ನವದೆಹಲಿ:ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ನ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಪತ್ತೆಯಾದ ನಂತರ ಜಗತ್ತಿನಾದ್ಯಂತ ಒಮಿಕ್ರಾನ್ ಹರಡುವ ಭೀತಿಯಲ್ಲಿದ್ದು, ಏತನ್ಮಧ್ಯೆ ಭಾರತವೂ ಕೂಡಾ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಯಾನ ಸಂಚಾರದ ಪುನರಾರಂಭವನ್ನು ಮುಂಡೂಡುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಬೆಂಕಿ ಬಿದ್ದರೂ ಭೂರಿ ಭೋಜನ ಬಿಡಲಿಲ್ಲ; ವೈರಲ್ ಆದ ವಿಡಿಯೋ
ಈ ಮೊದಲು ಡಿಸೆಂಬರ್ 15ರಿಂದ ಅಂತಾಷ್ಟ್ರೀಯ ವಾಣಿಜ್ಯ ವಿಮಾನ ಸಂಚಾರ ಪುನರಾರಂಭಿಸಲಾಗುವುದು ಎಂದು ನಿಗದಿಯಾಗಿತ್ತು. ಅಂತಾರಾಷ್ಟ್ರೀಯ ವಿಮಾನ ಸಂಚಾರದ ಪುನರಾರಂಭವನ್ನು ಮುಂದೂಡಲಾಗಿದೆ ಎಂದು ಡಿಜಿಸಿಎ(ಡೈರೆಕ್ಟೋರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ತಿಳಿಸಿದೆ.
ಡಿಜಿಸಿಎ ಬಿಡುಗಡೆಗೊಳಿಸಿರುವ ಪ್ರಕಟಣೆ ಪ್ರಕಾರ, ಕೋವಿಡ್ ನ ರೂಪಾಂತರಿ ಒಮಿಕ್ರಾನ್ ಜಾಗತಿಕವಾಗಿ ಭಯ ಹುಟ್ಟಿಸಿದ್ದು, ಸ್ಥಿತಿಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರ ಪುನರಾರಂಭಿಸುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದೆ.
ಒಮಿಕ್ರಾನ್ ಸೋಂಕು ಜಗತ್ತಿನ 13 ದೇಶಗಳಲ್ಲಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಾಗತಿಕವಾಗಿ ವಿಮಾನ ಸಂಚಾರದ ಮೇಲೆ ನಿರ್ಬಂಧ ಜಾರಿಯಾಗತೊಡಗಿದೆ. ಭಾರತದಲ್ಲಿಯೂ ಒಮಿಕ್ರಾನ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ.