Advertisement

10ಕ್ಕೂ ಹೆಚ್ಚು ದೇಶಗಳಿಗೆ ಒಮಿಕ್ರಾನ್‌

01:12 AM Nov 29, 2021 | Team Udayavani |

ಹೊಸದಿಲ್ಲಿ: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಕೊರೊನಾದ ಹೊಸ ರೂಪಾಂತರ “ಒಮಿಕ್ರಾನ್‌’ ಕ್ಷಿಪ್ರಗತಿಯಲ್ಲಿ ಹಲವು ದೇಶಗಳಲ್ಲಿ ವ್ಯಾಪಿಸತೊಡಗಿದೆ. ಅನೇಕ ನಿರ್ಬಂಧಗಳ ನಡುವೆಯೂ ಈ ಬೋಟ್ಸ್‌ವಾನಾ ವೈರಸ್‌ ವೇಗವಾಗಿ ಹಬ್ಬುತ್ತಿದ್ದು, 10ಕ್ಕೂ ಅಧಿಕ ದೇಶಗಳಿಗೆ ದಾಂಗುಡಿಯಿಟ್ಟಿದೆ. ಹೀಗಾಗಿ ಬಹುತೇಕ ಎಲ್ಲ ದೇಶಗಳೂ, ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾರಂಭಿಸಿವೆ.

Advertisement

ರವಿವಾರ ಆಸ್ಟ್ರೇಲಿಯಾದಲ್ಲಿ ಹಾಗೂ ಡೆನ್ಮಾರ್ಕ್‌ನಲ್ಲಿ ತಲಾ 2 ಪ್ರಕರಣಗಳು ಪತ್ತೆಯಾಗಿದ್ದು, ದೇಶವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಇಸ್ರೇಲ್‌ ಸರಕಾರವು ತನ್ನ ದೇಶದೊಳಗೆ ವಿದೇಶಿಯರ ಪ್ರವೇಶಕ್ಕೇ ನಿಷೇಧ ಹೇರಿದೆ. ಜತೆಗೆ, ವಿದೇಶಗಳಿಂದ ಬರುವ ಇಸ್ರೇಲಿಗರಿಗೆ ಕಡ್ಡಾಯ ಕ್ವಾರಂಟೈನ್‌ ನಿಯಮ ಘೋಷಿಸಿದೆ.

ಹೊಸ ರೂಪಾಂತರಿ ಬಗ್ಗೆ ವಿಸ್ತೃತ ಅಧ್ಯಯನ ಆಗುವವರೆಗೂ ಅತಿಯಾದ ನಿರ್ಬಂಧಗಳನ್ನು ಜಾರಿ ಮಾಡಬೇಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ್ದರೂ ಅದಕ್ಕೆ ಯಾರೂ ಕಿವಿಗೊಡುತ್ತಿಲ್ಲ. ನ್ಯೂಜಿಲ್ಯಾಂಡ್‌, ಥಾಯ್ಲೆಂಡ್‌, ಇಂಡೋನೇಷ್ಯಾ, ಸಿಂಗಾಪುರ, ಶ್ರೀಲಂಕಾ, ಮಾಲ್ಡೀವ್ಸ್‌ ಹಾಗೂ ಸೌದಿ ಅರೇಬಿಯಾ ಕೂಡ ದ. ಆಫ್ರಿಕಾದ ದೇಶಗಳಿಂದ ಬರುವವರಿಗೆ ನಿಷೇಧ ಹೇರಿವೆ.

ಯುಕೆಯಲ್ಲಿ ಬಿಗಿ ನಿಯಮ: ಯುನೈಟೆಡ್‌ ಕಿಂಗ್‌ಡಂನಲ್ಲಿ 2 ಪ್ರಕರಣ ಪತ್ತೆಯಾಗುತ್ತಿದ್ದಂತೆ, ಮಾಸ್ಕ್ ನಿಯಮ ಬಿಗಿಗೊಳಿಸಲಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಕಡ್ಡಾಯ ಪರೀಕ್ಷೆಗೂ ಸೂಚಿಸಿದೆ. ಈಗಾಗಲೇ 10 ದೇಶಗಳಿಂದ ಬರುವ ವಿಮಾನಗಳಿಗೆ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ:ದಯವಿಟ್ಟು ಥಿಯೇಟರ್‌ ಒಳಗೆ ಪಟಾಕಿ ಹೊಡೆಯಬೇಡಿ : ಅಭಿಮಾನಿಗಳಲ್ಲಿ ಸಲ್ಮಾನ್‌ ಮನವಿ

Advertisement

ವೃದ್ಧಾಶ್ರಮದ 62 ಮಂದಿಗೆ ಸೋಂಕು
ಒಮಿಕ್ರಾನ್‌ ಆತಂಕದ ನಡುವೆಯೇ ದೇಶದಲ್ಲಿ ಕೊರೊನಾ ಕ್ಲಸ್ಟರ್‌ಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವೃದ್ಧಾಶ್ರಮವೊಂದರಲ್ಲಿ 62 ಮಂದಿಗೆ ಸೋಂಕು ದೃಢಪಟ್ಟಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು, ಮಧ್ಯಪ್ರದೇಶದಲ್ಲಿ ಕಳೆದ ಒಂದು ತಿಂಗಳಿಂದೀಚೆಗೆ ವಿದೇಶಗಳಿಂದ ಬಂದ ಎಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಇದೇ ವೇಳೆ, ದೇಶಾದ್ಯಂತ 24 ಗಂಟೆಗಳ ಅವಧಿಯಲ್ಲಿ 8,774 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 621 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಒಮಿಕ್ರಾನ್‌ ಹಾವಳಿ ಎಲ್ಲೆಲ್ಲಿ?

1.ಆಸ್ಟ್ರೇಲಿಯಾ- ದ. ಆಫ್ರಿಕಾದಿಂದ ಸಿಡ್ನಿಗೆ ಬಂದಿಳಿದ ಇಬ್ಬರು ಪ್ರಯಾಣಿಕರಲ್ಲಿ ಸೋಂಕು ದೃಢ.

2.ಇಟಲಿ – ಮೊಜಾಂಬಿಕ್‌ಗೆ ಭೇಟಿ ನೀಡಿದ್ದ ಇಟಲಿ ಪ್ರಜೆಗಳಲ್ಲಿ ಹೊಸ ರೂಪಾಂತರಿ ಪತ್ತೆ. ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಐವರಿಗೆ ಸೋಂಕು.

3.ಜರ್ಮನಿ – ನ.24ರಂದ ದ.ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಒಮಿಕ್ರಾನ್‌ ರೂಪಾಂತರಿ ದೃಢ.

4.ನೆದರ್ಲೆಂಡ್ಸ್‌- ದ.ಆಫ್ರಿಕಾದಿಂದ ಬಂದಿಳಿದ 61 ಪ್ರಯಾಣಿಕರಿಗೆ ಪಾಸಿಟಿವ್‌. ಈ ಪೈಕಿ 13 ಮಂದಿಗೆ ಒಮಿಕ್ರಾನ್‌.

5.ಬ್ರಿಟನ್‌ – ಒಮಿಕ್ರಾನ್‌ನ ಎರಡು ಪ್ರಕರಣಗಳು ದೃಢ.

6.ಇಸ್ರೇಲ್‌ – ಮಲಾವಿಯಿಂದ ಬಂದ ಒಬ್ಬ ವ್ಯಕ್ತಿಯಲ್ಲಿ ಸೋಂಕು ದೃಢ.

7.ಹಾಂಕಾಂಗ್‌- ದ. ಆಫ್ರಿಕಾದ ಬಳಿಕ ಮೊದಲ ಬಾರಿಗೆ ಎರಡು ಪ್ರಕರಣ ಪತ್ತೆಯಾಗಿದ್ದು ಹಾಂಕಾಂಗ್‌ನಲ್ಲಿ.

8.ಬೋಟ್ಸ್‌ವಾನಾ- ಈವರೆಗೆ ಒಬ್ಬ ವ್ಯಕ್ತಿಯಲ್ಲಿ ಒಮಿಕ್ರಾನ್‌ ವೈರಸ್‌ ದೃಢಪಟ್ಟಿದೆ

9.ಬೆಲ್ಜಿಯಂ – ಶನಿವಾರವಷ್ಟೇ ಒಬ್ಬ ವ್ಯಕ್ತಿಗೆ ಹೊಸ ರೂಪಾಂತರ ದೃಢ.

10.ಡೆನ್ಮಾರ್ಕ್‌ – ದಕ್ಷಿಣ ಆಫ್ರಿಕಾದಿಂದ ವಾಪಸಾಗಿದ್ದ ಇಬ್ಬರಿಗೆ ಒಮಿಕ್ರಾನ್‌ ಸೋಂಕು.

ಸ್ಪೈಕ್‌ ಪ್ರೊಟೀನ್‌ನಲ್ಲಿ 30 ರೂಪಾಂತರಗಳನ್ನು ಹೊಂದಿ ಈ ಹೊಸ ರೂಪಾಂತರ ಒಮಿಕ್ರಾನ್‌ ಸೃಷ್ಟಿಯಾಗಿದೆ. ಹೀಗಾಗಿ ಇದು ಪ್ರತಿಕಾಯಗಳಿಂದ ಎಸ್ಕೇಪ್‌ ಆಗುವ ಸಾಮರ್ಥ್ಯ ಹೊಂದಿರಬಹುದು. ಇದರ ವಿರುದ್ಧ ಲಸಿಕೆಗಳ ಪರಿಣಾಮಕತ್ವವನ್ನು ಆದಷ್ಟು ಬೇಗ ಅಧ್ಯಯನ ಮಾಡಬೇಕು.
-ಡಾ| ರಣದೀಪ್‌ ಗುಲೇರಿಯಾ, ಏಮ್ಸ್‌ ಮುಖ್ಯಸ್ಥ

ಅಮೆರಿಕದಲ್ಲಿ ಈವರೆಗೆ ಒಮಿಕ್ರಾನ್‌ ರೂಪಾಂತರಿ ಪ್ರಕರಣ ಪತ್ತೆಯಾಗಿಲ್ಲ. ಆದರೆ ಈಗಾಗಲೇ ಅದು ಇಲ್ಲಿ ಹಬ್ಬಿದ್ದರೆ ಅಚ್ಚರಿ ಪಡಬೇಕಾಗಿಲ್ಲ. ಏಕೆಂದರೆ ಅದರ ಪ್ರಸರಣದ ವೇಗ ಅಷ್ಟೊಂದಿದೆ. ಅದರ ವ್ಯಾಪಿಸುವಿಕೆಯನ್ನು ತಡೆಯುವುದು ಅಷ್ಟು ಸುಲಭವಲ್ಲ.
-ಡಾ| ಆ್ಯಂಥೊನಿ ಫಾಸಿ, ಅಮೆರಿಕದ ಸೋಂಕು ರೋಗಗಳ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next