Advertisement

ಒಮಿಕ್ರಾನ್‌ ಭೀತಿ: ವಿದೇಶದಿಂದ ಹಲವರ ಪ್ರಯಾಣ ರದ್ದು 

12:53 AM Dec 05, 2021 | Team Udayavani |

ಮಂಗಳೂರು: ಒಮಿಕ್ರಾನ್‌ ಆತಂಕವು ವಿಮಾನ ಪ್ರಯಾಣಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಅಂತಾರಾಷ್ಟ್ರೀಯ ವಿಮಾನ ಯಾನಿಗಳ ಸಂಖ್ಯೆಯನ್ನು ಕಡಿತ ಮಾಡಿದೆ.

Advertisement

ಮಂಗಳೂರಿಗೆ ಕೊಲ್ಲಿ ರಾಷ್ಟ್ರಗಳಿಂದ ಅಂತಾರಾಷ್ಟ್ರೀಯ ವೈಮಾನಿಕ ಸೇವೆ ಇದ್ದು, ಈಗ ಕೇಂದ್ರ ಸರಕಾರದ ವಂದೇ ಭಾರತ್‌ ಯೋಜನೆಯಡಿ ಮಾತ್ರ ದಿನಂಪ್ರತಿ 2 ಅಥವಾ 3 ವಿಮಾನಗಳು ಮಾತ್ರ ಆಗಮಿಸುತ್ತಿವೆ. ಅಂತಾರಾಷ್ಟ್ರೀಯ ವಿಮಾನ ಯಾನವನ್ನು ಒಮಿಕ್ರಾನ್‌ ಭೀತಿಯಿಂದಾಗಿ ಮುಂದೂಡಲಾಗಿದೆ.

ಕ್ರಿಸ್ಮಸ್‌ ಮತ್ತು ಇತರ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಲು ಮುಂಗಡ ಟಿಕೆಟ್‌ ಕಾದಿರಿಸಿದವರ ಪೈಕಿ ಕೆಲವರು ಯಾನವನ್ನು ರದ್ದುಪಡಿಸಿದರೆ ಕೆಲವರು ಮುಂದೂಡಿದ್ದಾರೆ. ಉಡುಪಿ ಜಿಲ್ಲಾಡಳಿತವು ವಿದೇಶಿ ಪ್ರಯಾಣಿಕರು ಬಂದರೆ ಕ್ವಾರಂಟೈನ್‌ ಆಗಬೇಕೆಂದು ಹೇಳಿರುವುದು ಕೂಡ ಅನಿವಾಸಿಗಳು ಪ್ರಯಾಣವನ್ನು ಮುಂದೂಡಲು ಕಾರಣ.

ಪ್ರಸ್ತುತ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ರ್‍ಯಾಂಡಮ್‌ ಆಗಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಆದರೆ ಅವರು ವಿದೇಶದಿಂದ ವಿಮಾನ ಏರುವಾಗ ಆರ್‌ಟಿಪಿಸಿಆರ್‌ ನೆಗೆಟಿವ್‌ ಪ್ರಮಾಣ ಪತ್ರ ಹೊಂದಿರಬೇಕಾಗುತ್ತದೆ.

ಮಂಗಳೂರು ನಿಲ್ದಾಣದಲ್ಲಿ ರ್‍ಯಾಂಡಮ್‌ ಆಗಿ 100 ಮಂದಿಯಲ್ಲಿ ಇಬ್ಬರು ಅಥವಾ ನಾಲ್ವರಿಗೆ ತಪಾಸಣೆ ನಡೆಸಲಾಗುತ್ತಿದ್ದು, ಈ ತಪಾಸಣೆಯ ಖರ್ಚನ್ನು ತಪಾಸಣೆಗೆ ಒಳಗಾದವರೇ ಭರಿಸಬೇಕಾಗುತ್ತದೆ.

Advertisement

ಮಂಗಳೂರಿನಿಂದ ಯುಎಇಗೆ ಹೋಗುವವರು 48 ಗಂಟೆಗಳ ಆರ್‌ಟಿಪಿಸಿಆರ್‌ ಟೆಸ್ಟ್‌ ನೆಗೆಟಿವ್‌ ಪ್ರಮಾಣ ಪತ್ರ ಮಾತ್ರವಲ್ಲದೆ ವಿಮಾನ ನಿಲ್ದಾಣದಲ್ಲಿ ರ್ಯಾಟ್‌ ಟೆಸ್ಟ್‌ಗೆ ಒಳಪಡಬೇಕು, ನೆಗೆಟಿವ್‌ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ. ಆದರೆ ಕತಾರ್‌, ದೋಹಾ, ಕುವೈಟ್‌ ಪ್ರಯಾಣಿಕರಿಗೆ ರ್ಯಾಟ್‌ ಟೆಸ್ಟ್‌ನ ಅಗತ್ಯ ಇಲ್ಲ. 48 ಗಂಟೆಗಳ ಆರ್‌ಟಿಪಿಸಿಆರ್‌ ಟೆಸ್ಟ್‌ ನೆಗೆಟಿವ್‌ ಪ್ರಮಾಣ ಪತ್ರ ಮಾತ್ರ ಸಾಕು.

ಆಫ್ರಿಕಾ, ಲಂಡನ್‌, ಅಮೆರಿಕ ಮತ್ತಿತರ ದೇಶಗಳಿಂದ ಮಂಗಳೂರಿಗೆ ನೇರ ವಿಮಾನ ಯಾನ ಇಲ್ಲ. ಈ ದೇಶಗಳಿಂದ ಮಂಗಳೂರಿಗೆ ಬರುವವರು ದುಬಾೖ ಅಥವಾ ಮುಂಬಯಿ, ಬೆಂಗಳೂರು ಮೂಲಕ ಪ್ರಯಾಣಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next