ಮುದ್ದೇಬಿಹಾಳ: ತಂಗಡಗಿ ಗ್ರಾಪಂ ಮತ್ತು ಪಿಡಿಒ ವಿಷಯದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಇಲ್ಲಿನ ತಾಪಂ ಕಚೇರಿ ಎದುರು ಡಿ. 23ರಿಂದ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ, ತಂಗಡಗಿ ಗ್ರಾಮದ ಒಂದಿಬ್ಬರು ಜ. 3ರಿಂದ ಆರಂಭಿಸಿದ್ದ ಆಮರಣ ಉಪವಾಸ ಸತ್ಯಾಗ್ರಹ ಸರ್ಕಾರ ಹೊರಡಿಸಿರುವ ಒಮಿಕ್ರಾನ್ ನಿಯಮಗಳ ಹಿನ್ನೆಲೆ ಮತ್ತು ತಾಪಂ ಇಒ ನೀಡಿದ ಲಿಖೀತ ಪತ್ರದಿಂದಾಗಿ ಬುಧವಾರ ಅಂತ್ಯಗೊಂಡಿತು.
ತಮ್ಮ ಬೇಡಿಕೆ ಈಡೇರದಿದ್ದಲ್ಲಿ ಒಮಿಕ್ರಾನ್ ನಿಯಮಗಳು ಸಡಿಲಗೊಂಡ ಮೇಲೆ ಮತ್ತೇ ಧರಣಿ ಆರಂಭಿಸುವುದಾಗಿ ತಿಳಿಸಿ ಮುಖಂಡರು ಧರಣಿಗೆ ಅರೆಮನಸ್ಸಿನಿಂದಲೇ ಅಂತ್ಯ ಹೇಳಿದರು.
ಈ ವೇಳೆ ಆಮರಣ ಉಪವಾಸ ನಿರತರಿಗೆ ಇಒ ಶಿವಾನಂದ ಹೊಕ್ರಾಣಿ, ಪಿಎಸೈ ರೇಣುಕಾ ಜಕನೂರ ಉಪಸ್ಥಿತಿಯಲ್ಲಿ ಎಳನೀರು ಕುಡಿಸಲಾಯಿತು. ಇದಕ್ಕೂ ಮುನ್ನ ಇಒ ಶಿವಾನಂದ ಹೊಕ್ರಾಣಿ ಲಿಖೀತ ಪತ್ರ ನೀಡಿ, ಅದರಲ್ಲಿರುವ ಅಂಶಗಳನ್ನು ಮುಖಂಡರ ಗಮನಕ್ಕೆ ತಂದಿದ್ದರು. ಪಿಡಿಒ ಉಮೇಶ ರಾಠೊಡರು ವಿವಿಧ ಕಾಮಗಾರಿಗಳಿಗೆ ಭೋಗಸ್ ಬಿಲ್ ಪಾವತಿಸಿದ್ದು ಅವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಉಪವಾಸ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೀರಿ. ಈ ಕುರಿತು 4-1-2022ರಂದು ವಿಜಯಪುರ ಜಿಪಂ ಸಿಇಒ ಅವರ ನಿರ್ದೇಶನದಂತೆ ಜಿಪಂ ಉಪ ಕಾರ್ಯದರ್ಶಿಯವರು ತಂಗಡಗಿ ಗ್ರಾಪಂಗೆ ಮತ್ತು ಧರಣಿ ನಿರತರಿಗೆ ಭೇಟಿ ಆಗಿ ಅವ್ಯವಹಾರ, ಭೋಗಸ್ ಬಿಲ್ ಪಾವತಿ ಆರೋಪಗಳ ಬಗ್ಗೆ ಸೂಕ್ತ ತನಿಖೆ ಕೈಗೊಂಡು ವರದಿ ಸಲ್ಲಿಸಲು ಪಿಆರ್‌ಇಡಿಯ ಎಇಇ, ತಾಪಂನ ಎನ್‌ಆರ್‌ಇಜಿಯ ಎಡಿ ಮತ್ತು ಎನ್‌ಆರ್‌ಇಜಿಯ ತಾಂತ್ರಿಕ ಸಂಯೋಜಕರನ್ನೊಳಗೊಂಡ ತನಿಖಾ ಸಮಿತಿ ರಚಿಸಲಾಗಿದೆ.
ಮುಖಂಡರಾದ ಡಿ.ಬಿ.ಮುದೂರ, ಹರೀಶ ನಾಟೀಕಾರ, ಬಸವರಾಜ ಪೂಜಾರಿ ಮಾತನಾಡಿದರು. ಚನ್ನಪ್ಪ ವಿಜಯಕರ, ರೇವಣೆಪ್ಪ ಹರಿಜನ, ಮಹಾಂತೇಶ ಬಾಗಲಕೋಟ, ಮಲ್ಲು ತಳವಾರ, ಪರಶುರಾಮ ಮುರಾಳ, ಸಂಗಯ್ಯ ಸಾರಂಗಮಠ, ತಿಪ್ಪಣ್ಣ ಗೋನಾಳ, ಶೇಖರ ಆಲೂರ, ಪ್ರಕಾಶ ಸರೂರ, ದೇವರಾಜ ಹಂಗರಗಿ, ಬಾಲು ಹುಲ್ಲೂರ, ಹುಲಿಗೆಪ್ಪ ಚಲವಾದಿ, ಮಂಜು ಪೂಜಾರಿ ಇದ್ದರು.