Advertisement
ಸಿನಿಮಾದ ಕಥಾಹಂದರದ ಬಗ್ಗೆ ಹೇಳುವುದಾದರೆ, ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಪುರಾತನ ಶಿಲ್ಪವೊಂದನ್ನು ಮಾರಾಟ ಮಾಡಲು ಹೊರಟಾಗ ಅದರ ಹಿಂದೆ ಬೀಳುವವರ ಮನಸ್ಥಿತಿ ಹೇಗಿರುತ್ತದೆ? ಹಣದ ಹಿಂದೆ ಬಿದ್ದವರ ಓಟ ಹೇಗಿರುತ್ತದೆ? ಕೋಟಿ ಕೋಟಿ ಲೂಟಿ ಮಾಡುವವರ ಪ್ಲಾನ್ ಏನು? ಅಂತಿಮವಾಗಿ ಅದರ ಪ್ರತಿಫಲ ಯಾರಿಗೆ ದಕ್ಕುತ್ತದೆ, ಯಾರೆಲ್ಲ ಅದಕ್ಕೆ ಪಾಲುದಾರರು ಅನ್ನೊದು ಕಥೆಯ ಒಂದು ಎಳೆ.
Related Articles
Advertisement
ಮಧ್ಯಮ ವರ್ಗದ ಕುಟುಂಬದ ಜವಾಬ್ದಾರಿಯುತ ಮಗನಾಗಿ ಯೋಗಿ ಅವರದ್ದು ಅಚ್ಚುಕಟ್ಟಾದ ಅಭಿನಯ. ಯೋಗಿ ಅಭಿನಯದಲ್ಲಿ ಒಂದಷ್ಟು ಪ್ರಬುದ್ದತೆ, ಸಹಜತೆ ಎರಡನ್ನೂ ಚಿತ್ರದಲ್ಲಿ ಕಾಣಬಹುದು. ಚಿತ್ರದಲ್ಲಿ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಇಲ್ಲದಿದ್ದರೂ, ಇರುವಷ್ಟು ಹೊತ್ತು ತನ್ನ ಲವಲವಿಕೆಯ ಪಾತ್ರದಲ್ಲಿ ಅದಿತಿ ಪ್ರಭುದೇವ ಇಷ್ಟವಾಗುತ್ತಾರೆ. ನಾಯಕ – ನಾಯಕಿಯನ್ನು ಹೊರತುಪಡಿಸಿ, ನೆಗೆಟೀವ್ ಶೇಡ್‌ನ ಪಾತ್ರದಲ್ಲಿ ಸಂಪತ್ ಇಡೀ ಸಿನಿಮಾದಲ್ಲಿ ನೋಡುಗರನ್ನು ಆವರಿಸಿಕೊಳ್ಳುತ್ತಾ ಹೋಗುತ್ತಾರೆ. ಹಣದ ಮೋಹದ ಬಲೆಯೊಳಗೆ ಸಿಲುಕಿ, ಪರಿಸ್ಥಿತಿಗೆ ತಕ್ಕಂತೆ ಕ್ರೌರ್ಯದ ಮುಖವನ್ನು ಅನಾವರಣಗೊಳಿಸುತ್ತ ಹೋಗುವ ಮಧ್ಯಮ ವಯಸ್ಕನಾಗಿ ಸಂಪತ್ ಅವರದ್ದು ಕಾಡುವಂಥ ಪಾತ್ರ. ಉಳಿದಂತೆ ಹಿರಿಯ ನಟ ಅಶೋಕ್, ಸಾಯಿಕುಮಾರ್, ಸುಂದರ್, ಮುನಿ ಅವರ ಪಾತ್ರಗಳೂ ಗಮನ ಸೆಳೆಯುತ್ತದೆ. ಇನ್ನು ಕೆಲವು ಪಾತ್ರಗಳು, ಹೆಚ್ಚು ಕಾಲ ತೆರೆಮೇಲೆ ಉಳಿಯದಿರುವುದರಿಂದ ಅವುಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ.
ಒಟ್ಟಾರೆ ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ “ಒಂಬತ್ತನೇ ದಿಕ್ಕು’ ಕನಿಷ್ಟ ಮನರಂಜನೆ ನೀಡುವ ಖಾತ್ರಿ ಕೊಡುತ್ತದೆ.
ಜಿ.ಎಸ್.ಕಾರ್ತಿಕ ಸುಧನ್