Advertisement
ಕೊರೊನಾದ ರೂಪಾಂತರಿ ತಳಿ ಒಮಿಕ್ರಾನ್ ದೆಸೆಯಿಂದ ಉಂಟಾಗಿರುವ ಅನಿಶ್ಚಿತ ವಾತಾವ ರಣದ ಹಿನ್ನೆಲೆಯಿಂದಾಗಿ ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆಯಾಗುತ್ತಿದ್ದ ದೇಶದ ಆರ್ಥಿಕತೆ ಹಿನ್ನಡೆ ಅನುಭವಿಸುವಂತಾಗಿದೆ. ಸಂಪೂರ್ಣ ನಕಾರಾತ್ಮಕವೆಂದು ಪರಿಗಣಿಸಿದ್ದ ದೇಶದ ಆರ್ಥಿಕತೆ ಅತೀ ದೊಡ್ಡ ಕುಸಿತದಿಂದ ಹೊರಬಂದು ಅತ್ಯಂತ ವೇಗದ ಪ್ರಗತಿ ದರ ದಾಖ ಲಿಸುವತ್ತ ದಾಪುಗಾಲಿರಿಸಿದ್ದ ಸಂದರ್ಭದಲ್ಲಿ ಒಮಿಕ್ರಾನ್ ಆತಂಕ ಹೆಚ್ಚಾಗಿರುವುದರಿಂದ ಹಾಲಿ ವೇಗವನ್ನು ಕಾಯ್ದುಕೊಳ್ಳುವುದು ಸಂದೇಹಾಸ್ಪದ ವಾಗಿದೆ ಮತ್ತು ಪ್ರಸಕ್ತ ಸನ್ನಿವೇಶದಲ್ಲಿ ಸವಾಲು ಗಳನ್ನು ಎದುರಿಸಲು ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.
Related Articles
Advertisement
ಇದನ್ನೂ ಓದಿ:ನೀಟ್ ಪಿಜಿ 2021ರ ಕೌನ್ಸೆಲಿಂಗ್ ವಿಳಂಬ : ರಸ್ತೆಗಿಳಿದು ಪ್ರತಿಭಟನೆಗೆ ಮುಂದಾದ ವೈದ್ಯರು
ಹಣದುಬ್ಬರ: ಏರುತ್ತಿರುವ ಹಣದುಬ್ಬರ ಆರ್ಥಿಕ ಪ್ರಗತಿಗೆ ಅಡಚಣೆಯನ್ನುಂಟು ಮಾಡುತ್ತಿದೆ. ದೇಶದಲ್ಲಿ ಸಗಟು ಹಣದುಬ್ಬರದ ಪ್ರಮಾಣವು ಪ್ರಸಕ್ತ ಹಣಕಾಸು ವರ್ಷದ ಆರಂಭದಿಂದಲೂ ಎರಡಂಕಿಗಳ ಮಟ್ಟದಲ್ಲಿ ಉಳಿದಿದೆ. ನವೆಂಬರ್‌ನಲ್ಲಿ ಅದು ಶೇ. 14.23ಕ್ಕೆ ಏರಿಕೆಯಾಗಿದೆ. ದೇಶದ ವಿವಿಧೆಡೆ ಅಕಾಲಿಕ ಮಳೆಯ ಕಾರಣ ಮುಂಗಾರು ಮತ್ತು ಹಿಂಗಾರು ಬೆಳೆಗಳಿಗೆ ಹಾನಿಯುಂಟು ಮಾಡಿದೆ. ತರಕಾರಿ ಬೆಳೆಗೂ ತೀವ್ರ ಹಾನಿಯಾಗಿದೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ಈಗಾಗಲೇ ಆಹಾರ ಧ್ಯಾನಗಳು, ಬೇಳೆ ಕಾಳುಗಳು, ಸಕ್ಕರೆ, ಬೆಲ್ಲ, ಹಣ್ಣುಹಂಪಲುಗಳು ಮತ್ತು ತರಕಾರಿಗಳ ಬೆಲೆ ಗಗನಕ್ಕೇರಿದೆ. ಅಡುಗೆ ಅನಿಲವೂ ಏರುಗತಿಯಲ್ಲಿರುವುದು ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆ ಏರುತ್ತಲೇ ಇರುವುದರಿಂದ ಹಣದುಬ್ಬರದ ಚಲನೆಯ ನಿಯಂತ್ರಣ ತಪ್ಪಿದ್ದು, ಅಲ್ಪಾವಧಿಯಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬರುವುದು ಕಷ್ಟ. ಇದು ನಿಜಕ್ಕೂ ಆತಂಕದ ಸಂಗತಿಯಾಗಿದೆ.ಜಿಎಸ್‌ಟಿ: ಜಿಎಸ್‌ಟಿ ಸಂಗ್ರಹಣೆ ನವೆಂಬರ್‌ನಲ್ಲಿ 1.32 ಲ. ಕೋ.ರೂ. ಗಳೊಂದಿಗೆ ಸತತ 5ನೇ ತಿಂಗಳು ಒಂದು ಲ. ಕೋ. ರೂ. ದಾಟಿರುವುದು ಗಮನಾರ್ಹ. ಇದು ಆರ್ಥಿಕತೆ ಸಹಜ ಸ್ಥಿತಿಗೆ ಮರಳುತ್ತಿವೆ ಎಂಬ ಸೂಚನೆಯಾಗಿತ್ತು. ಕೇಂದ್ರ ಸರಕಾರದ ನೀತಿ, ನಿಯಮಗಳು ಇ-ವೇ ಬಿಲ್, ಇ-ಇನ್‌ವಾಯ್ಸ ಹೆಚ್ಚುವರಿ ಪರಿಣಾಮಕಾರಿ ಯಾಗಿರುವುದರಿಂದ ತೆರಿಗೆ ವ್ಯಾಪ್ತಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಲ್ಲಿ ಬೆಲೆ ಏರಿಕೆಯ ಪ್ರಮಾಣದ ತೆರಿಗೆ ಅಂತರವೂ ಸೇರಿಕೊಂಡಿದೆ. ಅದಲ್ಲದೆ ಜಾಗೃತ ದಳದ ಚಟುವಟಿಕೆ ಚುರುಕುಗೊಂಡದ್ದರಿಂದ, ವಂಚನೆ ನಿಯಂತ್ರಣಗಳಿಂದ ತೆರಿಗೆ ವ್ಯಾಪ್ತಿಗೆ ಬರುವವರ ಸಂಖ್ಯೆ ಹೆಚ್ಚಾಯಿತು. ಜಿಎಸ್‌ಟಿ ಸಂಗ್ರಹಣೆ ಹೆಚ್ಚಾಗಿರುವುದು ಬೆಲೆ ಏರಿಕೆಯ ಪ್ರಮಾಣದಿಂದಲೇ ಹೊರತು ಜನರ ಆದಾಯ ವೃದ್ಧಿಯಿಂದಲ್ಲ. ಸರಕಾರದ ಆರ್ಥಿಕ ಚಿತ್ರಣಗಳು ಆರ್ಥಿಕಾಭಿವೃದ್ಧಿಯ ಪೂರ್ಣ ಸಂಕೇತವಲ್ಲ. ಜಿಎಸ್‌ಟಿ, ಜಿಡಿಪಿ ಅಂಕಿ ಅಂಶಗಳು ಜನರ ಭರವಸೆಯನ್ನು ನೀಗಿಸುವುದಿಲ್ಲ. ಆದುದರಿಂದ ಬೆಲೆ ಏರಿಕೆ ನಿಯಂತ್ರಣ ಸರಕಾರದ ಪ್ರಮುಖ ಆದ್ಯತೆಯಾಗಬೇಕು.ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನಜೀವನ ವಲ್ಲದೆ ಉಳಿವು-ಅಳಿವಿನ ಸಂಘರ್ಷದಲ್ಲಿ ಹೋರಾಡುತ್ತಿರುವುದು ಸಣ್ಣ ಕೈಗಾರಿಕೆಗಳು. ಇವುಗಳು ಬಾಗಿಲು ಮುಚ್ಚಿದರೆ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಸಾಮಾಜಿಕ, ಆರ್ಥಿಕ ಬಿಕ್ಕಟ್ಟು ಬಿಗಡಾಯಿಸುವ ಭೀತಿ ಇದೆ. ದೇಶದ ಒಟ್ಟು ಆಂತರಿಕ ಉತ್ಪಾದನೆಯಲ್ಲಿ ಕಿರು, ಸಣ್ಣ ಮತ್ತು ಮಧ್ಯಮ ವಲಯದ ಪಾಲು ಶೇ. 30ಕ್ಕೂ ಅಧಿಕ. ಆರ್ಥಿಕತೆಯ ಚಕ್ರ ಚಲಿಸಲಾರಂಭಿಸಿದರೂ ಕಿರು ಕೈಗಾರಿಕೆಗಳಿಗೆ ಒಳ್ಳೆಯ ದಿನಗಳು ಬರಲೇ ಇಲ್ಲ. ಸರಕಾರ ಈ ವಲಯದ ಕೈ ಹಿಡಿಯದಿದ್ದರೆ ಜಿಡಿಪಿಗೆ ಭಾರೀ ಕೊಡುಗೆ ನೀಡುವ ಒಂದು ವಲ ಯವೇ ನಿಷ್ಕ್ರಿಯಗೊಂಡು ಆರ್ಥಿಕತೆಗೆ ಭಾರೀ ಪ್ರಮಾಣದ ಹಿಂಜರಿಕೆಯಾಗಲಿದೆ. ಸರಕಾರವು ಕಚ್ಚಾ ವಸ್ತುಗಳ ಬೆಲೆ ಇಳಿಸಲು ಸಹಾಯ, ಇಂಧನ ಬೆಲೆಯಲ್ಲಿ ಇಳಿಕೆ, ಬ್ಯಾಂಕ್ ಸಾಲ ಪಡೆಯುವ ವಿಧಾನ ಸರಳೀಕರಿಸುವುದು, ಬಡ್ಡಿ ದರದಲ್ಲಿ ಕಡಿತ, ವಿದ್ಯುತ್ ಶುಲ್ಕ ವಿನಾಯತಿ, ರಫ್ತು ನಿಯಮ ಸರಳೀಕರಣ ಮತ್ತು ಕೃಷಿಕರಿಗೆ ನೀಡುವ ಬಡ್ಡಿದರಲ್ಲಿ ಸಣ್ಣ ಕೈಗಾರಿಕೆಗೆ ಸಾಲ ನೀಡಬೇಕು. -ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