Advertisement

ರಾಜ್ಯದಲ್ಲಿ ಒಮಿಕ್ರಾನ್ ಪತ್ತೆ: ಸಚಿವ ಡಾ. ಅಶ್ವಥ್ ನಾರಾಯಣ್ ಹೇಳಿದ್ದೇನು? 

06:41 PM Dec 02, 2021 | Team Udayavani |

ಬೆಂಗಳೂರು : ಕೋವಿಡ್ ವೈರಾಣುವಿನ ಹೊಸ ರೂಪಾಂತರಿ ತಳಿ ಒಮಿಕ್ರಾನ್ ಆತಂಕ ಸೃಷ್ಟಿಸಿರುವುದು ನಿಜವಾದರೂ ಸದ್ಯಕ್ಕೆ ರಾಜ್ಯದಲ್ಲಿ ಚಿತ್ರ ಮಂದಿರ, ಹೋಟೆಲ್ ಮತ್ತು ಮಾಲ್ ಗಳನ್ನು ಮುಚ್ಚುವುದಿಲ್ಲ. ಆದರೆ, ಇಂತಹ ಸ್ಥಳಗಳಿಗೆ ಹೋಗುವವರಿಗೆ ಸದ್ಯದಲ್ಲೇ ಲಸಿಕೆ ಕಡ್ಡಾಯ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಗುರುವಾರ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಯಾವುದೇ ವಲಯದ ಚಟುವಟಿಕೆಗಳನ್ನು ನಿರ್ಬಂಧಿಸುವ ಚಿಂತನೆ ಸರಕಾರಕ್ಕಿಲ್ಲ ಎಂದರು.

ಒಮಿಕ್ರಾನ್ ವೈರಾಣುವಿನಿಂದ ಜೀವಕ್ಕೇನೂ ಅಪಾಯವಿಲ್ಲ. ಆದರೆ ಮುಂಜಾಗ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಇದುವರೆಗೂ ಒಂದೂ ಲಸಿಕೆಯನ್ನು ಪಡೆದುಕೊಳ್ಳದೆ ಇರುವವರು ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಸರಕಾರ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಆದರೆ, ಅನಗತ್ಯ ಭಯ-ಭೀತಿಗಳು ಬೇಡ ಎಂದು ಅವರು ಹೇಳಿದರು.

ಚಿತ್ರಮಂದಿರ, ಹೋಟೆಲ್, ಮಾಲ್ ಗಳಂತಹ ಜನಸಂದಣಿ ಸ್ಥಳಗಳು ಸೇರಿದಂತೆ ಎಲ್ಲೆಡೆಗಳಿಗೂ ಜನರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಹೋಗಬೇಕು.ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿರುವ 11 ದೇಶಗಳ ಪರಿಸ್ಥಿತಿ ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು. ಸದ್ಯಕ್ಕೆ ರಾಜ್ಯದಲ್ಲಿ 2 ಪ್ರಕರಣಗಳು ಪತ್ತೆಯಾಗಿದ್ದು, ಇವರ ಪರೀಕ್ಷಾ ವರದಿಗಳನ್ನು ಜಿನೋಮ್ ಸೀಕ್ವೆನ್ಸ್ ಗೆ ಕಳಿಸಲಾಗಿದ್ದು, ಸಂಬಂಧಿಸಿದ ವ್ಯಕ್ತಿಗಳನ್ನು ಪ್ರತ್ಯೇಕ ವಾಸದಲ್ಲಿಡಲಾಗಿದೆ. ಅಂತಿಮ ಫಲಿತಾಂಶ ನೆಗೆಟೀವ್ ಆಗಿ ಬಂದರೆ ಮಾತ್ರ ಇವರನ್ನು ಮನೆಗೆ ಕಳಿಸಿ ಕೊಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕರ್ನಾಟಕಕ್ಕೇ ಕಾಲಿಟ್ಟ ಒಮಿಕ್ರಾನ್ : ದೇಶದಲ್ಲಿ ಮೊದಲ 2 ಪ್ರಕರಣಗಳು!

Advertisement

ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದ್ದು, ನೆಗೆಟೀವ್ ಬಂದವರಿಗೆ ಮಾತ್ರ ರಾಜ್ಯದೊಳಕ್ಕೆ ಪ್ರವೇಶಾನುಮತಿ ನೀಡಲಾಗುವುದು. ಈ ಆತಂಕದ ಸಂದರ್ಭದಲ್ಲಿ ಪ್ರತಿಯೊಬ್ಬರ ಜೀವ ಮತ್ತು ಜೀವನ ಉಳಿಸುವುದು ಸರಕಾರದ ಆದ್ಯತೆಯಾಗಿದೆ ಎಂದು ಸಚಿವರು ನುಡಿದರು.

ಒಮೈಕ್ರಾನ್ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ ವಿಧಾನಮಂಡಲದ ಅಧಿವೇಶನವನ್ನು ಕೂಡ ರದ್ದುಪಡಿಸಬೇಕೆಂದು ವಿಧಾನಸೌಧ ಸಚಿವಾಲಯ ಸಲಹೆ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಭಾಪತಿಯೊಂದಿಗೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next