Advertisement

ದೇಶ 3ನೇ ಅಲೆಯ ಅಂಚಿನಲ್ಲಿದೆ; ಲಸಿಕೆ ತಾಂತ್ರಿಕ ಸಮಿತಿ ಮುಖ್ಯಸ್ಥ ಅರೋರಾ ಎಚ್ಚರಿಕೆ

02:40 PM Jan 04, 2022 | Team Udayavani |

ಹೊಸದಿಲ್ಲಿ: ದೇಶದ ದೊಡ್ಡ ನಗರಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಒಮಿಕ್ರಾನ್‌ ದೃಢಪಟ್ಟಿದೆ. ಇದರಿಂದಾಗಿ ದೇಶದಲ್ಲಿ ಮೂರನೇ ಅಲೆಯ ಅಂಚಿನಲ್ಲಿದ್ದೇವೆ ಎಂದು ಲಸಿಕೆ ಹಾಕಿಸುವು ದಕ್ಕಾಗಿ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ| ಎನ್‌.ಕೆ. ಅರೋರಾ ಹೇಳಿದ್ದಾರೆ.

Advertisement

“ಎನ್‌ಡಿಟಿವಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮುಂಬಯಿ, ದಿಲ್ಲಿ, ಕೋಲ್ಕತಾಗಳಲ್ಲಿ ದೇಶದ ಒಟ್ಟು ಒಮಿಕ್ರಾನ್‌ ರೂಪಾಂತರಿ ಪ್ರಕರಣಗಳ ಶೇ. 75ರಷ್ಟು ಇವೆ ಎಂದು ಹೇಳಿದ್ದಾರೆ.

ದೇಶದ ಮೊದಲ ರೂಪಾಂತರಿ ಕೇಸು ಕಳೆದ ತಿಂಗಳ ಮೊದಲ ವಾರದಲ್ಲಿ ದೃಢ ಪಟ್ಟಿತ್ತು. ರಾಷ್ಟ್ರ ಮಟ್ಟಕ್ಕೆ ಹೋಲಿಕೆ ಮಾಡಿದರೆ, ದೇಶವ್ಯಾಪಿಯಾಗಿ ಕಳೆದ ವಾರ ದೃಢಪಟ್ಟ ರೂಪಾಂತರಿಗಳ ಪೈಕಿ ಒಮಿಕ್ರಾನ್‌ ಪಾಲು ಶೇ.12 ಆಗಿತ್ತು. ಅನಂತರ ಅದರ ಪ್ರಮಾಣ ಶೇ.28ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ಹೀಗಾಗಿ ದೇಶದಲ್ಲಿ ಇತರ ರೂಪಾಂತರಿಗಳಿಗೆ ಹೋಲಿಕೆ ಮಾಡಿದರೆ ಒಮಿಕ್ರಾನ್‌ ಸಂಖ್ಯೆಯೇ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.

3ನೇ ಅಲೆ ಸನಿಹಕ್ಕೆ: ಹೆಚ್ಚುತ್ತಿರುವ ಒಮಿಕ್ರಾನ್‌ ಪ್ರಕರಣಗಳಿಂದಾಗಿ, ದೇಶ ಕೊರೊನಾದ ಮೂರನೇ ಅಲೆಯ ಅಂಚಿನಲ್ಲಿ ಇದೆ ಎಂದೂ ಅವರು ಹೇಳಿದ್ದಾರೆ. ಅದಕ್ಕೆ ಪೂರಕವಾಗಿ 4-5 ದಿನಗಳಿಂದ ಹೆಚ್ಚಾಗುತ್ತಿರುವ ಸೋಂಕಿನ ಸಂಖ್ಯೆಯೇ ಇದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ ಡಾ| ಎನ್‌.ಕೆ. ಅರೋರಾ. ಇದೇ ವೇಳೆ, 15-18ರ ವಯೋಮಿತಿಯವವರಿಗೆ ಲಸಿಕೆ ಹಾಕಿಸುವುದರಿಂದ ಏನೂ ಅಪಾಯ ಉಂಟಾಗ ಲಾರದು ಎಂದೂ ಅರೋರಾ ಹೇಳಿದ್ದಾರೆ.

