ಶ್ರೀನಗರ : ‘ರಾಜಕೀಯ ಲಾಭಕ್ಕಾಗಿ ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿನ ಇತರ ಪಕ್ಷಗಳನ್ನು ಒಡೆಯಲು ಪ್ರಯತ್ನಿಸುತ್ತಿದೆ’ ಎಂದು ನ್ಯಾಶನಲ್ ಕಾನ್ಫರೆನ್ಸ್ ನಾಯಕ ಹಾಗೂ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ಆರೋಪಿಸಿದ್ದಾರೆ.
ಜಮ್ಮು ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ಕವೀ,ದರ್ ಗುಪ್ತಾ ಅವರು ನಿನ್ನೆ “ನಾವು ಏನನ್ನೋ ಮಾಡಲು ಹೊರಟಿದ್ದೇವೆ; ರಾಜ್ಯದ ಜನರು ಅದೇನೆಂಬುದನ್ನು ಬೇಗನೆ ತಿಳಿಯಲಿದ್ದಾರೆ’ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಉಮರ್ ಅಬ್ದುಲ್ಲ ಅವರು “ಬಿಜೆಪಿ ರಾಜ್ಯದಲ್ಲಿ ಹೊಸ ಸರಕಾರ ರಚಿಸುವ ನಿಟ್ಟಿನಲ್ಲಿ ಕುದುರೆ ವ್ಯಾಪಾರಕ್ಕೆ ಇಳಿಯುವಂತೆ ತೋರಿಬರುತ್ತಿದೆ; ರಾಜ್ಯದ ಇತರ ಪಕ್ಷಗಳನ್ನು ಒಡೆಯುವ ಹುನ್ನಾರ ಅದು ನಡೆಸುತ್ತಿದೆ” ಎಂದು ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಗೆ ಬಂದ ಒಂದು ದಿನದ ತರುವಾಯ ಹೇಳಿದರು.
ಆದರೆ ಕವೀಂದರ್ ಗುಪ್ತಾ ಅವರು ಮುಂದುವರಿದು, ‘ರಾಜ್ಯದಲ್ಲಿ ಸದ್ಯೋಭವಿಷ್ಯದಲ್ಲಿ ಯಾವುದೇ ಹೊಸ ಸರಕಾರ ರಚನೆಯಾದೀತೆಂದು ನಾನು ಭಾವಿಸುವುದಿಲ್ಲ; ಈಗ ತುಂಬ ಅನಿಶ್ಚಿತತೆ ಇದೆ; ಆದರೆ ನಾವು ಏನೋ ಒಂದು ಲೆಕ್ಕಾಚಾರಲ್ಲಿ ಇದ್ದೇವೆ; ಜನರು ಅದೇನೆಂಬುದನ್ನು ಶೀಘ್ರವೇ ತಿಳಿಯಲಿದ್ದಾರೆ’ ಎಂದು ಹೇಳಿದ್ದರು.
ಈ ಹೇಳಿಕೆಗಾಗಿ ಗುಪ್ತಾ ಮತ್ತು ಅವರ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಎನ್‌ಸಿ ನಾಯಕ, “ಏನನ್ನೋ ಮಾಡಲು ಹೊರಟಿದ್ದೇವೆ ಎಂಬುದರ ಅರ್ಥವೇನು ? ಇತರ ಪಕ್ಷಗಳನ್ನು ಒಡೆದು ಹೊಸ ಸರಕಾರ ರಚಿಸಲು ಅವಶ್ಯವಿರುವ ನಂಬರ್ ತಯಾರು ಮಾಡುವುದಲ್ಲದೇ ನಿಮ್ಮ ಹೇಳಿಕೆಗೆ ಬೇರೆ ಏನು ಅರ್ಥವಿದೆ; ಮಾಜಿ ಉಪ ಮುಖ್ಯಮಂತ್ರಿ ಅವರು ರಾಜ್ಯದ ರಾಜಕೀಯ ರಂಗದಲ್ಲಿ ಅಲ್ಲಸಲ್ಲದ್ದನ್ನು ಮಾಡಲು ಹೊರಟಿದ್ದಾರೆಯೇ ?’ ಎಂದು ಉಮರ್ ಅಬ್ದುಲ್ಲ ಪ್ರಶ್ನಿಸಿದರು.