ಜಮ್ಮು-ಕಾಶ್ಮೀರ(Jammu Kashmir): ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯ ಮತಎಣಿಕೆ ನಡೆಯುತ್ತಿದ್ದು, 90 ಸದಸ್ಯ ಬಲದ ವಿಧಾನಸಭೆಯಲ್ಲಿ 49 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಎನ್ ಸಿ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದು, ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ. ಜಮ್ಮು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಓಮರ್ ಅಬ್ದುಲ್ಲಾ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ವರಿಷ್ಠ ಫಾರೂಖ್ ಅಬ್ದುಲ್ಲಾ ಮಂಗಳವಾರ (ಅ.08) ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಫಾರೂಖ್ ಅಬ್ದುಲ್ಲಾ, ರಾಜ್ಯದ ಮತದಾರರು ತಮ್ಮ ತೀರ್ಪನ್ನು ಕೊಟ್ಟಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ನಿರ್ಧಾರವನ್ನು ಜನರು ಒಪ್ಪಿಲ್ಲ ಎಂಬುದು ಈ ಫಲಿತಾಂಶ ಸಾಬೀತುಪಡಿಸಿದೆ. ಓಮರ್ ಅಬ್ದುಲ್ಲಾ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.
ಚುನಾವಣೆಯಲ್ಲಿ ಗೆಲುವು ನಮ್ಮದಾಗಿದೆ ಎಂದು ಓಮರ್ ಅಬ್ದುಲ್ಲಾ ಪ್ರತಿಕ್ರಿಯೆ ನೀಡಿದ್ದು, ನಾವು ಮತದಾರರಿಗೆ ಕೃತಜ್ಞರಾಗಿದ್ದೇವೆ. ನಮ್ಮ ನಿರೀಕ್ಷೆಗೂ ಮೀರಿ ಜನರನ್ನು ನಮ್ಮನ್ನು ಆಶೀರ್ವದಿಸಿದ್ದಾರೆ. ಈ ಮೂಲಕ ಸಂದೇಶ ರವಾನಿಸಿದಂತಾಗಿದೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಇದನ್ನೂ ಓದಿ:Haryana: ಕೇವಲ 210 ದಿನ ಸಿಎಂ ಆದರೂ ನಯಾಬ್ ಸಿಂಗ್ ಸೈನಿ ಹರ್ಯಾಣದ ʼನವಾಬʼನಾಗಿದ್ದು ಹೇಗೆ?
ಓಮರ್ ಅಬ್ದುಲ್ಲಾ ಎರಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬುಡ್ಗಾಮ್ ಮತ್ತು ಗಂದೇರ್ ಬಾಲ್ ನಲ್ಲಿ ಓಮರ್ ಅಖಾಡಕ್ಕಿಳಿದಿದ್ದರು. ಬುಡ್ಗಾಮ್ ನಲ್ಲಿ ಓಮರ್ 18,484 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಗಂದೇರ್ ಬಾಲ್ ನಲ್ಲೂ ಓಮರ್ ಮುನ್ನಡೆ ಸಾಧಿಸಿದ್ದಾರೆ.