Advertisement

ಒಮಿಕ್ರಾನ್‌ ಆತಂಕ: ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ

11:50 PM Nov 29, 2021 | Team Udayavani |

ಒಮಿಕ್ರಾನ್‌ ಸೋಂಕು ಭೀತಿ ಹಿನ್ನೆಲೆಯಲ್ಲಿ ಗಡಿ ಭಾಗಗಳ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಚೆಕ್‌ಪೋಸ್ಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿರುವ ಜಿಲ್ಲಾಡಳಿತ ಅಧಿಕಾರಿಗಳ ಕಾರ್ಯನಿರ್ವಹಣೆ ಕುರಿತು ಮಾಹಿತಿ ಪಡೆದು ಅಗತ್ಯ ಸಲಹೆ ಸೂಚನೆ ನೀಡಿದೆ. ತೆಲಂಗಾಣ ಗಡಿಯಲ್ಲಿ ನಾಲ್ಕು ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ ಏಳು ಸೇರಿ ಬೀದರ್‌ ಜಿಲ್ಲೆಯಲ್ಲಿ ಒಟ್ಟು 11 ಚೆಕ್‌ಪೋಸ್ಟ್‌ ತೆರೆದು ನೆರೆ ರಾಜ್ಯದಿಂದ ಬರುತ್ತಿರುವ ಪ್ರಯಾಣಿಕರ ತಪಾಸಣೆ ತೀವ್ರಗೊಳಿಸಲಾಗಿದೆ. 

Advertisement

ಬೀದರ್‌: 11 ಚೆಕ್‌ಪೋಸ್ಟ್‌
ಬೀದರ್‌: ಒಮಿಕ್ರಾನ್‌ಗೆ ತಳಿಗೆ ಅಂಕುಶ ಹಾಕಲು ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಮುಂಜಾಗ್ರತಾ ಕ್ರಮಗಳ ಜತೆಗೆ ಗಡಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಿದೆ.

ವೈರಸ್‌ ಹರಡುವ ಅಪಾಯದ ಮುನ್ಸೂಚನೆ ಹಿನ್ನೆಲೆಯಲ್ಲಿ ಅಂತಾರಾಜ್ಯ ಗಡಿ ಚೆಕ್‌ ಪೋಸ್ಟ್‌ಗಳಲ್ಲಿ ಬಿಗಿ ಕ್ರಮಕ್ಕೆ ಆಡಳಿತ, ಪೊಲೀಸ್‌ ಇಲಾಖೆ ಮುಂದಾಗಿದೆ.

ತೆಲಂಗಾಣ ಗಡಿಯಲ್ಲಿ ನಾಲ್ಕು ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ ಏಳು ಸೇರಿ ಜಿಲ್ಲೆಯಲ್ಲಿ ಒಟ್ಟು 11 ಚೆಕ್‌ಪೋಸ್ಟ್‌ ತೆರೆದು ನೆರೆ ರಾಜ್ಯದಿಂದ ಬರುತ್ತಿರುವ ಪ್ರಯಾಣಿಕರ ತಪಾಸಣೆ ತೀವ್ರಗೊಳಿಸಲಾಗಿದೆ. ಸದ್ಯ ಮೊದಲ ಅಥವಾ ಎರಡನೇ ಲಸಿಕೆ ಪಡೆಯದವರನ್ನು ಪತ್ತೆ ಹಚ್ಚಿ ಸ್ಥಳದಲ್ಲೇ ವ್ಯಾಕ್ಸಿನೇಶನ್‌ ಮಾಡಲಾಗುತ್ತಿದೆ. ಪ್ರಯಾಣಿಕರಿಂದ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಪಡೆಯಲಾಗುತ್ತಿದ್ದು, ಇಲ್ಲದವರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಮೈ ಮರೆತ ಜನ; ಹೆಚ್ಚಿದ ಆತಂಕ
ಕೊರೊನಾ ಸೋಂಕು ಹಬ್ಬದಂತೆ ನಿಯಂತ್ರಿಸಲು ಜಿಲ್ಲಾಡಳಿತ ಪ್ರಯತ್ನ ಆರಂಭಿಸಿದ್ದರೆ, ಇತ್ತ ಕೋವಿಡ್‌ ನಿಯಮಗಳ ಪಾಲನೆ ವಿಷಯದಲ್ಲಿ ಜನರು ಮೈ ಮರೆತಿರುವುದು ದೊಡ್ಡ ಅಪಾಯ ಎದುರಾಗಬಹುದು. ಇನ್ನೊಂದೆಡೆ ಎಂಎಲ್ಸಿ ಚುನಾವಣೆ ಮತ್ತು ಮದುವೆ ಇತರ ಧಾರ್ಮಿಕ ಸಮಾರಂಭಗಳು ವ್ಯಾಪಕವಾಗಿ ನಡೆಯುತ್ತಿರುವುದು ಹೊಸ ತಳಿ ವೈರಸ್‌ಗೆ ಆಹ್ವಾನ ನೀಡುತ್ತದೆಯೇ ಎಂಬ ಆತಂಕ ಹೆಚ್ಚಿಸಿದೆ. ಸೋಂಕು ಪೂರ್ಣ ಹೋಗಿದೆ ಎಂದು ಶೇ.1 ಜನ ಸಹ ಮಾಸ್ಕ್ ಧರಿಸುತ್ತಿಲ್ಲ, ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. 3ನೇ ಅಲೆ ಘಾಸಿಗೊಳಿಸುವ ಮುನ್ನ ಜನರು ಮುನ್ನೆಚ್ಚರಿಕೆ ವಹಿಸಬೇಕಿದೆ.

