ಪಾಟ್ನಾ:500 ರೂಪಾಯಿ ವಿಚಾರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಹಾಯಕ ನರ್ಸ್ ಮತ್ತು ಆಶಾ ಕಾರ್ಯಕರ್ತೆ ಜುಟ್ಟು ಹಿಡಿದುಕೊಂಡು ಹೊಡೆದಾಡಿಕೊಂಡಿರುವ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡಿದ ಬಳಿಕ ಘಟನೆ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಬಿಹಾರದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತದ ಸ್ಮೃತಿ ಮಂಧಾನ ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗರಾಗಿ ಆಯ್ಕೆ
ವಿಡಿಯೋದಲ್ಲಿ, ಜಮುಯಿನ ಲಕ್ಷ್ಮೀಪುರ್ ಬ್ಲಾಕ್ ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಹಾಯಕ ನರ್ಸ್ ಮತ್ತು ಆಶಾ ಕಾರ್ಯಕರ್ತೆ ತಲೆಕೂದಲು ಹಿಡಿದುಕೊಂಡು ಎಳೆದಾಡುತ್ತಿದ್ದು, ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಮಧ್ಯಪ್ರವೇಶಿಸಿ ಜಗಳ ನಿಲ್ಲಿಸಲು ಪ್ರಯತ್ನಿಸುತ್ತಿದ್ದರು. ಆದರೆ ಚಪ್ಪಲಿ ಮತ್ತು ಕೈಗಳಿಂದ ಬಡಿದಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಏನಿದು ಜಗಳ?
ಭಾನುವಾರ (ಜನವರಿ 23) ಆಶಾ ಕಾರ್ಯಕರ್ತೆ ರಿಂತು ಕುಮಾರಿ ನವಜಾತ ಶಿಶುವಿಗೆ ಬಿಸಿಜಿ (ಕ್ಷಯರೋಗ ತಡೆಗಟ್ಟುವ ಲಸಿಕೆ) ಲಸಿಕೆ ಹಾಕಿಸಲು, ಮಿಡ್ ವೈಫ್ (ಆ್ಯಕ್ಸಿಲರಿ ನರ್ಸ್ ಮಿಡ್ ವೈಫ್) ರಂಜನಾ ಕುಮಾರಿ ಅವರ ಬಳಿ ಕೊಂಡೊಯ್ದಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಹಾಯಕ ನರ್ಸ್ ರಂಜನಾ ಕುಮಾರಿ ಲಸಿಕೆ ನೀಡಲು 500 ರೂಪಾಯಿ ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದರಿಂದ ಇಬ್ಬರು ಹೆರಿಗೆ ವಾರ್ಡ್ ಸಮೀಪ ಹೊಡೆದುಕೊಳ್ಳಲು ಆರಂಭಿಸಿರುವುದಾಗಿ ವರದಿ ತಿಳಿಸಿದೆ.
ಘಟನೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಇಬ್ಬರು ಆಶಾ ಕಾರ್ಯಕರ್ತೆಯರು ಹೊಡೆದಾಡಿಕೊಳ್ಳುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈವರೆಗೂ ಯಾವ ಕ್ರಮ ತೆಗೆದುಕೊಂಡಿಲ್ಲ ಎಂದು ವರದಿ ವಿವರಿಸಿದೆ.