ಚಾಮರಾಜನಗರ: ಚಾ.ನಗರ ತಾಲೂಕು ಪಂಚಾಯ್ತಿಗೆ ಪರಿಶಿಷ್ಟ ಜಾತಿ ಹಾಗೂ ವರ್ಗ ಹಾಗೂ ಇತರ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಮಂಜೂರಾಗಿದ್ದ 53 ಲಕ್ಷ ರೂ.ಗಳು ಖರ್ಚಾಗದೇ ವಾಪಸ್ ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿಯನ್ನು ನೀಡಿ, ಕರ್ತವ್ಯ ಲೋಪ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಲು ತಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷೆ ಎಚ್.ಎಸ್. ಶೋಭಾ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಹೊಂಗನೂರು ಚಂದ್ರು, ಬಿ.ಎಸ್. ರೇವಣ್ಣ, ಮಹದೇವಯ್ಯ, ನಂದೀಶ್ ಸೇರಿದಂತೆ ಅನೇಕ ಸದಸ್ಯರು ಜಿ.ಪಂ. ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕ್ರಮ ಕೈಗೊಂಡರೆ ಇತರ ಅಧಿಕಾರಿಗಳಿಗೆ ಪಾಠ: 2018-19ನೇ ಸಾಲಿನಲ್ಲಿ ತಾಪಂಗೆ ಎಸ್‌ಇಪಿ, ಟಿಎಸ್‌ಪಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲು 53 ಲಕ್ಷ ರೂ. ಬಿಡುಗಡೆಯಾಗಿದ್ದು, ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಕ್ರಿಯಾ ಯೋಜನೆ ರೂಪಿಸಿ, ಕಾಮಗಾರಿಯನ್ನು ಕೈಗೊಂಡಿದ್ದರೆ ಅನುದಾನ ವಾಪಸ್ ಹೋಗುತ್ತಿರಲಿಲ್ಲ. ಅಧ್ಯಕ್ಷರು ಹಾಗೂ ಸದಸ್ಯರಿಗೆ ಯಾವುದೇ ರೀತಿಯ ಮಾಹಿತಿಯನ್ನು ನೀಡದೆ ಕತ್ತಲಿನಲ್ಲಿ ನಮ್ಮನ್ನು ಇಟ್ಟಿದ್ದರು. ಇಂತ ಪ್ರಮಾದ ಎಸಗಿರುವ ಅಧಿಕಾರಿಗಳಿಗೆ ವಿರುದ್ಧ ಸರ್ಕಾರಕ್ಕೆ ಪತ್ರ ಬರೆದು ಕ್ರಮ ಕೈಗೊಂಡರೆ ಇತರ ಅಧಿಕಾರಿಗಳಿಗೆ ಇದು ಪಾಠವಾಗುತ್ತದೆ. ಅಲ್ಲದೆ, ಆ ವರ್ಗಗಳ ಕಲ್ಯಾಣ ಕಾರ್ಯಕ್ಕೆ ಅನುದಾನ ವಿನಿಯೋಗವಾಗದಿರುವುದು ಬೇಸರವಾಗುತ್ತಿದೆ ಎಂದು ಮಾಜಿ ಅಧ್ಯಕ್ಷ ಹೊಂಗನೂರು ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು.
ಅನುದಾನ ಬರುವುದು ಕಡಿಮೆ: ಇದಕ್ಕೆ ಧ್ವನಿಗೂಡಿಸಿದ ಸದಸ್ಯರಾದ ರೇವಣ್ಣ, ಮಹದೇವಯ್ಯ ಅವರು, ತಾಲೂಕು ಪಂಚಾಯ್ತಿ ಅನುದಾನ ಬರುವುದು ಕಡಿಮೆ. ಇಂತ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿ ಸಭೆಗೆ ತಪ್ಪು ಮಾಹಿತಿಯನ್ನು ನೀಡುವ ಮೂಲಕ ಸಭೆಯ ಚರ್ಚೆಯನ್ನು ದಾರಿ ತಪ್ಪಿಸಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮವಾಗಬೇಕಾಗಿದೆ. ಹೀಗಾಗಿ ಸಭೆಯಲ್ಲಿ ನಿರ್ಣಯ ಮಾಡಿ, ಸರ್ಕಾರಕ್ಕೆ ಕಳುಹಿಸಿ ಎಂದು ಅಧ್ಯಕ್ಷರನ್ನು ಒತ್ತಾಯಿಸಿದರು. ಬಳಿಕ ನಿರ್ಣಯ ಮಾಡಿ, ಸರ್ಕಾರಕ್ಕೆ ಕಳುಹಿಸಲು ಸಭೆ ಒಪ್ಪಿಗೆ ಸೂಚಿಸಿತು.
ಶುದ್ಧ ನೀರಿನ ಘಟಕ ನಿರುಪಯುಕ್ತ: ತಾಲೂಕಿನ ವ್ಯಾಪಿಯ ವಿವಿಧ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದಿಂದ ಆಳವಡಿಯಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡದೇ ನಿರುಪಯುಕ್ತವಾಗಿವೆ. ಇಲಾಖೆಯಿಂದ ನಿರ್ಮಾಣ ಮಾಡಿರುವ ಈ ಘಟಕಗಳು ಒಂದಲ್ಲ ಒಂದು ಕಾರಣಕ್ಕೆ ಸ್ಥಗಿತಗೊಂಡಿವೆ. ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಏಜೆನ್ಸಿ ಪಡೆದುಕೊಂಡವರು ಸ್ಥಳಕ್ಕೆ ಹೋಗಿ ನೋಡುತ್ತಿಲ್ಲ. ಪಂಚಾಯ್ತಿಯಿಂದಲು ಅವುಗಳ ನಿರ್ವಹಣೆಯಾಗುತ್ತಿಲ್ಲ. ಲಕ್ಷಾಂತರ ರೂ. ವ್ಯಯವಾಗುತ್ತಿದೆ ಎಂದು ರೇವಣ್ಣ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಗದೀಶ್, ಸಂಬಂಧಪಟ್ಟ ಏಜೆನ್ಸಿ ವಿರುದ್ಧ ದೂರು ಬರೆದು, ತಕ್ಷಣ ದುರಸ್ತಿ ಪಡಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.
ನೀರು ಕಲ್ಪಿಸಲು 70 ಲಕ್ಷ ರೂ. ವ್ಯಯ: ಹರವೆ ಗ್ರಾಮಕ್ಕೆ ಕುಡಿಯುವ ನೀರು ಕಲ್ಪಿಸಲು 70 ಲಕ್ಷ ರೂ. ವ್ಯಯ ಮಾಡಲಾಗಿದೆ. ನಾಲ್ಕು ವರ್ಷವಾಗುತ್ತಿದೆ. ಮೂರು ಸರ್ಕಾರ ಬದಲಾಗಿದೆ. ಮೂವರು ಅಧ್ಯಕ್ಷರಾಗಿದ್ದಾರೆ. ನಾಲ್ವರು ಕಾರ್ಯನಿರ್ವಾಹಕ ಅಧಿಕಾರಿಗಳು ಬಂದಿದ್ದಾರೆ. ಆದರೆ, ಕೆರೆಹಳ್ಳಿ ಕೆರೆಯಿಂದ ಕುಡಿಯುವ ನೀರು ಪೂರೈಕೆ ಕಾಮಗಾರಿ ಮಾತ್ರ ಪೂರ್ಣ ಗೊಂಡಿಲ್ಲ. ಇದಕ್ಕೆ ಕಾರಣವೇನು? ಗ್ರಾಮಸ್ಥರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಯಾವಾಗ ನೀರು ಸರಬರಾಜು ಮಾಡುತ್ತೀರಿ ಸ್ಪಷ್ಟವಾಗಿ ಉತ್ತರ ನೀಡಿ ಎಂದು ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಎಇಇ ಜಗದೀಶ್ ತಿಳಿಸಿದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಬಸವಣ್ಣ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗರಾಜಮ್ಮ, ಸದಸ್ಯರಾದ ಪಿ. ಕುಮಾರ ನಾಯಕ, ಮಹದೇವಯ್ಯ, ರವೀಶ್, ಮಹದೇವಶೆಟ್ಟಿ, ಸುಧಾ, ಯಶೋದಾ, ರತ್ನಮ್ಮ, ದೊಡ್ಡಮ್ಮ, ದೊಡ್ಡತಾಯಮ್ಮ ಸೇರಿದಂತೆ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು.