Advertisement

ಹೆಪ್ಟಾತ್ಲಾನ್‌ ಸಾಧಕಿ ಅಕ್ಷತಾಗೆ ಒಲಿಂಪಿಕ್ಸ್‌  ಕನಸು

12:44 AM Oct 01, 2021 | Team Udayavani |

ಕಾರ್ಕಳ: ಅಂತಾರಾಷ್ಟ್ರೀಯ ಮುಕ್ತ ಹೆಪ್ಟಾತ್ಲಾನ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಗ್ರಾಮೀಣ ಪ್ರತಿಭೆ ಕಾರ್ಕಳದ ಕೆರ್ವಾಶೆಯ ಅಕ್ಷತಾ ಪೂಜಾರಿ ಅವರಿಗೆ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವ ಆಸೆ. ಆದರೆ ಅವರ ಈ ಆಸೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ.

Advertisement

ಕಾರ್ಕಳದ ಕೃಷಿಕ ಅಂಗು ಪೂಜಾರಿ, ಜಯಂತಿ ದಂಪತಿಯ ಏಳು ಪುತ್ರಿಯರಲ್ಲಿ ಅಕ್ಷತಾ ಕೊನೆಯವರು. ಕಷ್ಟದಿಂದಲೇ ಬೆಳೆದು ಬಂದಿರುವ ಅವರು ಮನೆಯಲ್ಲಿ ಬಡತನವಿದ್ದರೂ ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಆದಮ್ಯ ಉತ್ಸಾಹ ಅವರನ್ನು ಇಷ್ಟು ಎತ್ತರಕ್ಕೆ ಏರಿಸಿದೆ.

ಕಳೆದ ಎಂಟು ವರ್ಷಗಳಿಂದ ಹೆಪ್ಟಾತ್ಲಾನ್‌ ಕ್ರೀಡೆಯಲ್ಲಿ ಅಸಾಮಾನ್ಯ ಸಾಧನೆ ಮಾಡುತ್ತಿರುವ ಅಕ್ಷತಾ ರಾಷ್ಟ್ರಮಟ್ಟದಲ್ಲಿ 9 ಬಾರಿ ಸ್ಪರ್ಧಿಸಿ ಮೂರು ಬಾರಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ರಾಜ್ಯಮಟ್ಟದಲ್ಲಿ 25 ಬಾರಿ ಪದಕ ಗೆದ್ದು ಮಿಂಚಿದ್ದಾರೆ. ಸೆ. 19ರಂದು ವಾರಂಗಲ್‌ನಲ್ಲಿ ನಡೆದ ರಾಷ್ಟ್ರೀಯ ಹೆಪ್ಟಾತ್ಲಾನ್‌ನಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ. ಒಂದು ಕಡೆ ಪದಕ ಗೆದ್ದ ಸಂಭ್ರಮವಿದ್ದರೂ ಮನೆಯಲ್ಲಿನ ಬಡತನದಿಂದ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಯೇ ಅವರ ಸಾಧನೆಗೆ ಎಲ್ಲಿ ಆಡ್ಡಿಯಾಗುತ್ತೋ ಎಂಬ ಭಯ ಅವರನ್ನು ಕಾಡುತ್ತಿದೆ. ಇದರಿಂದ ಉನ್ನತ ಸಾಧನೆ ಮಾಡುವ ಅವರ ಧೈರ್ಯವನ್ನು ಕುಂದುವಂತೆ ಮಾಡಿದೆ.

ಹುಟ್ಟೂರು ಕೆರ್ವಾಶೆ ಬಂಗ್ಲೆಗುಡ್ಡೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪದವಿ ಪೂರೈಸಿದ್ದಾರೆ. ಸದ್ಯ ಧಾರವಾಡದ ಜಿಕೆಎ ಕಾನೂನು ಕಾಲೇಜಿನಲ್ಲಿ  ಕಲಿಯುತ್ತಿರುವ ಅವರು ಜತೆಗೆ ಗಣೇಶ್‌ ನಾಯಕ್‌ ಅವರಲ್ಲಿ ಕ್ರೀಡಾ ತರಬೇತಿಯನ್ನು ಪಡೆಯುತ್ತಿದ್ದಾರೆ. ಹೆಪ್ಲಾತ್ಲಾನ್‌ನಲ್ಲಿ ಉತ್ತಮ ಸಾಧನೆಗೈಯುತ್ತಿರುವ ಅವರಿಗೆ ಯಾವುದೇ ಸ್ಕಾಲರ್‌ಶಿಪ್‌ ಲಭಿಸಿಲ್ಲ. ಸರಕಾರ, ದಾನಿಗಳು ಆರ್ಥಿಕ ನೆರವು ನೀಡಿದರೆ ಅವರು  ಈ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡುವ ಸಾಧ್ಯತೆಯಿದೆ. ಆರ್ಥಿಕ ನೆರವಿನ ನಿರೀಕ್ಷೆಯಲ್ಲಿರುವ ಅವರಿಗೆ ಒಲಿಂಪಿಕ್ಸ್‌ ನಲ್ಲಿ ದೇಶವನ್ನು ಪ್ರತಿನಿಧಿಸುವ ಹಂಬಲವೂ ಇದೆ.

