ರಾಯ್ ಪುರ್: ವಾಹನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಚ ಸ್ವೀಕರಿಸಿದ್ದ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿರುವ ಪ್ರಕರಣ ಛತ್ತೀಸ್ ಗಢದ ಮಹಾಸಮುಂಡ್ ನಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಅರುಣ್ ಸಿಂಗ್ ರಾಜ್ಯಕ್ಕೆ ಬಂದು ಹೋದ ಮೇಲೆ ದಿಢೀರ್ ಮುಂಬೈಗೆ ತೆರಳಿದ ರಮೇಶ್ ಜಾರಕಿಹೊಳಿ
ಇಬ್ಬರು ಪೊಲೀಸರು ವಾಹನ ಚಾಲಕರಿಂದ ಲಂಚ ಸ್ವೀಕರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿರುವುದಾಗಿ ವರದಿ ಹೇಳಿದೆ. ಲಂಚ ಸ್ವೀಕರಿಸಿದ ಆರೋಪದಲ್ಲಿ ತುಮಗಾಂವ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ ಎಚ್ ಒ) ಶರದ್ ತಮ್ರಾಕರ್ ಮತ್ತು ವಿಜೇಂದ್ರ ಚಾಂದ್ ನಿಹಾ ಸೇರಿದಂತೆ ಇಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿ ವಿವರಿಸಿದೆ.
ಜೂನ್ 15ರ ವಿಡಿಯೋ ಕುರಿತಂತೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಫುಲ್ ಕುಮಾರ್ ಠಾಕೂರ್ ತಿಳಿಸಿದ್ದಾರೆ. ವಿಡಿಯೋದಲ್ಲಿ ವಾಹನ ಚಾಲಕರಿಂದ ಲಂಚ ತೆಗೆದುಕೊಂಡು ಹಣವನ್ನು ಎಣಿಸುತ್ತಿರುವುದು ದಾಖಲಾಗಿದೆ ಎಂದು ತಿಳಿಸಿದೆ.
ಲಂಚ ಸ್ವೀಕರಿಸುವ ಇಂತಹ ಘಟನೆಗಳಿಂದ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆಯಾಗಲಿದ್ದು, ಇಂತಹ ತಪ್ಪನ್ನು ಇಲಾಖೆ ಸಹಿಸಿಕೊಳ್ಳುವುದಿಲ್ಲ ಎಂದು ಠಾಕೂರ್ ತಿಳಿಸಿರುವುದಾಗಿ ಪಿಟಿಐ ಏಜೆನ್ಸಿ ವರದಿ ಮಾಡಿದೆ.