ಮುಂಬಯಿ: ಜಗತ್ತಿನ ದಿವ್ಯ ಶಕ್ತಿಯೇ ಸೂರ್ಯ.ವರ್ಷದ ಆದಿಯಲ್ಲಿಯೇ, ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸೂರ್ಯ ದೇವನನ್ನು ಆರಾಧಿಸುವ ಹಿಂದೂ ಸಂಸ್ಕೃತಿಯ ವರ್ಷದ ಪ್ರಥಮ ಹಬ್ಬವೇ ಮಕರ ಸಂಕ್ರಾಂತಿ. ಆ ದಿನದಿಂದ ಆರಂಭವಾಗುವ ‘ಉತ್ತರಾಯಣ’ ಅನಾದಿಕಾಲದಿಂದಲೂ ಹಿಂದೂ ಧರ್ಮದಲ್ಲಿ ಶುಭ ದಿನಗಳೆಂದು ನಂಬಿಕೊಂಡು ಬಂದಿರುವೆವು. ಸಕಾರಾತ್ಮಕ ಗುಣಗಳನ್ನು ತಮ್ಮದಾಗಿಸಿಕೊಂಡು ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುವುದು ನಮ್ಮೆಲ್ಲರ, ವಿಶೇಷವಾಗಿ ಮಹಿಳೆಯರ ಆದ್ಯ ಕರ್ತವ್ಯವಾಗಿದೆ ಎಂದು ಓಂ ಶಕ್ತಿ ಮಹಿಳಾ ಸಂಸ್ಥೆಯ ಗೌರವಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ ಅವರು ನುಡಿದರು.
ಮಕರ ಸಂಕ್ರಾಂತಿಯ ಪ್ರಯುಕ್ತ ಓಂ ಶಕ್ತಿ ಮಹಿಳಾ ಸಂಸ್ಥೆಯ ವತಿಯಿಂದ ಜ. 15 ರಂದು ಹೊಟೇಲ್ ಸಾಗರ್ ಇಂಟರ್ ನ್ಯಾಷನಲ್ ಟೆರೇಸ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿದ್ದ ಅರಸಿನ ಕುಂಕುಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಕ್ಷಗಾನ ಕಲೆಯು ಇಂದು ಮುಂಬಯಿ ಮಹಾನಗರಿ ಮಾತ್ರವಲ್ಲದೆ, ಹೊರ ದೇಶದಲ್ಲಿಯೂ ಜನಪ್ರಿಯತೆ ಉಳಿಸಿಕೊಂಡು ಬಂದಿದ್ದು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಈ ಕಲೆಯಲ್ಲಿ ಅಭಿರುಚಿ ತೋರಿಸುತ್ತಿರುವುದು ಈ ಕಲೆಯ ಶ್ರೇಷ್ಟತೆಗೆ ನಿದರ್ಶನವಾಗಿದೆ ಎಂದು ನುಡಿದರು.
ಓಂ ಶಕ್ತಿ ಮಹಿಳಾ ಸಂಸ್ಥೆಯ ಅಧ್ಯಕ್ಷೆ ಹರಿಣಿ ಟಿ. ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ಹಿತ ಚಿಂತನೆಯೇ ಮೂಲ ಉದ್ದೇಶವಾಗಿರುವ ಓಂ ಶಕ್ತಿ ಸಂಸ್ಥೆಯು, ಅದರೊಟ್ಟಿಗೆ ಸದಸ್ಯೆಯರ ಕ್ರಿಯಾಶೀಲತೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯ ಈ ಶುಭ ದಿನದಂದು, ಧಾರ್ಮಿಕತೆಯ ಶುಭ ಸೂಚಕವಾದ ರಂಗೋಲಿ ಸ್ಪರ್ಧೆಯನ್ನು ನಮ್ಮ ಮಹಿಳೆಯರಿಗೆ ಏರ್ಪಡಿಸಿದ್ದೇವೆ. ನಮ್ಮ ಕರ್ಮ ಭೂಮಿ ಮಹಾರಾಷ್ಟ್ರ. ಈ ನೆಲದ ಋಣವನ್ನು ಸಹ ನಾವು ಪೂರೈಸುವುದು ನಮ್ಮೆಲ್ಲರ ಕರ್ತವ್ಯ. ಓಂ ಶಕ್ತಿಯ ಸಂಸ್ಥೆಯು ಈ ತಿಂಗಳಿನಲ್ಲಿ ಹಳ್ಳಿಯ ಆದಿವಾಸಿ ಜನಗಳ ಏಳಿಗೆಯನ್ನು ಬಯಸುತ್ತಾ ‘ಹಳ್ಳಿಯ ವಿಕಾಸ’ ಯೋಜನೆಯನ್ನು ಹಮ್ಮಿಕೊಂಡಿದೆ ಎಂದರು.
