಂದೆ ಅಡಗಿ ಕುಳಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಒಂದು ಎಕರೆ ಜಮೀನಿನಲ್ಲಿ 2 ಲಕ್ಷ ರೂ ಆಧಾಯ ಕೊಡುವ ಪೇರಳೆ ಬೆಳೆ
ಬಿಜೆಪಿ ಶಾಸಕಿ ಸರಿತಾ ಭದೌರಿಯಾ ಮತ್ತು ಆರೋಗ್ಯ ಇಲಾಖೆಯ ತಂಡ ಲಸಿಕೆ ಮತ್ತು ಜಾಗೃತಿ ಮೂಡಿಸುವ ಅಭಿಯಾನದ ಹಿನ್ನೆಲೆಯಲ್ಲಿ ಮಂಗಳವಾರ ಇಟಾವಾದಲ್ಲಿನ ಚಂದನ್ ಪುರ್ ಗ್ರಾಮಕ್ಕೆ ತೆರಳಿದ್ದರು. ಗ್ರಾಮಕ್ಕೆ ಹೋದಾಗ ಕೆಲವು ಜನರನ್ನು ಭೇಟಿಯಾಗುವಲ್ಲಿ ಯಶಸ್ವಿಯಾಗಿದ್ದರು. ಆದರೆ 80ವರ್ಷದ ಹರ್ ದೇವಿ ಮೊದಲು ಬಾಗಿಲ ಹಿಂದೆ ಅಡಗಿಕೊಂಡಿದ್ದು, ನಂತರ ಮನೆಯ ದೊಡ್ಡ ಡ್ರಮ್ ಹಿಂದೆ ಹೋಗಿ ಅಡಗಿ ಕುಳಿತುಕೊಂಡಿದ್ದರು. ಕೋವಿಡ್ ಲಸಿಕೆಯಿಂದ ತಪ್ಪಿಸಿಕೊಳ್ಳಲು ಅಜ್ಜಿ ಹೀಗೆ ಅಡಗಿಕೊಂಡಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ ಲಸಿಕೆ ತಂಡ ಮನೆಯ ಬಳಿ ಬಂದಾಗ ಅಜ್ಜಿ ಮನೆಯ ಕತ್ತಲೆ ಕೋಣೆಯೊಳಗೆ ಡ್ರಮ್ ಹಿಂದೆ ಕುಳಿತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ವರದಿ ವಿವರಿಸಿದೆ.
ಲಸಿಕೆ ತಂಡ ಮನೆಗೆ ಬಂದಾಗ, ಅಮ್ಮಾ ನೀವು ಎಲ್ಲಿದ್ದೀರಿ? ಎಂದು ಕೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆದರೆ ಅಜ್ಜಿ ಹೊರಬರಲು ನಿರಾಕರಿಸಿತ್ತು. ಶಾಸಕರು ಬಂದಿದ್ದಾರೆ…ದಯವಿಟ್ಟು ಹೊರಬರುತ್ತೀರಾ ಎಂದು ಆರೋಗ್ಯ ಕಾರ್ಯಕರ್ತೆಯೊಬ್ಬರು ಮನವಿ ಮಾಡಿಕೊಂಡಿರುವುದು ವಿಡಿಯೋದಲ್ಲಿದೆ.
ನಂತರ ವೈದ್ಯರು ಅಜ್ಜಿ ಬಳಿ ತೆರಳಿ ಹೊರ ಬರುವಂತೆ ವಿನಂತಿಸಿಕೊಂಡರು, ನಾನು ಡಾಕ್ಟರ್, ನಿಮಗೆ ಇಂಜೆಕ್ಷನ್ ನೀಡಲು ಇಲ್ಲಿಗೆ ಬಂದಿಲ್ಲ. ನಿಮ್ಮೊಂದಿಗೆ ಮಾತನಾಡಲು ಬಂದಿದ್ದೇವೆ. ಕನಿಷ್ಠ ಪಕ್ಷ ಹೊರಗೆ ಬಂದು ನಿಮ್ಮ ಶಾಸಕರ ಮಾತನ್ನಾದರೂ ಕೇಳಿಸಿಕೊಳ್ಳಿ ಎಂದು ವೈದ್ಯೆ ಮನವಿ ಮಾಡಿಕೊಂಡಿರುವುದಾಗಿ ವಿಡಿಯೋದಲ್ಲಿ ಸೆರೆಯಾಗಿದೆ.
ಕೊನೆಗೂ ಅಜ್ಜಿ ಅಡಗಿ ಕುಳಿತ ಸ್ಥಳದಿಂದ ಹೊರಬಂದು ಶಾಸಕಿಯನ್ನು ಭೇಟಿಯಾಗಿದ್ದರು. ವರದಿಯ ಪ್ರಕಾರ, ಅಂದು ಅಜ್ಜಿಗೆ ಲಸಿಕೆ ನೀಡಿಲ್ಲ, ಗ್ರಾಮದಲ್ಲಿನ ಉಳಿದವರಿಗೆ ಲಸಿಕೆ ನೀಡಲಾಗಿತ್ತು ಎಂದು ತಿಳಿಸಿದೆ. ಲಸಿಕೆ ತೆಗೆದುಕೊಂಡರೆ ಜ್ವರ ಬರುತ್ತದೆ ಮತ್ತು ಇತರ ಅಡ್ಡಪರಿಣಾಮ ಬೀರುತ್ತದೆ ಎಂದು ಅಜ್ಜಿಗೆ ಹೆದರಿಸಿದ್ದರು ಎಂದು ಶಾಸಕರು ವಿವರಿಸಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ಜಾಗೃತಿ ಅಭಿಯಾನ ನಡೆಸುವ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ ಎಂದು ಶಾಸಕಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.