Advertisement

ದಿನವಹಿ ಸೋಂಕು ಏರಿಕೆ: ರವಿವಾರದಿಂದ ಸೋಮವಾರದ ಅವಧಿಯಲ್ಲಿ ದೇಶದಲ್ಲಿ 33,750 ಸೋಂಕಿನ ಪ್ರಕರಣಗಳು ದೃಢಪಟ್ಟು, 123 ಮಂದಿ ಅಸುನೀಗಿದ್ದಾರೆ. ಇದೇ ಅವಧಿಯಲ್ಲಿ ದೇಶದಲ್ಲಿನ ಒಮಿಕ್ರಾನ್‌ ಪ್ರಕರಣ 1,700ಕ್ಕೆ ಏರಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.98.20 ಆಗಿದೆ ಎಂದು ಕೇಂದ್ರ ಸರಕಾರ ಸೋಮವಾರ ಬೆಳಗ್ಗೆ ತಿಳಿಸಿತ್ತು.

ಇದನ್ನೂ ಓದಿ:ಪ್ಯಾಂಗಾಂಗ್‌ ಸರೋವರಕ್ಕೆ ಸೇತುವೆ ನಿರ್ಮಿಸುತ್ತಿದೆ ಚೀನಾ! ಉಪಗ್ರಹ ಚಿತ್ರದಿಂದ ಸ್ಪಷ್ಟ

ಲಸಿಕೆಯನ್ನು ವಿರೋಧಿಸಿದ್ದ ಆರ್ಥಿಕಶಾಸ್ತ್ರಜ್ಞ ಸೋಂಕಿಗೆ ಬಲಿ
ಕೊರೊನಾಕ್ಕೆ ಲಸಿಕೆ ಸೂಕ್ತವಲ್ಲ. ಅದರಿಂದ ಸಮಸ್ಯೆ ಹೆಚ್ಚಾಗುತ್ತದೆ ಎಂದು ವಾದಿಸುತ್ತಲೇ ಬಂದಿದ್ದ ನೆದರ್ಲೆಂಡ್‌ನ‌ ಆರ್ಥಿಕ ತಜ್ಞ ರಾಬಿನ್‌ ಫ್ರಾನ್ಸ್‌ ಮ್ಯಾನ್‌ (53) ಸೋಂಕಿನಿಂದ ಡಿ.28ರಂದು ಅಸುನೀಗಿದ್ದಾರೆ. ಒಂದೂ ಡೋಸ್‌ ಲಸಿಕೆ ಪಡೆಯದ ಅವರಿಗೆ ಡಿ. 3ರಂದು ಸೋಂಕು ದೃಢವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು 2020ರಲ್ಲಿ ಲಾಕ್‌ಡೌನ್‌ ವಿರೋಧಿಸಿ, ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು. ಆರೋಗ್ಯ ಸಮಸ್ಯೆ ಇರುವವರಿಗೆ ಮಾತ್ರ ಲಸಿಕೆ ಬೇಕು. ಬೇರೆಯವರೆಲ್ಲರಿಗೂ ರೋಗನಿರೋಧಕ ಶಕ್ತಿ ಇದೆ ಎಂದು ವಾದಿಸಿದ್ದ ಅವರು, ತನ್ನ ತಂದೆ ತಾಯಿಗೆ ಲಸಿಕೆ ಕೊಡಿಸಿದ್ದರು. ಲಸಿಕೆ ಪಡೆಯುವುದರಿಂದ ಗುರುತಿಸಲಾಗದ ಸಮಸ್ಯೆಗಳಿಗೆ ನಾವು ಸಿಲುಕಿಕೊಳ್ಳುತ್ತೇವೆ ಎಂದು ವಾದಿಸಿದ್ದರು. ಅಸುನೀಗುವುದಕ್ಕೆ ಒಂದು ತಿಂಗಳು ಹಿಂದೆ ತಾವು ಕೊರೊನಾ ಲಸಿಕೆ ಪಡೆದಿಲ್ಲ ಎನ್ನುವುದಕ್ಕೆ ಸಾಕ್ಷಿಯನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು.

ಜಾನ್‌ ಅಬ್ರಹಾಂ, ಏಕ್ತಾಗೆ ಸೋಂಕು
ಬಾಲಿವುಡ್‌ ಸಿನೆಮಾ, ಟೀವಿ ಕಾರ್ಯಕ್ರಮಗಳ ನಿರ್ಮಾಪಕಿ ಏಕ್ತಾ ಕಪೂರ್‌ಗೆ ಕೊರೊನಾ ಸೋಂಕು ತಗುಲಿದೆ. ಆದರೆ ತಾನು ಚೇತರಿಸಿಕೊಳ್ಳುತ್ತಿದ್ದೇನೆಂದು ಅವರೇ ತಿಳಿಸಿದ್ದಾರೆ. 46 ವರ್ಷದ ಏಕ್ತಾ ಅವರು, ತನ್ನೊಂದಿಗೆ ಸಂಪರ್ಕಕ್ಕೆ ಬಂದಿರುವ ಎಲ್ಲರೂ ತತ್‌ಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸೂಚಿಸಿದ್ದಾರೆ. ಇದೇ ವೇಳೆ ಬಾಲಿವುಡ್‌ನ‌ ಖ್ಯಾತ ನಾಯಕ ನಟ ಜಾನ್‌ ಅಬ್ರಹಾಂ, ಅವರ ಪತ್ನಿ ಪ್ರಿಯಾ ರುಂಚಾಲ್‌ಗ‌ೂ ಕೊರೊನಾ ತಗುಲಿರುವುದು ಖಾತ್ರಿಯಾಗಿದೆ.