ಮುಂಬಯಿಯ ‘ಭ್ರಾಮರಿ ಯಕ್ಷಾ ನೃತ್ಯ ಕಲಾ ನಿಲಯ ಚಾರಿಟೆಬಲ್ ಟ್ರಸ್ಟ್’ನ ರೂವಾರಿ ಹಾಗೂ ±ಯಕ್ಷಗಾನ ತರಬೇತಿ ಗುರು ಸದಾನಂದ ಶೆಟ್ಟಿ ಕಟೀಲು ಇವರನ್ನು ಸಭೆಯಲ್ಲಿ ಗೌರವಿಸಲಾಯಿತು. ಅಂದು ನಡೆದ ರಂಗೋಲಿ ಸ್ಪರ್ಧೆಯಲ್ಲಿ, ನಮೃತಾ ಕೌಶಿಕ್ ಪ್ರಥಮ, ಯಶೋದಾ ಎಸ್. ಶೆಟ್ಟಿ ದ್ವಿತೀಯ ಮತ್ತು ಉಮಾ ನಾಯ್ಕ ತೃತೀಯ ಬಹುಮಾನಗಳನ್ನು ಪಡೆದರು. ಸಮಾಧಾನಕರ ಬಹುಮಾನಗಳನ್ನು ಸುಪ್ರೀತಾ ಎಂ. ಭಂಡಾರಿ ಮತ್ತು ಜಯಶ್ರೀ ಎಸ್. ಶೆಟ್ಟಿ ಪಡೆದರೆ, ಸುಚಿತಾ ವರ್ಮ, ಆಶಾ ನಾಯ್ಕ, ಶಾಶ್ವತಿ ಶೆಟ್ಟಿ ಮತ್ತು ನಂದಿತ ಕೌಶಿಕ್ ತೀರ್ಪುಗಾರರ ಮೆಚ್ಚುಗೆಯನ್ನು ಪಡೆದರು. ವಿಜೇತರೆಲ್ಲರಿಗೂ ಬಹುಮಾನಗಳನ್ನು ವಿತರಿಸಲಾಯಿತು.
ತೀರ್ಪುಗಾರರಾಗಿ ಶಿಕ್ಷಕಿ ಶಶಿ ಪಿ. ಶೆಟ್ಟಿ ಖಾಲ್ಸಾ ಕಾಲೇಜ್ ಮಾಟುಂಗ, ಚಿತ್ರಕಲಾ ಶಿಕ್ಷಕಿ ಆಶಾ ವಿ. ಶೆಟ್ಟಿ, ಶಿಕ್ಷಕಿ ಹರ್ಷಿತಾ ಎಸ್. ಶೆಟ್ಟಿ ಅವರು ಸಹಕರಿಸಿದರು. ಉಪಾಧ್ಯಕ್ಷೆ ಜ್ಯೋತಿ ಎಸ್. ಶೆಟ್ಟಿ, ಕೋಶಾಧಿಕಾರಿ ಸುರೇಶಾ ಎಚ್. ಶೆಟ್ಟಿ, ಜತೆ ಕೋಶಾಧಿಕಾರಿ ಕುಶಲಾ ಜಿ. ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂದಿನ ಕಾರ್ಯಕ್ರಮವನ್ನು ಕಾರ್ಯದರ್ಶಿ ರೂಪಾ ವೈ. ಶೆಟ್ಟಿ ಮತ್ತು ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ರೋಹಿಣಿ ಡಿ. ಶೆಟ್ಟಿ ಅವರು ನಿರ್ವಹಿಸಿದರು. ಆರಂಭದಲ್ಲಿ ಆಶಾ ನಾಯ್ಕ ಮತ್ತು ಉಮಾ ನಾಯ್ಕ ಪ್ರಾರ್ಥಿಸಿದರೆ, ಜತೆ ಕಾರ್ಯದರ್ಶಿ ಗ್ರೀಷ್ಮಾ ಪಿ. ಶೆಟ್ಟಿ ವಂದಿಸಿದರು.
ಮಹಿಳೆಯರಿಗೆ ಮತ್ತು ಮಕ್ಕಳಿಗೆ ಯಕ್ಷಗಾನ ಹೆಜ್ಜೆಯನ್ನು ಕಲಿಸುವ ಮೂಲಕ, ತರಬೇತಿ ಶಿಬಿರಕ್ಕೆ ಯಕ್ಷಗಾನ ಗುರು ಸದಾನಂದ ಶೆಟ್ಟಿ ಕಟೀಲು ಮುಹೂರ್ತವನ್ನು ನಡೆಸಿಕೊಟ್ಟರು. ಕೊನೆಯಲ್ಲಿ ಮಹಿಳೆಯರು ಪರಸ್ಪರ ಅರಸಿನ ಕುಂಕುಮ ಹಚ್ಚಿ, ಹೂ ನೀಡಿ, ಎಳ್ಳುಂಡೆ ಹಂಚಿ ಶುಭಹಾರೈಸಿಕೊಂಡರು.