Advertisement

ಒಮಿಕ್ರಾನ್ ಹೆಚ್ಚಳ: ಜಗತ್ತಿನ ಕೆಲವು ದೇಶಗಳಲ್ಲಿ ಮತ್ತೆ ಲಾಕ್ ಡೌನ್, ಕಠಿಣ ನಿರ್ಬಂಧ ಜಾರಿ

12:16 PM Dec 22, 2021 | Team Udayavani |

ಸಿಡ್ನಿ: ಜಗತ್ತಿನಾದ್ಯಂತ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ತೆರೆಯುವುದನ್ನು ಮುಂದೂಡಿರುವುದಾಗಿ ನ್ಯೂಜಿಲ್ಯಾಂಡ್ ತಿಳಿಸಿದೆ. ಅಲ್ಲದೇ ಹಲವಾರು ದೇಶಗಳು ಭಾಗಶಃ ಲಾಕ್ ಡೌನ್ ಮೊರೆ ಹೋಗಿದ್ದು, ಇನ್ನು ಕೆಲವು ದೇಶಗಳು ಲಾಕ್ ಡೌನ್ ಮಾದರಿಯ ಕಠಿಣ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ.

Advertisement

ಯುರೋಪ್ ನಾದ್ಯಂತ, ಅಮೆರಿಕ, ಜಪಾನ್ ನಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹಲವು ದೇಶಗಳಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷ ಸಂಭ್ರಮಾಚರಣೆಗೆ ಹಲವು ನಿರ್ಬಂಧ ವಿಧಿಸಿದೆ ಎಂದು ವರದಿ ತಿಳಿಸಿದೆ.

ನಾರ್ವೆ:

ಕೋವಿಡ್ 19 ಹೊಸ ರೂಪಾಂತರ ತಳಿ ಒಮಿಕ್ರಾನ್ ಕ್ಷಿಪ್ರವಾಗಿ ಹರಡುವುದನ್ನು ತಡೆಗಟ್ಟಲು ನಾರ್ವೆ ಲಾಕ್ ಡೌನ್ ಮಾದರಿಯ ನಿರ್ಬಂಧಗಳನ್ನು ಜಾರಿಗೊಳಿಸಿದೆ. ನಾರ್ವೆಯಲ್ಲಿ ದಿನಂಪ್ರತಿ 90,000ದಿಂದ 3,00,000 ಕೋವಿಡ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಆಲ್ಕೋಹಾಲ್ ಸರಬರಾಜು ಮಾಡುವುದಕ್ಕೆ ನಿರ್ಬಂಧ ಹೇರಿದೆ. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಎಂದು ಆದೇಶ ಹೊರಡಿಸಿದೆ.

ನೆದರ್ಲ್ಯಾಂಡ್:

Advertisement

ಒಮಿಕ್ರಾನ್ ಸೋಂಕು ಪ್ರಕರಣ ತೀವ್ರ ಗತಿಯಲ್ಲಿ ಹೆಚ್ಚಳವಾಗುತ್ತಿರುವ ಪರಿಣಾಮ ನೆದರ್ಲ್ಯಾಂಡ್ ನಲ್ಲಿ ಲಾಕ್ ಡೌನ್ ಹೇರಲು ನಿರ್ಧರಿಸಿದೆ. ತುರ್ತು ಸೇವೆಗಳನ್ನು ಹೊರತುಪಡಿಸಿ, ಬಾರ್, ರೆಸ್ಟೋರೆಂಟ್ ಸೇರಿದಂತೆ ಬಹುತೇಕ ಸೇವೆಗಳು ಜನವರಿ 14ರವರೆಗೆ ಬಂದ್ ಮಾಡಲಾಗಿದೆ ಎಂದು ಹೇಳಿದೆ.

ಯುಕೆ:

ಯುನೈಟೆಡ್ ಕಿಂಗ್ ಡಮ್ ನಲ್ಲಿಯೂ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಯುಕೆಯಲ್ಲಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಕಡ್ಡಾಯಗೊಳಿಸಿದೆ. ಅಲ್ಲದೇ ಮಾಸ್ಕ್ ಹಾಗೂ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿರುವುದಾಗಿ ವರದಿ ವಿವರಿಸಿದೆ.

ಇನ್ನುಳಿದಂತೆ ದಕ್ಷಿಣ ಕೊರಿಯಾ, ಜರ್ಮನಿ ಹಾಗೂ ಐರ್ಲ್ಯಾಂಡ್ ನಲ್ಲಿಯೂ ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಬಹುತೇಕ ಮತ್ತೆ ಭಾಗಶಃ ಅಥವಾ ಪೂರ್ಣ ಲಾಕ್ ಡೌನ್ ಜಾರಿಗೊಳಿಸಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next