Advertisement

ಚೆಕ್‌ಪೋಸ್ಟ್‌ಗೆ ಡಿ.ಸಿ. ಭೇಟಿ
ಚಾಮರಾಜನಗರ: ಒಮಿಕ್ರಾನ್‌ ಸೋಂಕು ಭೀತಿ ಹಿನ್ನೆಲೆಯಲ್ಲಿ ಗಡಿ ಭಾಗಗಳ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಗುಂಡ್ಲುಪೇಟೆ ತಾಲೂಕಿನ ಕೆಕ್ಕನಹಳ್ಳ ಚೆಕ್‌ ಪೋಸ್ಟ್‌ಗೆ ಸೋಮವಾರ ಬೆಳಿಗ್ಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ಕೇರಳದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಅವರು ಜಿಲ್ಲೆಯ ಗುಂಡ್ಲುಪೇಟೆ ಗಡಿಯಲ್ಲಿರುವ ಮೂಲೆಹೊಳೆ ಚೆಕ್‌ಪೋಸ್ಟ್‌ ಗೆ ಭೇಟಿ ನೀಡಿ ಪರಿಶೀಲಿಸಿದರು.

ಇದನ್ನೂ ಓದಿ:ರಾಜ್ಯದಲ್ಲಿ 257ಮಂದಿಯಲ್ಲಿ ಕೋವಿಡ್‌ ಸೋಂಕು ಪತ್ತೆ: ಐವರು ಸಾವು

ಕೇರಳ ಗಡಿಯಲ್ಲಿ ನಿಗಾ
ಮೈಸೂರು: ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ತಿಳಿಸಿದರು. ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವವರ ಮೇಲೆ ನಿಗಾ ವಹಿಸಲಾಗಿದೆ. ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದ್ದು, 72 ಗಂಟೆಗಳ ನೆಗೆಟಿವ್‌ ವರದಿ ಇದ್ದರೆ ಮಾತ್ರ ಒಳ ಬಿಡಲಾಗುತ್ತಿದೆ. ಅಲ್ಲದೆ ಕೇರಳ ಹಾಗೂ ಮಹಾರಾಷ್ಟ್ರದಿಂದ ನ.12ರಿಂದ 27ರವರೆಗೆ ಮೈಸೂರಿಗೆ ಬಂದಿರುವವರಿಗೆ ಮತ್ತೆ ಆರ್‌ಟಿಪಿಸಿರ್‌ ಪರೀಕ್ಷೆ ಮಾಡಿಸಲಾಗುತ್ತಿದೆ ಹೇಳಿದರು.