ಒಮಿಕ್ರಾನ್‌ ಪೀಡಿತರಿಗೂ ಚಿಕಿತ್ಸೆ
ಆರೋಗ್ಯ ವಿಮೆ ಇರುವವರಿಗೊಂದು ಸಂತಸದ ಸುದ್ದಿ . ಒಮಿಕ್ರಾನ್‌ ರೂಪಾಂತರಿ ದೃಢಪಟ್ಟವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ, ಅದಕ್ಕೆ ಸಂಬಂಧಿಸಿದ ಮೊತ್ತವನ್ನು ಕ್ಲೇಮು ಮಾಡಿಕೊಳ್ಳಲು ಅವಕಾಶ ಉಂಟು. ಈ ಬಗ್ಗೆ ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ (ಐಆರ್‌ಡಿಎಐ) ಸ್ಪಷ್ಟನೆ ನೀಡಿದೆ. ಎಲ್ಲ ರೀತಿಯ ಆರೋಗ್ಯ ವಿಮೆ ಹೊಂದಿದವರಿಗೂ ಈ ಸೌಲಭ್ಯ ಸಿಗಲಿದೆ. ಈ ನಿಟ್ಟಿನಲ್ಲಿ ವಿಮಾ ಕಂಪೆನಿಗಳು ಆಸ್ಪತ್ರೆಗಳ ಜತೆಗೆ ನಿಕಟ ಸಂಪರ್ಕ ಇರಿಸಬೇಕು ಎಂದು ಹೇಳಿದೆ.

ಜನಗಣತಿ ಸದ್ಯಕ್ಕೆ ಅನುಮಾನ
ದೇಶದಲ್ಲಿ ಹೆಚ್ಚುತ್ತಿರುವ ಸೋಂಕಿನ ಹಿನ್ನೆಲೆಯಲ್ಲಿ ನಡೆಯಬೇಕಾಗಿದ್ದ ಜನಗಣತಿಯನ್ನು ಕೈಗೆತ್ತಿಕೊಳ್ಳದೇ ಇರಲು ಕೇಂದ್ರ ಸರಕಾರ ಮುಂದಾಗಿದೆ. ಅದಕ್ಕೆ ಪೂರಕವಾಗಿ ಜೂನ್‌ ವರೆಗೆ ಜಿಲ್ಲೆಗಳ ಗಡಿ ಮತ್ತು ಇತರ ಸೀಮಾ ವ್ಯಾಪ್ತಿಯನ್ನು ಬದಲಾಯಿಸದಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲಾಗಿದೆ.

31ರ ವರೆಗೆ ಬಯೋಮೆಟ್ರಿಕ್‌ ಬೇಡ
ಹೆಚ್ಚುತ್ತಿರುವ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಿ ಉದ್ಯೋಗಿಗಳಿಗೆ ಜ.31ರ ವರೆಗೆ ಬಯೋಮೆಟ್ರಿಕ್‌ ಮೂಲಕ ಹಾಜರಿ ವ್ಯವಸ್ಥೆ ರದ್ದುಪಡಿಸಲಾಗಿದೆ. ಈ ಬಗ್ಗೆ ಕೇಂದ್ರ ಸರಕಾರದ ಸಿಬಂದಿ ಖಾತೆ ಸಹಾಯಕ ಸಚಿವ ಡಾ| ಜಿತೇಂದ್ರ ಸಿಂಗ್‌ ಟ್ವೀಟ್‌ ಮಾಡಿದ್ದಾರೆ. ಉದ್ಯೋಗಿಗಳ ಹಿತದೃಷ್ಟಿ ಯಿಂದ ಈ ಕ್ರಮ ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆ, ಕೇಂದ್ರ ಸರಕಾರ ಉಪ ಕಾರ್ಯದರ್ಶಿ ಹುದ್ದೆಗಿಂತ ಕೆಳಗಿನ ಶೇ. 50ರಷ್ಟು ಮಂದಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆಯನ್ನೂ ನೀಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next