Advertisement

ಹೊಸ ವರ್ಷದ ಸಂಭ್ರಮದಲ್ಲೇ ಜಾಗತಿಕ ಭೀತಿ ಹೆಚ್ಚಿಸಿದ ಕೋವಿಡ್‌ –ಓಮಿಕ್ರಾನ್‌

01:30 PM Dec 29, 2021 | Team Udayavani |

ಬೆಂಗಳೂರು :ಕಳೆದೆರಡು ವರ್ಷಗಳಿಂದ ಕೋವಿಡ್‌, ಲಾಕ್‌ಡೌನ್‌, ಆರ್ಥಿಕ ಹಿಂಜರಿತದಿಂದ ನರಳುತ್ತಿದ್ದ ಜಗತ್ತಿಗೆ ಈಗ ಕೋವಿಡ್‌ ಹೊಸ ತಳಿ ಓಮಿಕ್ರಾನ್‌ ಭೀತಿ ನಿಚ್ಚಳವಾಗಿದ್ದು, ಯುರೋಪ್‌ ಹಾಗೂ ಅಮೆರಿಕಾದಲ್ಲಿ ಪ್ರಕರಣಗಳ ಸಂಖ್ಯೆ ಆತಂಕ ಹುಟ್ಟಿಸುವ ರೀತಿ ಏರಿಕೆಯಾಗುತ್ತಿದೆ.

Advertisement

ಇನ್ನೊಂದೆಡೆ ವಿಶ್ವದ ದೊಡ್ಡಣ್ಣ ಅಮೆರಿಕಾ ಕೋವಿಡ್‌ ಮಾರ್ಗದರ್ಶಿ ಸೂತ್ರಗಳಲ್ಲಿ ಪದೇ ಪದೇ ಬದಲಾವಣೆ ಮಾಡುತ್ತಿರುವುದು ಅಲ್ಲಿನ ನಾಗರಿಕರಲ್ಲಿ ಆಕ್ರೋಶ ಸೃಷ್ಟಿಸಿದೆ. 10 ದಿನಗಳಷ್ಟಿದ್ದ ಕೋವಿಡ್‌ ಕ್ವಾರಂಟೈನ್‌ ಅವಧಿಯನ್ನು ಅಮೆರಿಕಾದ ಜೋ ಬಿಡನ್‌ ಸರಕಾರ ಇದ್ದಕ್ಕಿದ್ದಂತೆ ಐದು ದಿನಗಳಿಗೆ ಇಳಿಕೆ ಮಾಡಿದೆ. ಈ ಬಗ್ಗೆ ಅಮೆರಿಕಾದ ಆರೋಗ್ಯ ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಓಮಿಕ್ರಾನ್‌ ಪ್ರಕರಣ ಹೆಚ್ಚುತ್ತಿರುವಾಗ ಸರಕಾರದ ಇಂಥ “ಕಣ್ಣಾಮುಚ್ಚಾಲೆʼʼ ಆಟದ ಬಗ್ಗೆ ಸಾರ್ವಜನಿಕ ಟೀಕೆ ವ್ಯಕ್ತವಾಗತೊಡಗಿದೆ.

ಇನ್ನೊಂದೆಡೆ ಫ್ರಾನ್ಸ್‌ನಲ್ಲಿ ಒಂದೇ ದಿನ ಅತಿಹೆಚ್ಚು ಓಮಿಕ್ರಾನ್‌ ಪ್ರಕರಣ  ವರದಿಯಾಗಿದೆ. ಇದು ಯುರೋಪ್‌ನಲ್ಲೇ ದಾಖಲೆಯ ಸೋಂಕಿನ ಪ್ರಮಾಣವಾಗಿದೆ. 24 ಗಂಟೆಗಳ ಅವಧಿಯಲ್ಲಿ 1,79,807  ಪ್ರಕರಣ ವರದಿಯಾಗಿರುವುದು ಫ್ರಾನ್ಸ್‌ ಸರಕಾರವನ್ನು ಆತಂಕಕ್ಕೆ ದೂಡಿದೆ. ಇಟಲಿ, ಗ್ರೀಸ್‌, ಜರ್ಮನಿ, ಪೋರ್ತುಗಲ್‌ ನಲ್ಲೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.

