Advertisement

ಹುಚ್ಚನ ಬೆನ್ನೇರಿದ ಓಂಪ್ರಕಾಶ್

04:10 PM Apr 06, 2018 | |

ನಿರ್ದೇಶಕ ಓಂಪ್ರಕಾಶ್‌ ರಾವ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಸಣ್ಣ ಗ್ಯಾಪ್‌ನಲ್ಲಿದ್ದ ಅವರೀಗ “ಹುಚ್ಚ 2′ ಮೂಲಕ ಹೊಸ ಇನ್ನಿಂಗ್ಸ್‌ಗೆ ರೆಡಿಯಾಗಿದ್ದಾರೆ. ಈ ವಾರ ರಾಜ್ಯಾದ್ಯಂತ ಚಿತ್ರ ತೆರೆಗೆ ಬರುತ್ತಿದ್ದು, ಓಂ ತಮ್ಮ ತಂಡದೊಂದಿಗೆ ಮಾಧ್ಯಮ ಎದುರು ಮಾತುಕತೆ ಶುರುವಿಟ್ಟುಕೊಂಡರು. “ಇದು ತಮಿಳಿನ “ರಾಮ್‌’ ಚಿತ್ರದ ರೀಮೇಕ್‌. ಕನ್ನಡಕ್ಕೆ ಮಾಡಿದರೆ ಚೆನ್ನಾಗಿರುತ್ತೆ ಎಂಬ ಕಾರಣಕ್ಕೆ ರಿಮೇಕ್‌ ಹಕ್ಕು ಪಡೆದು ಇಲ್ಲಿಗೆ “ಹುಚ್ಚ 2′ ಮಾಡಿದ್ದೇವೆ.

Advertisement

ಮೊದಲು ಆ ಪಾತ್ರಕ್ಕೆ ಕೃಷ್ಣ ಇದ್ದರೆ ಚೆನ್ನಾಗಿರುತ್ತೆ ಅಂದುಕೊಂಡೆವು. ಏಕೆಂದರೆ, ಒಂದು ಫ್ರೆಶ್‌ ಫೇಸ್‌ ಬೇಕಿತ್ತು. ಅವರು ಅಂತಿಮವಾಗಿ ಆಯ್ಕೆಯಾದರು. ತಾಯಿ ಪಾತ್ರ ಯಾರು ಮಾಡಬೇಕೆಂಬ ಗೊಂದಲವಿತ್ತು. ಅದಕ್ಕಾಗಿಯೇ ಒಂದು ವರ್ಷ ಕಾದಿದ್ದು ನಿಜ. ಕೊನೆಗೆ ಅವಿನಾಶ್‌ ಅವರು ಮಾಳವಿಕ ಮಾಡುತ್ತಾರೆ ಅಂದಾಗ, ಮೂಲ ತಮಿಳು ಚಿತ್ರದಲ್ಲಿ ಶರಣ್ಯ ಮಾಡಿದ ಪಾತ್ರವನ್ನೇ ಮಾಳವಿಕ ಬಿಟ್ಟಿದ್ದರು. ಇಲ್ಲಿ ಮಾಡುತ್ತಾರಾ ಎಂಬ ಪ್ರಶ್ನೆ ಇತ್ತು.

ಕೊನೆಗೆ ಒಪ್ಪಿದರು. ಚಿತ್ರ ಚೆನ್ನಾಗಿ ಬಂದಿದೆ. ಇಲ್ಲಿ ಸಾಯಿಕುಮಾರ್‌ ಜೊತೆಗೆ 17 ವರ್ಷಗಳ ಬಳಿಕ ಕೆಲಸ ಮಾಡಿದ್ದೇನೆ. ನಾಯಕಿ ವಿಚಾರದಲ್ಲೂ ಮಾತುಕತೆ ನಡೆದಿದ್ದವು. ಕೊನೆಗೆ ಶ್ರಾವ್ಯ ಅಂತಿಮವಾದರು. ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದಲ್ಲೊಂದು ಸ್ವಾಮೀಜಿ ಪಾತ್ರವಿತ್ತು. ಶ್ರೀನಿವಾಸಮೂರ್ತಿ ಒಮ್ಮೆ ಫೋನ್‌ ಮಾಡಿ, “ನಾನಿಲ್ವೇನಪ್ಪ’ ಅಂದ್ರು. ಸಣ್ಣ ಪಾತ್ರವದು ಹೇಗೆ ಕೊಡಲಿ ಅಂದೆ.

ಹೇಗಿದ್ದರೂ ಮಾಡ್ತೀನಿ ಅಂದ್ರು. ಸ್ವಾಮೀಜಿ ಪಾತ್ರ ಮಾಡಿದ್ದಾರೆ. ಚಿಕ್ಕ ಪಾತ್ರವಾದರೂ ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಂಗೀತ ಇಲ್ಲಿ ಪ್ರಮುಖವಾಗಿದೆ. ಅನೂಪ್‌ ಸೀಳಿನ್‌ ಅವರ ಕೆಲಸ ನೋಡಿದಾಗ, ನನಗೆ ಹಂಸಲೇಖ ಅವರ ನೆನಪಾಯಿತು. ಇನ್ನು, ಇಂಥದ್ದೊಂದು ಚಿತ್ರ ಮಾಡೋಕೆ ಮುಖ್ಯ ಕಾರಣ ನಿರ್ಮಾಪಕ ಉಮೇಶ್‌ ರೆಡ್ಡಿ. ಎಲ್ಲವನ್ನೂ ಕೊಟ್ಟು, ಅದ್ಧೂರಿ ಚಿತ್ರ ಆಗೋಕೆ ಕಾರಣವಾಗಿದ್ದಾರೆ ಅಂದರು ಓಂ ಪ್ರಕಾಶ್‌ರಾವ್‌.