ಹೆಪ್ಟಾತ್ಲಾನ್‌ ಸ್ಪರ್ಧೆ ಹೀಗಿದೆ :

Advertisement

ಮಹಿಳೆಯರ ವಿಭಾಗದಲ್ಲಿ ನಡೆಯುವ ಈ ಸ್ಪರ್ಧೆ ಒಟ್ಟು ಏಳು ವಿಭಾಗಗಳಲ್ಲಿ (100 ಮೀ. ಹರ್ಡಲ್ಸ್‌, ಹೈಜಂಪ್‌, ಶಾಟ್‌ಪುಟ್‌, 200 ಮೀ., ಲಾಂಗ್‌ಜಂಪ್‌, ಜಾವೆಲಿನ್‌, 800 ಮೀ.) ನಡೆಯಲಿದೆ. ಪ್ರತಿಯೊಂದು ವಿಭಾಗದ ಸ್ಪರ್ಧೆಗೆ ಅಂಕಗಳನ್ನು ನೀಡಲಾಗುತ್ತದೆ. ಗರಿಷ್ಠ ಅಂಕ ಗಳಿಸುವ ಸ್ಪರ್ಧಿ ವಿಜೇತರಾಗುತ್ತಾರೆ.

ಭೇಟಿಯಾಗಲು ಮನವಿ ಮಾಡುವೆ:

ಗ್ರಾಮೀಣ ಪ್ರತಿಭೆಯ ಸಾಧನೆಯ ವಿಷಯ ಕೇಳಿ ಅತೀವ ಸಂತಸವಾಗಿದೆ.  ಕೇಂದ್ರ ಮತ್ತು ರಾಜ್ಯ ಫ‌ಂಡ್‌  ಬಳಸಿ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ  ಸುಮಾರು 75 ಕ್ರೀಡಾಪಟು ಗಳನ್ನು ಕಳುಹಿಸಿ ಕೊಡುವ  ಚಿಂತನೆ ನಡೆಸುತ್ತಿದ್ದೇವೆ. ಆ ಪಟ್ಟಿಯಲ್ಲಿ ಈಕೆಗೂ ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗುವುದು. ಸಾಧಕಿ ಅಕ್ಷತಾ ಶೀಘ್ರ ತನ್ನನ್ನು  ಭೇಟಿಯಾಗುವಂತೆ ಮನವಿ ಮಾಡುತ್ತೇನೆ.–  ಕೆ.ಸಿ  ನಾರಾಯಣ ಗೌಡ, ಕ್ರೀಡಾ ಸಚಿವ

ನಾನು ಓಡುವುದನ್ನೇ ಅಪ್ಪ ಅಮ್ಮ ನೋಡಿಲ್ಲ  :

ಕ್ರೀಡೆಯಲ್ಲಿ  ಉನ್ನತ ಸಾಧನೆ ಮಾಡಬೇಕು. ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸ ಬೇಕೆಂಬ ಆಸೆ ಯಿದೆ. ಆದರೆ ಬಡತನದಿಂದಾಗಿ ಕ್ರೀಡೆಯ ತಯಾರಿಗೆ, ಖರ್ಚು ಭರಿಸುವಷ್ಟು ಶಕ್ತಿ ಇಲ್ಲ.  ಬಸ್‌ ಪ್ರಯಾಣದ ಖರ್ಚು ಭರಿಸಲು ಕಷ್ಟವಾಗುತ್ತಿದೆ. ಕ್ರಿಡಾಭಿಮಾನಿ ಗಳು ಸಹಕರಿಸಿದರೆ ಮತ್ತಷ್ಟು ಸಾಧನೆ ಮಾಡಲು ಪ್ರಯತ್ನಿ ಸುವೆ. ಬಡತನವಿದ್ದರೂ ಕಷ್ಟಪಟ್ಟು  ನನ್ನ ಕ್ರೀಡಾ ಪ್ರತಿಭೆಯನ್ನು ಪೋಷಿಸಿ ಬೆಳೆಸಿದ್ದ ತಂದೆ ತಾಯಿ ಯವರು ನಾನು ಕ್ರೀಡಾಂಗಣದಲ್ಲಿ ಓಡುವುದನ್ನು ಕಣ್ಣಾರೆ ನೋಡಬೇಕೆಂಬ ಆಸೆಯೂ ಇದೆ. ಅಂತಹ ದಿನಗಳನ್ನು ಎದುರು ನೋಡುತ್ತಿದ್ದೇನೆ.ಅಕ್ಷತಾ ಪೂಜಾರಿ, ಹೆಪಾrತ್ಲಾನ್‌ ಓಟಗಾರ್ತಿ

 

ಬಾಲಕೃಷ್ಣ  ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next