Advertisement

ಮುಂದಿನ ವಾರದಿಂದ ವಿದೇಶದಲ್ಲೂ ‘ಒಂದು ಮೊಟ್ಟೆಯ ಕತೆ’

02:05 AM Jul 18, 2017 | Team Udayavani |

ಉಡುಪಿಯ ಮಾಧ್ಯಮ ಸಂವಾದದಲ್ಲಿ ನಿರ್ದೇಶಕ ರಾಜ್‌ ಶೆಟ್ಟಿ
ಉಡುಪಿ: ಒಂದು ಮೊಟ್ಟೆಯ ಕತೆ ಚಿತ್ರವು ಕೇವಲ ಒಂದು ಕೋ. ರೂ. ಬಜೆಟ್‌ನಲ್ಲಿ ತಯಾರಾಗಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಒಂದು ಕೋ. ರೂ. ಗೂ ಹೆಚ್ಚು ಕಲೆಕ್ಷನ್‌ ಮಾಡಿರುವುದು ಚಿತ್ರ ತಂಡದ ಶ್ರಮಕ್ಕೆ ಸಂದ ಗೌರವ. ಮುಂದಿನ ವಾರದಿಂದ ವಿದೇಶದಲ್ಲೂ ಬಿಡುಗಡೆಗೆ ತಯಾರಿ ನಡೆದಿದೆ ಎಂದು ಚಿತ್ರದ ನಿರ್ದೇಶಕ, ನಟ ರಾಜ್‌ ಬಿ. ಶೆಟ್ಟಿ ಹೇಳಿದರು.

Advertisement

ಉಡುಪಿ ಪ್ರಸ್‌ಕ್ಲಬ್‌ನಲ್ಲಿ ಚಿತ್ರ ತಂಡದೊಂದಿಗೆ ಸೋಮವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿ ಮಂಗಳೂರು ಕನ್ನಡದ ಸೊಗಡಿರುವ ಚಿತ್ರವನ್ನು ಕರಾವಳಿ ಮಾತ್ರವಲ್ಲದೆ, ಮಂಡ್ಯ, ಮೈಸೂರು, ಬೆಂಗಳೂರಿನ ಜನ ಕೂಡ ಸ್ವೀಕರಿಸಿ, ಮೆಚ್ಚುಗೆ ವ್ಯಕ್ತಪಡಿಸಿರುವುದು ಖುಷಿ ನೀಡಿದೆ. ಅದರಲ್ಲೂ ಬಿಗ್‌ ಸ್ಕ್ರೀನ್‌ಗಳಲ್ಲಿ ಶೇ. 30 ರಿಂದ 40 ರಷ್ಟು ಅನ್ಯ ಭಾಷಿಕರೇ ಚಿತ್ರ ವೀಕ್ಷಿಸುತ್ತಿರುವುದು ವಿಶೇಷ ಎಂದು ಇದೇ ವೇಳೆ ಸಂತಸದಿಂದ ಹೇಳಿಕೊಂಡರು.

ಪ್ರದರ್ಶನಕ್ಕೆ ಸಿದ್ಧತೆ
ರಾಜ್ಯದ 50 ಸಿಂಗಲ್‌ ಸ್ಕ್ರೀನ್‌ಗಳ ಜತೆಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರವಲ್ಲದೆ ಚೆನ್ನೈನಲ್ಲಿ ಬಿಡುಗಡೆ ಮಾಡಲಾಗಿದೆ. ಮುಂದಿನ ವಾರದಿಂದ ಮುಂಬಯಿ, ಹೈದ್ರರಾಬಾದ್‌, ಸಿಂಗಾಪುರ್‌, ಆಸ್ಟ್ರೇಲಿಯಾ, ದುಬೈನಲ್ಲೂ ಚಿತ್ರ ಪ್ರದರ್ಶನಕ್ಕೆ ಸಿದ್ದತೆ ನಡೆದಿದೆ. ಒಳ್ಳೆ ಕತೆ ಇದ್ದರೆ, ದೊಡ್ಡ ಕಲಾವಿದರಿಲ್ಲದಿದ್ದರೂ ಜನ ಸ್ವೀಕರಿಸುತ್ತಾರೆ ಅನ್ನುವುದಕ್ಕೆ  ಈ ಚಿತ್ರ ನಿದರ್ಶನ ಎಂದರು.

ಪ್ರೇಮಕತೆಯಿದು
ಇಬ್ಬರು ಅಪಕ್ವ ಮನಸ್ಸುಗಳನ್ನು ಒಂದುಗೂಡಿಸುವ ಪ್ರೇಮಕತೆಯಿದು. ಹಾಗಂತ ಇದು ಪಕ್ಕಾ ಪ್ರೇಮಕತೆಯಲ್ಲ. ಒಬ್ಬ ಬೋಳು ತಲೆಯ ಕನ್ನಡ ಉಪನ್ಯಾಸಕರನ್ನು (ಜನಾರ್ದನ) ಸಾಮಾನ್ಯ ಜನ ಹೇಗೆ ಸ್ವೀಕರಿಸುತ್ತಾರೆ ಹಾಗೂ ಅದಕ್ಕೆ ಉಪನ್ಯಾಸಕ ಹೇಗೆ ಪ್ರತಿಕ್ರಿಯೆ ಮಾಡುತ್ತಾನೆ ಅನ್ನುವುದು ಚಿತ್ರದ ಕತೆ. ಒಂದೇ ತಿಂಗಳಲ್ಲಿ ಸ್ಕ್ರಿಪ್ಟ್ ಬರೆದು, ಕೇವಲ 16 ದಿನದಲ್ಲಿ ಚಿತ್ರೀಕರಣವನ್ನು ಮುಗಿಸಲಾಗಿದೆ. ಆದರೆ ಅದರ ಹಿಂದೆ 2 ವರ್ಷಗಳ ಪರಿಶ್ರಮವಿದೆ. 245 ಜನರ ಆಡಿಶನ್‌ನಲ್ಲಿ  4-5 ಮಂದಿಯನ್ನು ಆಯ್ಕೆ ಮಾಡಿ, ಅವರು ಹಾಗೂ ಇಡೀ ತಂಡದೊಂದಿಗೆ ಕಾರ್ಯಾಗಾರ ನಡೆಸಿ, ಕಲಾವಿದರನ್ನು ತರಬೇತಿಗೊಳಿಸಲಾಗಿತ್ತು ಎಂದರು.

ಪ್ರಾಮಾಣಿಕ ಪ್ರಯತ್ನಕ್ಕೆ ಫ‌ಲ ಸಿಕ್ಕಿದೆ
ನಿರ್ಮಾಪಕ ಸುಹಾನ್‌ ಮಾತನಾಡಿ 25 ಮಂದಿಯ ತಂಡದ 2 ವರ್ಷಗಳ ಪ್ರಾಮಾಣಿಕ ಪ್ರಯತ್ನಕ್ಕೆ ಫ‌ಲ ಸಿಕ್ಕಿದೆ. ಈ ಚಿತ್ರದ ಯಶಸ್ಸಿನ ಎಲ್ಲ ಶ್ರೇಯ ನಿರ್ದೇಶಕ ರಾಜ್‌ ಅವರಿಗೆ ಸಲ್ಲಬೇಕು ಎಂದರು. ಸಂವಾದದಲ್ಲಿ ಚಿತ್ರದ ಸಿನೆಮಾಟೋಗ್ರಾಫ‌ರ್‌ ಪ್ರವೀಣ್‌ ಶ್ರೀಯಾನ್‌, ಪ್ರಕಾಶ್‌ ತುಂಬಿನಾಡು, ನಟಿಯರಾದ ಶೈಲಶ್ರೀ, ಅಮೃತಾ ನಾಯಕ್‌, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ ಉಪಸ್ಥಿತರಿದ್ದರು. 

Advertisement

ಮಂಗಳೂರು ಕನ್ನಡದಿಂದಲೇ ಯಶಸ್ವಿ
ಮಂಗಳೂರು ಕನ್ನಡದಲ್ಲಿರುವ ಚಿತ್ರ ಬೇರೆಡೆ ಮಿಂಚುವ ನಿರೀಕ್ಷೆಯಿತ್ತ ಎನ್ನುವ ಪ್ರಶ್ನೆಗೆ ಚಿತ್ರದಲ್ಲಿ ಭಾಷೆಗಿಂತ ಭಾವ ಮುಖ್ಯ. ಅದು ಅರ್ಥವಾದರೆ ಸಾಕು. ಮಂಗಳೂರು ಕನ್ನಡದಷ್ಟು ಬೇರೆ ಯಾವ ಭಾಷೆಯಲ್ಲಿಯೂ ಈ ಚಿತ್ರ ಸುಂದರವಾಗಿ ಕಾಣಿಸಲು ಸಾಧ್ಯವಿಲ್ಲ. ಹೊಸ ದೃಷ್ಟಿಕೋನದ ಚಿತ್ರ ಇದಾಗಿದೆ. ಒಂದು ರೀತಿಯಲ್ಲಿ ಡಾ| ರಾಜ್‌ ಕುಮಾರ್‌ ಅವರ ಹೆಸರು ಸಹ ಚಿತ್ರದ ಯಶಸ್ಸಿಗೆ ಕಾರಣ. ಪುನೀತ್‌ ರಾಜ್‌ಕುಮಾರ್‌ ಅವರೇ ಚಿತ್ರ ತುಂಬಾ ಇಷ್ಟವಾಗಿದೆ ಎಂದು ಹೇಳಿರುವುದು ಖುಷಿ ಕೊಟ್ಟಿದೆ ಎಂದು ರಾಜ್‌ ಬಿ. ಶೆಟ್ಟಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next