ನೆಲಮಂಗಲ: ಜಗತ್ತಿನ ಜನರಿಗೆ ಜೀವನದ ಮೌಲ್ಯಗಳ ಜೊತೆಗೆ ಸ್ವಾಭಿಮಾನವನ್ನು ಹೆಚ್ಚಿಸಲು ಸರ್ವಜ್ಞರ ವಚನಗಳು ಸಹಕಾರಿಯಾಗಿವೆ ಎಂದು ಸಂಸದ ವೀರಪ್ಪ ಮೊಯ್ಲಿ ತಿಳಿಸಿದರು. ಪಟ್ಟಣದ ಚಿಕ್ಕೆಲ್ಲಯ್ಯ ಕಲ್ಯಾಣ ಮಂಟಪದಲ್ಲಿ ತಾಲೂಕು ಕುಂಬಾರರ ಸಂಘದಿಂದ ಆಯೋಜಿಸಲಾಗಿದ್ದ ಕವಿ ಸರ್ವಜ್ಞರ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಂಬಾರ ಸಮುದಾಯದ ಜನರು ಶ್ರಮಜೀವಿಗಳಾಗಿದ್ದು, ತಮ್ಮ ವೃತ್ತಿಯಲ್ಲಿಯೇ ದೇವರನ್ನು ಕಾಣುವ ಶ್ರೀಮಂತ ಹೃದಯದವರಾಗಿದ್ದಾರೆ. ಜಗತ್ತಿಗೆ ಸರ್ವಜ್ಞರು ನೀಡಿದ ಕೊಡುಗೆ ಅಪಾರ. ಉತ್ತಮ ಜ್ಞಾನಿಗಳಾಗಬೇಕಾದರೆ ಸರ್ವಜ್ಞರ ವಚನಗಳನ್ನು ಅರ್ಥ ಮಾಡಿಕೊಂಡು ಅವರ ಮಾರ್ಗದರ್ಶನಗಳನ್ನು ಅನುಸರಿಸಿದರೆ ಸಾಕು ಎಂದರು.
ಸಮುದಾಯ ಭವನ: ಕುಂಬಾರ ಸಂಘದವರು ಒಟ್ಟುಗೂಡಿ ಸಮಾಜವನ್ನು ಮುನ್ನಡೆಸುತ್ತಿರುವುದು ಸ್ವಾಗತಾರ್ಹ. ಕುಂಬಾರರ ಸಂಘದ ಬೇಡಿಕೆಯಾದ ಸಮುದಾಯ ಭವನ ನಿರ್ಮಾಣ ಮತ್ತು ಕುಂಬಾರ ನಿಗಮ, ಮಂಡಳಿ ಸ್ಥಾಪನೆ, ಪ್ರಾರ್ಥನಾ ಭವನ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳ ಬಳಿ ಸ್ಥಳಕ್ಕಾಗಿ ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.
ಶಾಸಕರ ಭರವಸೆ: ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಕುಂಬಾರ ಸಮುದಾಯದ ಜನರು ಒಗ್ಗಟ್ಟಿನಿಂದ ಸರ್ವಜ್ಞ ಜಯಂತಿ ಆಚರಣೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಅದೇ ರೀತಿ, ಸಮುದಾಯದ ಜನರು ಒಂದಾಗಿ ಭವನ ನಿರ್ಮಾಣಕ್ಕೆ ಜಾಗವನ್ನು ಗುರುತಿಸಿದರೆ ಮುಂಜೂರು ಮಾಡಿಕೊಡಲು ಮುಂದಾಗುತ್ತೇನೆ ಎಂದು ತಿಳಿಸಿದರು.
ಅದ್ದೂರಿ ಮೆರವಣಿಗೆ: ಕುಂಬಾರರ ಸಂಘ ಆಯೋಜಿಸಿದ್ದ ಕವಿ ಸರ್ವಜ್ಞರ ಜಯಂತಿ ಪ್ರಯುಕ್ತ ತಾಲೂಕು ಕಚೇರಿ ಆವರಣದಿಂದ ಚಿಕ್ಕೆಲ್ಲಯ್ಯ ಕಲ್ಯಾಣ ಮಂಟಪದ ವರೆಗೂ ಸಾಂಸೃತಿಕ ಕಲಾತಂಡಗಳ ಜೊತೆ ಸರ್ವಜ್ಞರ ಭಾವಚಿತ್ರವನ್ನು ಬೆಳ್ಳಿ ಪಲ್ಲಕ್ಕಿಯಲ್ಲಿರಿಸಿ ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಿ, ಅದ್ದೂರಿ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಂಜನಮೂರ್ತಿ, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್.ಪಿ.ಹೇಮಂತ್‌ಕುಮಾರ್, ಜಿಲ್ಲಾ ಪಂಚಾಯತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ತಿಮ್ಮರಾಯಪ್ಪ, ಪುರಸಭೆ ಸದಸ್ಯ ನಾಗರಾಜು, ಕುಂಬಾರರ ಸಂಘದ ಜಿಲ್ಲಾಧ್ಯಕ್ಷ ವೆಂಕಟಾಚಲಯ್ಯ, ತಾಲೂಕುಸಂಘದ ಅಧ್ಯಕ್ಷ ಹನುಮಂತರಾಯಪ್ಪ,
ದೊಡ್ಡಬಳ್ಳಾಪುರ ಅಧ್ಯಕ್ಷ ವಿರೂಪಾಕ್ಷಯ್ಯ, ಹೊಸಕೋಟೆ ಅಧ್ಯಕ್ಷ ಮಹೇಶ್, ಕುಂಬೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಆರ್.ಶೀನಿವಾಸ್, ಖಜಾಂಚಿ ಗಿರೀಶ್, ಕಾರ್ಯದರ್ಶಿ ಎಲ್.ಶೀನಿವಾಸ್, ಸಂಘದ ಗೌರವಾಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷೆ ಪದ್ಮಾವತಿ, ಪುಟ್ಟರಾಜು, ರೇಣುಕಪ್ರಸಾದ್ ಮತ್ತಿತರರಿದ್ದರು.