ಮೊದಲಿಗೆ ಬೆಂಗಳೂರಿನಲ್ಲಿ ಪತ್ತೆಯಾಗಿದ್ದ ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್ ಈಗ ರಾಜ್ಯದ ಬೇರೆ ಬೇರೆ ಪ್ರದೇಶಗಳಿಗೂ ಹಬ್ಬುತ್ತಿದೆ. ಬೆಂಗಳೂರು ಅನಂತರ ಬೆಳಗಾವಿ, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ ಮತ್ತು ಧಾರವಾಡದಲ್ಲೂ ಒಮಿಕ್ರಾನ್ ಕಂಡು ಬಂದಿವೆ.
ವಿಶೇಷವೆಂದರೆ ಕೆಲವು ಪ್ರಕರಣಗಳಿಗೆ ವಿದೇಶ ಪ್ರಯಾಣದ ಸಹಿತ ಯಾವುದೇ ಹಿನ್ನೆಲೆಯೇ ಇಲ್ಲ. ಇವರಿಗೆ ಒಮಿಕ್ರಾನ್ ಬಂದದ್ದು ಹೇಗೆ ಎಂಬ ಪ್ರಶ್ನೆಗಳು ಎದುರಾಗಿವೆ. ಭಾರತದಲ್ಲಿ ಮೊದಲಿಗೆ ಒಮಿಕ್ರಾನ್ ಪತ್ತೆಯಾಗಿದ್ದು ಕರ್ನಾಟಕದಲ್ಲಿ. ಡಿ.2ರಂದು ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಿಗೆ ಒಮಿಕ್ರಾನ್ ಬಂದಿತ್ತು. ಆದರೆ ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಪ್ರಜೆ, ಪ್ರವಾಸ ಮುಗಿಸಿ ವಾಪಸ್ ಹೋದ ಮೇಲೆ ಅವರಿಗೆ ಒಮಿಕ್ರಾನ್ ತಗಲಿದ್ದು, ಗೊತ್ತಾಯಿತು. ಇನ್ನು ವಿದೇಶ ಪ್ರಯಾಣದ ಇತಿಹಾಸವೇ ಇಲ್ಲದ ವೈದ್ಯರೊಬ್ಬರಲ್ಲೂ ಒಮಿಕ್ರಾನ್ ಕಂಡು ಬಂದಿತ್ತು.
ಇದಾದ ಮೇಲೆ ಬೇರೆ ಬೇರೆ ರಾಜ್ಯಗಳಲ್ಲಿ ನಿಧಾನಗತಿಯಲ್ಲಿ ಒಮಿಕ್ರಾನ್ ಪ್ರಕರಣಗಳು ಕಂಡುಬರುತ್ತಿವೆ. ಸೋಮವಾರ ಸಂಜೆ ಹೊತ್ತಿಗೆ ಇಡೀ ದೇಶದಲ್ಲಿ ಒಟ್ಟು 161 ಕೇಸ್‌ಗಳು ಕಂಡು ಬಂದಿವೆ. ಇದರಲ್ಲಿ ಕರ್ನಾಟಕದ್ದೇ ಐದು ಪ್ರಕರಣಗಳು ಸೇರಿವೆ.
ಸೋಮವಾರ ರಾಜ್ಯದ ಧಾರವಾಡದಲ್ಲಿ 54 ವರ್ಷದ ವ್ಯಕ್ತಿ, ಶಿವಮೊಗ್ಗದ ಭದ್ರಾವತಿಯಲ್ಲಿ 20 ವರ್ಷದ ಯುವತಿ, ಉಡುಪಿಯಲ್ಲಿ 82 ವರ್ಷದ ವೃದ್ಧ ಮತ್ತು 73 ವರ್ಷದ ವೃದ್ಧೆ, ಮಂಗಳೂರಿನಲ್ಲಿ 19 ವರ್ಷದ ಯುವತಿಗೆ ಒಮಿಕ್ರಾನ್ ತಗಲಿರುವುದು ದೃಢಪಟ್ಟಿದೆ. ಇವರಲ್ಲಿ ಯಾರಿಗೂ ವಿದೇಶ ಪ್ರಯಾಣದ ಹಿನ್ನೆಲೆ ಇಲ್ಲ. ಹಾಗೆಯೇ ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಇವರಲ್ಲಿ ಅಲ್ಪ ಪ್ರಮಾಣದ ಲಕ್ಷಣಗಳು ಮಾತ್ರವೇ ಕಾಣಿಸಿಕೊಂಡಿವೆ.
ವಿದೇಶ ಪ್ರಯಾಣದ ಹಿನ್ನೆಲೆ ಇಲ್ಲದಿದ್ದರೂ ಒಮಿಕ್ರಾನ್ ಪತ್ತೆಯಾಗಿರುವುದು ಕೊಂಚ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಇಲ್ಲಿಯೇ ವೈರಾಣುವಿನ ರೂಪಾಂತರವಾಗಿಯೇ ಎಂಬ ಅನುಮಾನಗಳೂ ಕಾಡಿವೆ. ಈ ಬಗ್ಗೆ ಆರೋಗ್ಯ ಇಲಾಖೆ ಏನನ್ನೂ ಹೇಳಿಲ್ಲ. ಅಲ್ಲದೆ ಮೊದಲ ಪ್ರಕರಣ ಪತ್ತೆಯಾದಾಗಲೂ ಸೋಂಕು ತಗಲಿದ್ದ ವ್ಯಕ್ತಿ ಇತ್ತೀಚಿನ ದಿನಗಳಲ್ಲಿ ಯಾವುದೇ ವಿದೇಶ ಪ್ರಯಾಣ ಮಾಡಿರಲಿಲ್ಲ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಮಕ್ಕಳಲ್ಲಿ ಒಮಿಕ್ರಾನ್ ಪತ್ತೆಯಾಗಿದ್ದು, ಇವರಿಗೂ ಯಾವುದೇ ವಿದೇಶ ಪ್ರಯಾಣದ ಹಿನ್ನೆಲೆ ಇರಲಿಲ್ಲ. ಹಾಗಿದ್ದಾಗ್ಯೂ ಒಮಿಕ್ರಾನ್ ಬಂದದ್ದು ಹೇಗೆ ಎಂಬ ಪ್ರಶ್ನೆಗಳು ಹುಟ್ಟಿವೆ.
ಸದ್ಯ ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು, ಜಗತ್ತಿನ ಬಹುತೇಕ ದೊಡ್ಡ ದೊಡ್ಡ ಆರೋಗ್ಯ ಸಂಸ್ಥೆಗಳು ಮತ್ತು ವೈದ್ಯರು ಒಮಿಕ್ರಾನ್ ಬಗ್ಗೆ ಅಂದಾಜು ಮಾಡುತ್ತಿದ್ದಾರಷ್ಟೇ. ಇನ್ನೂ ಇದು ಹೇಗೆ ಪ್ರಭಾವ ಬೀರಲಿದೆ ಎಂಬ ಬಗ್ಗೆ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ವೇಗವಾಗಿ ಹಬ್ಬುವ ಶಕ್ತಿ ಇದೆ ಎಂಬುದನ್ನು ಹೇಳಿ ಉದಾಹರಣೆಯಾಗಿ ಯುನೈಟೆಡ್ ಕಿಂಗ್‌ಡಮ್ ಅನ್ನು ತೋರಿಸುತ್ತಿದ್ದಾರೆ. ಅಲ್ಲಿ ಇತ್ತೀಚೆಗೆ ಪ್ರತಿದಿನವೂ 80ರಿಂದ 90 ಸಾವಿರ ಪ್ರಕರಣ ಕಂಡು ಬರುತ್ತಿವೆ. ಹೀಗಾಗಿ ಹಿರಿಯ ಮತ್ತು ತಜ್ಞ ವೈದ್ಯರು ಮಾಸ್ಕ್ ಧರಿಸಿ, ಕೊರೊನಾ ನಿಯಮಗಳನ್ನು ಪಾಲನೆ ಮಾಡಿ, ಲಸಿಕೆ ಪಡೆಯಿರಿ ಎಂದು ಪದೇ ಪದೆ ಹೇಳುತ್ತಲೇ ಬಂದಿದ್ದಾರೆ. ಈಗಲೂ ಜನರ ಮುಂದೆ ಉಳಿದಿರುವುದು ಇಷ್ಟೇ. ತಾವೇ ಜವಾಬ್ದಾರಿಯಿಂದ ವರ್ತಿಸಿ, ಮಾಸ್ಕ್ ಹಾಕಿಕೊಂಡು ಕೊರೊನಾ ನಿಯಂತ್ರಣ ನಿಯಮಗಳನ್ನು ಪಾಲಿಸಬೇಕು.