ಆತಂಕದ ದಿನಕ್ಕೆ ಕಾಯಬೇಕಿದೆ : ಈ ಮಧ್ಯೆ ಹೇಳಿಕೆ ಬಿಡುಗಡೆ ಮಾಡಿರುವ ಫ್ರೆಂಚ್‌ ಹಾಸ್ಪಿಟಲ್‌ ಫೆಡರೇಶನ್‌ “ಭವಿಷ್ಯದಲ್ಲಿ ಇನ್ನೂ ಕಠಿಣ ಹಾಗೂ ಆತಂಕದ ದಿನಗಳನ್ನು ನಾವು ಎದುರು ನೋಡಬೇಕಿದೆʼʼ ಎಂದು ಎಚ್ಚರಿಕೆ ನೀಡಿದ್ದರೆ, ಜನವರಿ ಅಂತ್ಯದ ವೇಳೆಗೆ ಪ್ರತಿ ದಿನ 2.5 ಲಕ್ಷ ಪ್ರಕರಣಗಳು ದಾಖಲಾಗಬಹುದು ಎಂದು ಫ್ರಾನ್ಸ್‌ ಆರೋಗ್ಯ ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.

ಬ್ರಿಟನ್‌ನಲ್ಲಿ ಮಂಗಳವಾರ 1.29 ಲಕ್ಷ ಹೊಸ ಪ್ರಕರಣ ದಾಖಲಾಗಿದೆ. ದೇಶದಲ್ಲಿ ಹೊಸದಾಗಿ ಯಾವುದೇ ನಿಯಂತ್ರಣ ಹೇರುವುದಿಲ್ಲ ಎಂದು ಬ್ರಿಟಿಷ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಹೇಳಿಕೆ ನೀಡಿದ ಬೆನ್ನಲ್ಲೇ ಓಮಿಕ್ರಾನ್‌ ಅಟ್ಟಹಾಸ ಹೆಚ್ಚಳವಾಗಿದೆ. ಹೊಸ ವರ್ಷಾಚರಣೆಯನ್ನು ಎಚ್ಚರಿಕೆಯಿಂದ ನಡೆಸುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

Advertisement

ಭಾರತದ ಸ್ಥಿತಿ ಏನು ? :ಭಾರತದಲ್ಲಿ ಓಮಿಕ್ರಾನ್‌ ಭೀತಿ ಹಿನ್ನೆಲೆಯಲ್ಲಿ 11 ರಾಜ್ಯಗಳಲ್ಲಿ ಈಗಾಗಲೇ ನೈಟ್‌ ಕರ್ಪ್ಯೂ ವಿಧಿಸಲಾಗಿದೆ. ಕಳೆದ 24 ಗಂಟೆಯ ಅವಧಿಯಲ್ಲಿ 9,195 ಹೊಸ ಪ್ರಕರಣಗಳು ದೇಶಾದ್ಯಂತ ವರದಿಯಾಗಿದೆ. ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ದಿಲ್ಲಿ ಹಾಗೂ ತಮಿಳುನಾಡಿನಲ್ಲಿ ಹೆಚ್ಚು ಪ್ರಕರಣ ವರದಿಯಾಗಿದ್ದು 778 ಓಮಿಕ್ರಾನ್‌ ಪ್ರಕರಣ ದೃಢಪಟ್ಟಿದೆ. ಈ ಪ್ರಕರಣದಲ್ಲೂ ದಿಲ್ಲಿ ಮೊದಲ ಸ್ಥಾನದಲ್ಲಿದೆ.

ಮೂರನೇ ಅಲೆ ಎಂದ ನಿತೀಶ್‌ :ಈ ಮಧ್ಯೆ ಬಿಹಾರ್‌ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ತಮ್ಮ ರಾಜ್ಯದಲ್ಲಿ ಕೋವಿಡ್‌ ಮೂರನೇ ಅಲೆ ಈಗಾಗಲೇ ಆರಂಭವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಬಿಹಾರದಲ್ಲಿ ಒಂದೇ ದಿನ 47 ಪ್ರಕರಣ ದಾಖಲಾಗಿದೆ. ಆದರೆ ಹೊಸ ಮಾರ್ಗದರ್ಶಿ ಸೂತ್ರ ಸದ್ಯಕ್ಕೆ ಜಾರಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next