ಬಿಬಿಎಂಪಿ ಹದ್ದಿನ ಕಣ್ಣು
ಬೆಂಗಳೂರು: “ಒಮಿಕ್ರಾನ್‌”ಹೊಸ ರೂಪಾಂತರ ತಳಿಯ ಬಗ್ಗೆ ಹದ್ದಿನ ಕಣ್ಣಿರಿಸಿರುವ ಬಿಬಿಎಂಪಿ ಅಧಿಕಾರಿಗಳು ಆಯಾಕಟ್ಟಿನ ಸ್ಥಳಗಳಲ್ಲಿ ಕೋವಿಡ್‌ ಪರೀಕ್ಷೆಯನ್ನು ಮತ್ತೆ ಪ್ರಾರಂಭಿಸಿದ್ದು ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರವಾಸಿಗರ ಮೇಲೆ ನಿಗಾ ವಹಿಸಲಾಗಿದೆ.

ಬಸ್‌ ಮತ್ತು ರೈಲ್ವೇ ನಿಲ್ದಾಣ ಸೇರಿದಂತೆ ಇನ್ನಿತರ ಸಾರ್ವಜನಿಕ ಕ್ಷೇತ್ರಗಳಲ್ಲಿ ಬಿಬಿಎಂಪಿಯ ಆರೋಗ್ಯ ಸಿಬಂದಿ ಕೋವಿಡ್‌ ಪರೀಕ್ಷೆಯನ್ನು ಆರಂಭಿಸಿದ್ದಾರೆ. ಜತೆಗೆ ಜನಸಂದಣಿ ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ಮಾರ್ಷಲ್‌ಗ‌ಳ ಮೂಲಕ ಮಾಸ್ಕ್ ಧರಿಸುವಂತೆ ಮತ್ತು ಗುಂಪು ಸೇರಿದಂತೆ ಧ್ವನಿವರ್ಧಕಗಳ ತಿಳುವಳಿಕೆ ನೀಡುತ್ತಿದ್ದಾರೆ ಮಾತ್ರವಲ್ಲದೇ ಕೆಂಪೇಗೌಡ ಬಸ್‌ ನಿಲ್ದಾಣ, ಸಿಟಿ ರೈಲ್ವೇ ನಿಲ್ದಾಣ, ಕೆ.ಆರ್‌. ಮಾರುಕಟ್ಟೆ ಮುಂತಾದ ಪ್ರಮುಖ ಪ್ರದೇಶದಲ್ಲಿ ಮಾಸ್ಕ್ ಧರಿಸದ ಜನರಿಗೆ ದಂಡ ಹಾಕಿದ್ದಾರೆ.

ವಿದೇಶದಿಂದ ಬರುವ ಪ್ರಯಾಣಿಕರ ವರದಿ ನೆಗೆಟಿವ್‌ ಬಂದರೆ ಗಂಟಲು ದ್ರಾವಣ ಪರೀಕ್ಷೆ ಕೂಡ ಮಾಡಲಾಗುತ್ತದೆ. ಈಗಾಗಲೇ ದಕ್ಷಿಣ ಆಫ್ರಿಕಾದಿಂದ ಬಂದವರ ಗಂಟಲು ದ್ರಾವಣ ಪರೀಕ್ಷೆ ನಡೆಯುತ್ತಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಗೌರವ ಗುಪ್ತ ಅವರು ತಿಳಿಸಿದರು.

ಕೋವಿಡ್‌ ರೂಪಾಂತರಿ ವೈರಸ್‌ ಪತ್ತೆ ಹಿನ್ನೆಲೆ ಜಿಲ್ಲೆಯ ಗಡಿ ಭಾಗಗಳಲ್ಲಿ ಇನ್ನಷ್ಟು ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಚೆಕ್‌ಪೋಸ್ಟ್‌ಗಳು ದಿನದ 24 ಗಂಟೆಯೂ ಈ ಹಿಂದಿನಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಇನ್ನೂ ಲಸಿಕೆ ಪಡೆಯದವರು ಕೂಡಲೇ ಸ್ವಯಂ ಪ್ರೇರಿತವಾಗಿ ಲಸಿಕೆ ಪಡೆಯಬೇಕು.
-ಪ್ರಭು ಚವ್ಹಾಣ, ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next