ಮಾಳವಿಕ ಅವರಿಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. “ಕೃಷ್ಣ ಅವರಿಗೆ ಮುಂದೆ ಭವಿಷ್ಯವಿದೆ. ಪಾತ್ರ ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆ. ಓಂ ಅವರ ಜೊತೆ ಕೆಲಸ ಮಾಡಿದ್ದು ಖುಷಿಯಾಗಿದೆ. ಇಲ್ಲಿ ಎಲ್ಲಾ ವರ್ಗದವರಿಗೆ ಕಾಡುವ ಅಂಶಗಳಿವೆ. ಆಕ್ರೋಶ, ಸಿಟ್ಟು, ಪ್ರೀತಿ ಮತ್ತು ಭಾವನೆಗಳ ಕುರಿತಾದ ಚಿತ್ರವಿದು’ ಎಂದರು ಮಾಳವಿಕ.

Advertisement

ಅನೂಪ್‌ ಸೀಳಿನ್‌ ಅವರಿಗೆ ಓಂ ಪ್ರಕಾಶ್‌ರಾವ್‌ ಅವರ “ಎಕೆ 47′, “ಅಯ್ಯ’ ನೋಡಿದಾಗ, ಕೆರಿಯರ್‌ನಲ್ಲಿ ಅಂತಹ ನಿರ್ದೇಶಕರ ಜತೆ ಕೆಲಸ ಮಾಡುತ್ತೇನೆ ಅಂತ ಅಂದುಕೊಂಡಿರಲಿಲ್ಲವಂತೆ. ಹಂಸಲೇಖ ಅವರು “ಎಕೆ 47′ ಚಿತ್ರ ನೋಡಿ ಕಮರ್ಷಿಯಲ್‌ ನಿರ್ದೇಶಕರು ಅಂದರೆ ಹೀಗಿರಬೇಕು ಅಂತ ಹೇಳಿದಾಗಲೇ, ಓಂ ಅವರು ಎಂಥೆಂಥಾ ಚಿತ್ರ ಮಾಡಿದ್ದಾರೆ ಅಂತ ಅನೂಪ್‌ ತಿಳಿದುಕೊಂಡು, ಅವರ ಜೊತೆ ಕೆಲಸ ಮಾಡಲು ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದೇನೆ. ಇಲ್ಲಿ ಹೊಸ ಹಾಡುಗಳನ್ನು ಕೊಟ್ಟಿರುವುದಾಗಿ ಹೇಳಿಕೊಂಡರು.

ನಾಯಕ ಕೃಷ್ಣ ಅವರಿಗೆ ಮೊದಲು ಈ ಶೀರ್ಷಿಕೆ ಕೇಳಿ ಭಯ ಆಗಿತ್ತಂತೆ. “ಸುದೀಪ್‌ ಸಾರ್‌ ನಟಿಸಿದ ಚಿತ್ರದ ಹೆಸರಿನ ಚಿತ್ರವಾದ್ದರಿಂದ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂಬ ಎಚ್ಚರಿಕೆ ಮತ್ತು ನಿರ್ದೇಶಕರ ಬಗ್ಗೆ ಬೇರೆಯವರು ಹೇಳಿದ ಮಾತಿನ ಭಯವೂ ಇತ್ತಂತೆ. ಕೊನೆಗೆ ಸೆಟ್‌ನಲ್ಲಿ ನಿರ್ದೇಶಕರ ಜತೆ ಕೆಲಸ ಮಾಡಿದಾಗಲಷ್ಟೇ ಅವರು ಏನೆಂಬುದು ಗೊತ್ತಾಯ್ತು. ಇದು ನನಗೆ ಹೊಸ ಇಮೇಜ್‌ ತಂದುಕೊಡುವ ಚಿತ್ರವೆಂದೇ ನಂಬಿದ್ದೇನೆ’ ಎಂದರು ಕೃಷ್ಣ.

ನಿರ್ಮಾಪಕ ಉಮೇಶ್‌ ರೆಡ್ಡಿ ಅವರಿಗೆ ಸೆಂಟಿಮೆಂಟ್‌ ಚಿತ್ರ ಅಂದರೆ ಇಷ್ಟವಂತೆ. ಆ ಕಾರಣಕ್ಕೆ ಈ ಚಿತ್ರ ಕೈಗೆತ್ತಿಕೊಂಡಿದ್ದಾಗಿ ಹೇಳಿಕೊಂಡರು. ಇಲ್ಲಿ ಪ್ರತಿಯೊಬ್ಬರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಕನ್ನಡಕ್ಕೆ ಒಂದು ಹೊಸತನದ ಚಿತ್ರ ಇದಾಗಲಿದೆ. ಇಲ್ಲಿ ಸಾಕಷ್ಟು ಅಂಶಗಳಿವೆ. ಅವೆಲ್ಲವೂ ಪರಿಣಾಮಕಾರಿಯಾಗಿ ಬಂದಿವೆ ಎಂದರು ಉಮೇಶ್‌ ರೆಡ್ಡಿ.

Advertisement

Udayavani is now on Telegram. Click here to join our channel and stay updated with the latest news.

Next