Advertisement

ಮನೆ-ಬೆಳೆ ಹಾನಿ ಪರಿಶೀಲಿಸಿದ ನಿಂಬಣ್ಣವರ

05:49 PM Nov 25, 2021 | Team Udayavani |

ಕಲಘಟಗಿ: ಇತ್ತೀಚಿಗೆ ಸುರಿದ ಅಕಾಲಿಕ ಮಳೆಯಿಂದ ಮತಕ್ಷೇತ್ರದಾದ್ಯಂತ ಗ್ರಾಮೀಣ ಬದುಕು ಮೂರಾಬಟ್ಟೆಯಾಗಿದೆ. ತಕ್ಷಣ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಸಿ.ಎಂ.ನಿಂಬಣ್ಣವರ ಹೇಳಿದರು.

Advertisement

ತಾಲೂಕಿನ ತುಮ್ರಿಕೊಪ್ಪ, ದಾಸ್ತಿಕೊಪ್ಪ ಗ್ರಾಮಗಳಲ್ಲಿ ಅಕಾಲಿಕ ಮಳೆಗೆ ಮನೆ ಗೋಡೆಗಳು ಕುಸಿದಿರುವುದನ್ನು ಹಾಗೂ ಮಲಕನಕೊಪ್ಪ ಗ್ರಾಮದ ಹೊಲಗಳಲ್ಲಿನ ಬೆಳೆಗಳು ಹಾನಿಯಾಗಿರುವುದನ್ನು ಬುಧವಾರ ವೀಕ್ಷಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಹಳಷ್ಟು ಮನೆಗಳು ಹಾನಿಗೊಳಗಾಗಿದೆ. ಬಹುತೇಕ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಭತ್ತ, ಗೋವಿನಜೋಳ, ತೋಟಗಾರಿಕಾ ಬೆಳೆಗಳು, ಹತ್ತಿ ಮತ್ತು ಮೆಣಸಿನಕಾಯಿ ರೈತರ ಕೈಗೆ ಸಿಗದೇ ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ ಎಂದರು.

ಮನೆ ಹಾನಿ ಹಾಗೂ 5 ಹೆಕ್ಟೇರ್‌ವೊಳಗಿನ ರೈತರಿಗೆ ಈ ತಿಂಗಳ ಕೊನೆಯೊಳಗೆ ಅವರವರ ಖಾತೆಗೆ ಬೆಳೆ ನಾಶದ ಪರಿಹಾರ ಜಮಾ ಮಾಡಲು ಕ್ರಮ ಜರುಗಿಸಲಾಗುವುದು. ಈ ಹಿಂದಿನ ಹಾಗೂ ಇತ್ತೀಚಿನ ಮಳೆ ಅವಾಂತರದಿಂದ 184 ಮನೆಗಳಿಗೆ ಹಾನಿಯುಂಟಾಗಿದೆ. ಸುಮಾರು 9588 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿರುವ ಕುರಿತು ಈಗಿನ ಸಮೀಕ್ಷೆಯಲ್ಲಿ ತಿಳಿಸಿದೆ.

ಸಂಬಂಧಿಸಿದ ಅಧಿಕಾರಿಗಳು ಶ್ರಮ ವಹಿಸಿ ಭೇಟಿ ನೀಡಿ ಸಮೀಕ್ಷೆ ಕಾರ್ಯ ಶೀಘ್ರ ಮುಗಿಸಲು ಸೂಚಿಸಿದ್ದು, ಹಾನಿಗೊಳಗಾದವರಿಗೆ ತಕ್ಕ ಮಟ್ಟಿಗೆ ಪರಿಹಾರ ಒದಗಿಸಲು ಶ್ರಮಿಸಲಾಗುವುದು ಎಂದರು. ಶಾಸಕರ ಆಪ್ತ ಸಹಾಯಕ ಮಾರುತಿ ಹಂಚಿನಮನಿ, ಪರಶುರಾಮ ರಜಪೂತ, ಅಶೋಕ ಆಡಿನವರ, ಚಂದ್ರಗೌಡ ಪಾಟೀಲ, ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು, ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮಾಹಿತಿ ಒದಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next