ನವದೆಹಲಿ:ಜಿಂಬಾಬ್ವೆಯಿಂದ ಗುಜರಾತ್ ಗೆ ಆಗಮಿಸಿದ್ದ ಜಾಮ್ ನಗರ್ ನಿವಾಸಿಯಲ್ಲಿ ಕೋವಿಡ್ ನ ನೂತನ ರೂಪಾಂತರಿ ತಳಿ ಒಮಿಕ್ರಾನ್ ವೈರಸ್ ಪತ್ತೆಯಾಗಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಇದರೊಂದಿಗೆ ಭಾರತದಲ್ಲಿ ಮೂರು ಪ್ರಕರಣ ಪತ್ತೆಯಾದಂತಾಗಿದೆ.
ಇದನ್ನೂ ಓದಿ:ಶಿವರಾಮ್ ನಟರಷ್ಟೇ ಅಲ್ಲ, ಸ್ಟಾರ್ ನಟರ ಸಿನಿಮಾ ನಿರ್ಮಾಪಕ, ನಿರ್ದೇಶಕರೂ ಆಗಿ ಮನಗೆದ್ದಿದ್ರು…
ಗುಜರಾತ್ ಗೆ ಆಗಮಿಸಿದ್ದ 72 ವರ್ಷದ ಜಾಮ್ ನಗರ ನಿವಾಸಿಯನ್ನು ಪರೀಕ್ಷೆಗೊಳಪಡಿಸಿದಾಗ ಕೋವಿಡ್ 19 ಪಾಸಿಟಿವ್ ಬಂದ ನಂತರ ಗುರುವಾರ ಗಂಟಲು ದ್ರವವನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗಿತ್ತು ಎಂದು ಪಿಟಿಐ ವರದಿ ಮಾಡಿದೆ.
ಜಾಮ್ ನಗರ ನಿವಾಸಿಗೆ ಒಮಿಕ್ರಾನ್ ಸೋಂಕು ತಗುಲಿರುವುದಾಗಿ ಗುಜರಾತ್ ಆರೋಗ್ಯ ಇಲಾಖೆಯ ಕಮಿಷನರ್ ಜೈಪ್ರಕಾಶ್ ಶಿವ್ರಾರೆ ದೃಢಪಡಿಸಿದ್ದಾರೆ. ಈಗಾಗಲೇ ಬೆಂಗಳೂರಿನ ವೈದ್ಯರೊಬ್ಬರಲ್ಲಿ (46ವರ್ಷ) ಹಾಗೂ ದಕ್ಷಿಣ ಆಫ್ರಿಕಾದಿಂದ ಕರ್ನಾಟಕಕ್ಕೆ ಆಗಮಿಸಿದ್ದ 66 ವರ್ಷದ ವ್ಯಕ್ತಿಯೊಬ್ಬರಲ್ಲಿ ಒಮಿಕ್ರಾನ್ ಪತ್ತೆಯಾಗಿತ್ತು.
ಎರಡು ಪ್ರಕರಣಗಳು ಪತ್ತೆಯಾದ ನಂತರ ಭಾರತದಲ್ಲಿ ಕಠಿಣ ಮಾರ್ಗಸೂಚಿಯನ್ನು ಜಾರಿಗೊಳಿಸಲಾಗಿದ್ದು, ಅದರಂತೆ ದಕ್ಷಿಣ ಆಫ್ರಿಕಾ ಸೇರಿದಂತೆ ಒಮಿಕ್ರಾನ್ ಪತ್ತೆಯಾಗಿರುವ ದೇಶಗಳಿಂದ ಆಗಮಿಸುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇರಿಸಿ, ತಪಾಸಣೆ ನಡೆಸಲಾಗುತ್ತಿದೆ.
ಒಮಿಕ್ರಾನ್ ಎಷ್ಟು ಕ್ಷಿಪ್ರವಾಗಿ ಹರಡಬಲ್ಲದು ಮತ್ತು ಈ ಸೋಂಕು ಎಷ್ಟು ಗಂಭೀರ ಸ್ವರೂಪದ್ದು ಎಂದು ಪತ್ತೆಹಚ್ಚಲು ಕೆಲವು ವಾರಗಳ ಕಾಲ ಕಾಯಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತ್ತು. ಅಲ್ಲದೇ ಪ್ರಸ್ತುತ ಕೋವಿಡ್ ಗೆ ನೀಡುತ್ತಿರುವ ಚಿಕಿತ್ಸೆ ಒಮಿಕ್ರಾನ್ ವೈರಸ್ ವಿರುದ್ಧ ಎಷ್ಟು ಪರಿಣಾಮಕಾರಿ ಎಂಬುದನ್ನು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ.