ಇಂದೋರ್ (ಮಧ್ಯ ಪ್ರದೇಶ) : ಬಿಗ್ ಬಾಸ್ 16 ಕಾರ್ಯಕ್ರಮದ ವಿಜೇತ, ಖ್ಯಾತ ರ‍್ಯಾಪರ್ ಎಂಸಿ ಸ್ಟ್ಯಾನ್ ಅವರ ಸಂಗೀತ ಸಂಜೆ (ಮ್ಯೂಸಿಕ್ ಕಾನ್ಸರ್ಟ್) ಮೇಲೆ ದಾಳಿ ನಡೆಸಿ, ರಾದ್ಧಾಂತ ಸೃಷ್ಟಿಸಿದ ಘಟನೆ ಇತ್ತೀಚೆಗೆ ( ಮಾ.17 ರ ರಾತ್ರಿ) ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಇಂದೋರ್ ನ ಹೊಟೇಲ್ ವೊಂದರಲ್ಲಿ ರ‍್ಯಾಪರ್ ಎಂಸಿ ಸ್ಟ್ಯಾನ್ ತಮ್ಮ ಸ್ವರಚಿತ ರ‍್ಯಾಪ್ ಗಳನ್ನು ಹಾಡುತ್ತಿದ್ದರು. ಈ ವೇಳೆ ಕಾರ್ಯಕ್ರಮದೆಡೆಗೆ ಏಕಾಏಕಿ ಕರ್ಣಿ ಸೇನೆಯ ಕಾರ್ಯಕರ್ತರು ಬಂದು ದಾಂಧಲೆ ನಡೆಸಿದ್ದಾರೆ.
ಎಂಸಿ ಸ್ಟ್ಯಾನ್ ಹಾಡಿನಲ್ಲಿ ಆಶ್ಲೀಲ ಭಾಷೆಯನ್ನು ಬಳಸುತ್ತಾರೆ. ಇದರಿಂದ ಯುವ ಜನರ ಮನಸ್ಸು ಹಾಳಾಗುತ್ತದೆ ಎಂದು ಆರೋಪಿಸಿ ಕರ್ಣಿ ಸೇನೆಯ ಕಾರ್ಯಕರ್ತರು ಎಂಸಿ ಸ್ಟ್ಯಾನ್ ರನ್ನು ಬಲವಂತವಾಗಿ ವೇದಿಕೆಯಿಂದ ಇಳಿಸಿ, ಅಲ್ಲಿದ್ದ ಪ್ರೇಕ್ಷಕರಿಗೆ ಬೆದರಿಕೆ ಹಾಕಿ, ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಪ್ರಬಲ ಭೂಕಂಪ: ಕನಿಷ್ಠ 13 ಮಂದಿ ಮೃತ್ಯು; ಹತ್ತಾರು ಕಟ್ಟಡಗಳಿಗೆ ಹಾನಿ
ಈ ಬಗ್ಗೆ ಆಯೋಜಕರು ನೀಡಿದ ದೂರಿನ ಮೇರೆಗೆ ಸ್ಥಳೀಯ ಕರ್ಣಿ ಸೇನಾ ನಾಯಕರಾದ ದಿಗ್ವಿಜಯ್ ಸಿಂಗ್ ಮತ್ತು ರಾಜಾ ಸಿಂಗ್ ಹಾಗೂ ಇತರರ ಮೇಲೆ ಎಫ್ ಐ ಆರ್ ದಾಖಲಾಗಿದೆ ಆದರೆ ಇದುವರೆಗೆ ಯಾರ ಬಂಧನವೂ ಆಗಿಲ್ಲ ಎಂದು ವರದಿ ತಿಳಿಸಿದೆ.
ಎಂಸಿ ಸ್ಟ್ಯಾನ್ ಹಾಡುಗಳಲ್ಲಿ ಅಶ್ಲೀಲ ಭಾಷೆಯನ್ನು ಬಳಸುವ ಮೂಲಕ ಯುವಕರಲ್ಲಿ ಅಶ್ಲೀಲತೆಯನ್ನು ಹರಡುತ್ತಿದ್ದಾರೆ”, ಆದ್ದರಿಂದ ಕಾರ್ಯಕರ್ತರು ಅವರನ್ನು ಸ್ಥಳದಿಂದ ಹೊರಹೋಗುವಂತೆ ಒತ್ತಾಯಿಸಿದರು ಎಂದು ಕರ್ಣಿ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಅನುರಾಗ್ ಪ್ರತಾಪ್ ಸಿಂಗ್ ರಾಘವ್ ಹೇಳಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ದಾಂಧಲೆ ನಡೆಸಿದ ವಿಡಿಯೋ ವೈರಲ್ ಆಗಿದ್ದು, ಸ್ಟ್ಯಾನ್ ಅವರ ಪರವಾಗಿ ನೆಟ್ಟಿಗರು ನಿಂತಿದ್ದಾರೆ.